ಚಿಕನ್ ಇಲ್ಲದ ಬಿರಿಯಾನಿ ನೀಡಿದ ತಪ್ಪಿಗೆ 1000 ರೂ. ದಂಡ ಕಟ್ಟಿದ ಹೋಟೆಲ್ ಮಾಲಿಕ
ಬೆಂಗಳೂರಿನ ನಾಗರಬಾವಿ ನಿವಾಸಿಯಾದ ಕೃಷ್ಣಪ್ಪ ಎಂಬುವರ ಮನೆಯಲ್ಲಿ ಅಡುಗೆ ಅನಿಲ ಕಾಲಿಯಾಗಿತ್ತು. ಹೀಗಾಗಿ ದಂಪತಿ ಹತ್ತಿರದ ಹೋಟೆಲ್ಗೆ ಹೋಗಿ 150 ರೂ. ಕೊಟ್ಟು ಚಿಕನ್ ಬಿರಿಯಾನಿಯನ್ನು ಪಾರ್ಸೆಲ್ ತಂದರು. ಮನೆಯಲ್ಲಿ ಪಾರ್ಸೆಲ್ ತೆರೆದು ನೋಡಿದಾಗ ಸಾದಾ ಬಿರಿಯಾನಿ ಇತ್ತು. ಇದರಿಂದ ಬೇಸರಗೊಂಡ ಕೃಷ್ಣಪ್ಪ ಅವರು ಮುಂದೇನು ಮಾಡಿದರು? ಈ ಸ್ಟೋರಿ ಓದಿ...
ಬೆಂಗಳೂರು, ಡಿಸೆಂಬರ್ 05: ಚಿಕನ್ ಇಲ್ಲದ ಬಿರಿಯಾನಿ (Chicken Biryani) ನೀಡಿದ ತಪ್ಪಿಗಾಗಿ 1000 ರೂ. ಪರಿಹಾರ ಮತ್ತು 150 ರೂ. ಬಿರಿಯಾನಿ ಹಣವನ್ನು ಗ್ರಾಹಕನಿಗೆ ನೀಡುವಂತೆ ಹೋಟೆಲ್ (Hotel) ಮಾಲಿಕನಿಗೆ ಗ್ರಾಹಕರ ನ್ಯಾಯಾಲಯ (Consumer Court) ಆದೇಶ ನೀಡಿದೆ. ಏಪ್ರಿಲ್ 2, 2023 ರಂದು ನಾಗರಭಾವಿ ನಿವಾಸಿ ಕೃಷ್ಣಪ್ಪ ಎಂಬುವರ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾಯಿತು. ಹೀಗಾಗಿ ದಂಪತಿಗಳು ಐಟಿಐ ಲೇಔಟ್‌ನಲ್ಲಿರುವ ಹೋಟೆಲ್ ಪ್ರಶಾಂತ್‌ಗೆ ತೆರಳಿದರು. ಹೋಟೆಲ್ನಲ್ಲಿ 150 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಖರೀದಿಸಿದರು. ದಂಪತಿ ಮನೆಗೆ ಬಂದು ಪಾರ್ಸೆಲ್ ತೆರೆದು ನೋಡಿದಾಗ ಬಿರಿಯಾನಿಯಲ್ಲಿ ಒಂದು ಚೂರು ಮಾಂಸ ಇರಲಿಲ್ಲ.
ಕೂಡಲೇ ಕೃಷ್ಣಪ್ಪ ಅಂಗಡಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚಿಕನ್ ಬಿರಿಯಾನಿಗೆ ಹಣ ಕೊಟ್ಟರೂ ಸಾದಾ ಬಿರಿಯಾನಿ ಕೊಡಲಾಗಿದೆ ಎಂದು ತಿಳಿಸಿದರು. ಆಗ ಹೊಟೇಲ್ ಮಾಲಿಕ, ಚಿಕನ್ ಬಿರಿಯಾನಿಯ ಪಾರ್ಸೆಲ್ ಸಿದ್ಧವಾಗಿದೆ 30 ನಿಮಿಷಗಳಲ್ಲಿ ನಿಮ್ಮ ನಿವಾಸದ ವಿಳಾಸಕ್ಕೆ ಕಳುಹಿಸಲಾಗುವುದು ಎಂದು ಹೇಳಿದನು. ಎರಡು ಗಂಟೆಗಳ ಕಾಯ್ದರೂ, ಚಿಕನ್ ಬಿರಿಯಾನಿ ಬರಲಿಲ್ಲ. ದಂಪತಿಗಳು ವಿಧಿ ಇಲ್ಲದೆ ರಾತ್ರಿ ಸಾದಾ ಬಿರಿಯಾನಿಯನ್ನೇ ತಿಂದು ಮಲಗಿದರು.
ಇದನ್ನೂ ಓದಿ: ಮದುವೆ ಫೋಟೋ ಕೊಡದ ಫೋಟೊಗ್ರಾಫರ್ಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ
ಬಳಿಕ ಕೃಷ್ಣಪ್ಪ ಅವರು ಏಪ್ರಿಲ್ 28, 2023 ರಂದು ಹೋಟೆಲ್ ಮಾಲಿಕನಿಗೆ ತಾನು (ಕೃಷ್ಣಪ್ಪ) ಕಾನೂನು ಮೊರೆ ಹೋಗುವುದಾಗಿ ಸೂಚನೆ ನೀಡಿದರು. ಇದಕ್ಕೆ ಹೋಟೆಲ್ ಮಾಲಿಕ ಅದು ಪ್ರತಿಕ್ರಿಯೆಯನ್ನು ನೀಡಲಿಲ್ಲ. ನಂತರ ಕೃಷ್ಣಪ್ಪ ಅವರು ಮೇ ತಿಂಗಳಿನಲ್ಲಿ ಶಾಂತಿನಗರದಲ್ಲಿರುವ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಹೋಟೆಲ್ ಮಾಲಿಕರ ವಿರುದ್ಧ ದೂರು ದಾಖಲಿಸಿದರು. 30,000 ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ಪ್ರಕರಣವನ್ನು ಕೃಷ್ಣಪ್ಪ ಅವರು ತಾವೇ ನ್ಯಾಯಾಲಯದಲ್ಲಿ ವಾದಿಸಿದರು. ಆದರೆ ಹೋಟೆಲ್ ಮಾಲಿಕರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ನ್ಯಾಯಾಲಯವು ಕೃಷ್ಣಪ್ಪ ವಾದವನ್ನು ಆಲಿಸಿ ಮತ್ತು ನೀಡಿದ ಸಾಕ್ಷಾಧಾರವನ್ನು ಪರಿಶೀಲಿಸಿ ಅಕ್ಟೋಬರ್ 5, 2023 ರಂದು ತೀರ್ಪು ನೀಡಿತು.
ಹೋಟೆಲ್ ತಿಳಿದೋ ತಿಳಿಯದೆಯೋ ತಪ್ಪು ಮಾಡಿರುವುದು ಸ್ಪಷ್ಟವಾಗಿದೆ. ಹೋಟೆಲ್ ಗ್ರಾಹಕರಿಂದ ಚಿಕನ್ ಬಿರಿಯಾನಿಗೆ 150 ರೂ. ಪಡೆದು ತಪ್ಪಾದ ಪಾರ್ಸೆಲ್ ಅನ್ನು ನೀಡಿದೆ. ಇದು ಅನ್ಯಾಯ. ಅಲ್ಲದೆ ತಮ್ಮ ತಪ್ಪಿನ ಬಗ್ಗೆ ಹೋಟೆಲ್ಗೆ ಎಚ್ಚರಿಕೆ ನೀಡಿದರೂ ಬದಲಿ ಪಾರ್ಸಲ್ ಅನ್ನು ನೀಡದೆ ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಹೋಟೆಲ್ ವಿಫಲವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ