ದಿನದ 24 ಗಂಟೆ ಹೊಟೇಲ್ ತೆರೆಯಲು ಅನುಮತಿ ನೀಡುವಂತೆ ಡಿಸಿಎಂಗೆ ಹೊಟೇಲ್ ಮಾಲೀಕರ ಸಂಘ ಮನವಿ
ದಿನದ 24 ಗಂಟೆಯೂ ಹೊಟೇಲ್ಗಳನ್ನು ತೆರೆಯಲು ಅನುಮತಿ ನೀಡುವಂತೆ ಬೆಂಗಳೂರು ಹೊಟೇಲ್ ಮಾಲೀಕರ ಸಂಘವು ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದೆ.
ಬೆಂಗಳೂರು: ಪ್ರವಾಸೋದ್ಯಮದ ಜೊತೆಗೆ ಹೊಟೇಲ್ ಉದ್ಯಮಕ್ಕೂ ಒತ್ತು ಕೊಟ್ಟು ದಿನದ 24 ಗಂಟೆಗಳ ಕಾಲ ಹೊಟೇಲ್ಗಳನ್ನು ತೆರೆಯಲು ಅನುಮತಿ ನೀಡುವಂತೆ ಬೆಂಗಳೂರು ಹೊಟೇಲ್ ಮಾಲೀಕರ ಸಂಘವು (Bengaluru Hotel Owners Association) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಮನವಿ ಮಾಡಿದೆ. ಇದರ ಜೊತೆಗೆ ನಮ್ಮ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನಗಳನ್ನು ನೀಡುವಂತೆಯೂ ಕೋರಿದೆ.
ಹೊಟೇಲ್ ಒಂದು ಅಪರೂಪದ ವಿಶೇಷವಾದ ಉದ್ಯಮವಾಗಿದ್ದು, ಅವಿದ್ಯಾವಂತಿರಿಗೆ ಉದ್ಯೋಗ ಕೊಡುತ್ತಿರುವುದರ ಜೊತೆಗೆ ರೈತರು ಬೆಳೆಯುವ ಪದಾರ್ಥಗಳನ್ನು ಹೆಚ್ಚಿಗೆ ಖರೀದಿಸಿ ಪ್ರೋತ್ಸಾಹಿಸುತ್ತಾ ಬಂದಿದೆ. ಇದರ ಜೊತೆಗೆ ಜನಸಾಮಾನ್ಯರಿಗೆ ಉಚಿತವಾಗಿ ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯವನ್ನೂ ಒದಗಿಸುತ್ತಿದೆ. ಇದರ ಜೊತೆಗೆ ಕೆಲವೊಂದು ಸಮಸ್ಯೆಗಳಿದ್ದು, ಅವುಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಸಂಘವು ಮನವಿ ಮಾಡಿದೆ.
ಇದನ್ನೂ ಓದಿ: ವಿಧಾನಸೌಧದ ಮೊದಲ ಮಹಡಿಯಲ್ಲಿ ಕಚೇರಿ ಹುಡುಕುತ್ತಿರುವ ಡಿಕೆ ಶಿವಕುಮಾರ್; ಏನಿದರ ಮರ್ಮ?
ಹೊಟೇಲ್ ಉದ್ಯಮಕ್ಕೆ ದಿನದ 24 ಗಂಟೆಗಳ ಕಾಲ ತೆರೆಯಲು ಅನುಮತಿ ನೀಡಬೇಕು. ಇದರಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಆಟೋ ಮತ್ತು ಟ್ಯಾಕ್ಸಿ ಚಾಲಕರು ಮುಂತಾಂದ ಅಗತ್ಯ ಸೇವೆಯಡಿ ಕಾರ್ಯನಿರ್ವಹಿಸುತ್ತಿರುವವರಿಗೆ ಅನುಕೂಲವಾಗಲಿದೆ. ಇದಲ್ಲದೆ ಬಹಳಷ್ಟು ಪ್ರವಾಸಿಗರು ಬಸ್, ರೈಲು ಮತ್ತು ವಿಮಾನದ ಮೂಲಕ ರಾತ್ರಿ ಬಂದಿಳಿಯುತ್ತಾರೆ. ಇವರಿಗೂ ಉಪಯುಕ್ತವಾಗಲಿದೆ. ಇವರಿಗೆ ಅಗತ್ಯ ನೀರು ಹಾಗೂ ಶೌಚಾಲಯ ವ್ಯವಸ್ಥೆ ಕೂಡ ಸಿಗಲಿದೆ ಎಂದು ಸಂಘವು ತಿಳಿಸಿದೆ.
ಅಲ್ಲದೆ, ಹೊಟೇಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನಗಳನ್ನು ನೀಡಬೇಕಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟು ನಮ್ಮ ರಾಜ್ಯದಲ್ಲಿ ಇದರ ಬೆಳವಣಿಗೆಯಾಗಬೇಕಾಗಿದೆ. ಉದ್ಯಮಿಯಾಗು, ಉದ್ಯೋಗ ಕೊಡು ಎನ್ನುವ ಮಾತು ಕಾರ್ಯಗತವಾಗಲು ನಮ್ಮ ವಿಚಾರಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡು ಸಹಕರಿಸಬೇಕು ಎಂದು ಹೊಟೇಲ್ ಮಾಲೀಕರ ಸಂಘದ ಪದಾಧಿಕಾರಿಗಳು ಡಿಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ