ವಿಧಾನಸೌಧದ ಮೊದಲ ಮಹಡಿಯಲ್ಲಿ ಕಚೇರಿ ಹುಡುಕುತ್ತಿರುವ ಡಿಕೆ ಶಿವಕುಮಾರ್; ಏನಿದರ ಮರ್ಮ?
ವರದಿಗಳ ಪ್ರಕಾರ, ವಿಧಾನಸೌಧದ ಮೊದಲ ಮಹಡಿಯಲ್ಲಿ ಅಧಿವೇಶನ ಸಭಾಂಗಣದ ಬಳಿ ಮುಖ್ಯಮಂತ್ರಿ ಕಚೇರಿಯಂತೆಯೇ ಇರುವ ಕಚೇರಿ ಕೊಠಡಿಯನ್ನು ಗುರುತಿಸುವಂತೆ ಶಿವಕುಮಾರ್ ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಿಕೆ ಶಿವಕುಮಾರ್ (DK Shivakumar) ಅವರು ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಆದೇಶದ ಮೇರೆಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ, ಅಂದಿನಿಂದಲೂ ಅವರು ಮುಖ್ಯಮಂತ್ರಿ ಹುದ್ದೆಗೆ ತಾವು ಸೂಕ್ತ ಎಂದು ಸಮರ್ಥಿಸಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿರುವುದು ಬಹಿರಂಗಗೊಂಡಿದೆ. ಇತ್ತೀಚಿನ ನಡೆಯೊಂದರಲ್ಲಿ, ಶಿವಕುಮಾರ್ ಅವರು ಮುಖ್ಯಮಂತ್ರಿಗಳಿಗೆ ಮಾತ್ರ ಸಿಗುವ ಕೆಲವು ಸವಲತ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ವಿಧಾನಸೌಧದ ಮೊದಲ ಮಹಡಿಯಲ್ಲಿ ಅಧಿವೇಶನ ಸಭಾಂಗಣದ ಬಳಿ ಮುಖ್ಯಮಂತ್ರಿ ಕಚೇರಿಯಂತೆಯೇ ಇರುವ ಕಚೇರಿ ಕೊಠಡಿಯನ್ನು ಗುರುತಿಸುವಂತೆ ಶಿವಕುಮಾರ್ ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧದ ಪಶ್ಚಿಮ ದ್ವಾರದಿಂದ ಪ್ರವೇಶಿಸಿದರೆ ಬಲಭಾಗದಲ್ಲಿ ಕೊಠಡಿ ಇದೆ. ಅಧಿವೇಶನ ನಡೆಯುತ್ತಿರುವಾಗ ಈ ಕೊಠಡಿಯನ್ನು ಮುಖ್ಯಮಂತ್ರಿ ಬಳಸುತ್ತಾರೆ.
ಇದೀಗ ಶಿವಕುಮಾರ್ ಅವರು ತಮ್ಮ ಸಿಬ್ಬಂದಿ ಬಳಿ ಕಚೇರಿ ಕೊಠಡಿ ಗುರುತಿಸಿ, ಮಂಜೂರು ಮಾಡಿಸುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಕೊಠಡಿ ಪ್ರಸ್ತುತ ಮೊದಲ ಮಹಡಿಯಲ್ಲಿ ವಿಧಾನಸೌಧದ ಪಶ್ಚಿಮ ಪ್ರವೇಶದ ಬಲಭಾಗದಲ್ಲಿದೆ. ಈಗ ಉಪ ಮುಖ್ಯಮಂತ್ರಿ ಎಡಭಾಗದಲ್ಲಿ ಕೊಠಡಿ ಹುಡುಕುತ್ತಿದ್ದಾರೆ.
ಇದನ್ನೂ ಓದಿ: ತೆಲಂಗಾಣದ ಜನರ ಶಕ್ತಿ ಯಾವಾಗಲೂ ಭಾರತದ ಶಕ್ತಿಯನ್ನು ಹೆಚ್ಚಿಸಿದೆ: ಪ್ರಧಾನಿ ಮೋದಿ
ಈ ಹಿಂದೆ ಯಾವ ಉಪಮುಖ್ಯಮಂತ್ರಿಗಳಿಗೂ ಮೊದಲ ಮಹಡಿಯಲ್ಲಿ ಪ್ರತ್ಯೇಕ ಕೊಠಡಿ ಇರಲಿಲ್ಲ. ವರದಿಗಳ ಪ್ರಕಾರ, ಶಿವಕುಮಾರ್ ಅವರ ಸಿಬ್ಬಂದಿ ಒಂದು ಕೊಠಡಿಯನ್ನು ಖಾಲಿ ಮಾಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ಸಂದರ್ಭದಲ್ಲೇ ಅದನ್ನು ಉಪ ಮುಖ್ಯಮಂತ್ರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ