
ಬೆಂಗಳೂರು, ಡಿಸೆಂಬರ್ 17: ಬೆಂಗಳೂರಿನ (Bangalore) ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಅವರಿಗೆ ಮಹಿಳೆಯೊಬ್ಬರ ಅತಿರೇಕದ ಪ್ರೇಮ ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ‘‘Chinni Love u… u must love me’’ ಎಂದು ಪ್ರೀತಿ ನಿವೇದನೆ ಮಾಡುತ್ತಾ ಮಹಿಳೆ ನಿರಂತರವಾಗಿ ಇನ್ಸ್ಪೆಕ್ಟರ್ ಹಿಂದೆ ಬಿದ್ದಿದ್ದಳು ಎಂಬ ಆರೋಪ ಕೇಳಿಬಂದಿದೆ. ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ ಮಹಿಳೆ, ತಾನು ಕಾಂಗ್ರೆಸ್ ಕಾರ್ಯಕರ್ತೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ತನಗೆ ಪರಿಚಯ ಎಂದು ಹೇಳಿಕೊಂಡಿದ್ದಾಳೆ. ಮೋಟಮ್ಮ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಇರುವ ಫೋಟೋಗಳನ್ನು ಕಳುಹಿಸಿ, ಪ್ರೀತಿಸಲೇಬೇಕು ಎಂದು ಇನ್ಸ್ಪೆಕ್ಟರ್ ಮೇಲೆ ಒತ್ತಡ ಹೇರಿದ್ದಾಳೆ ಎಂದು ದೂರಲಾಗಿದೆ.
ಮಹಿಳೆಯ ಕಾಟ ಎಷ್ಟರ ಮಟ್ಟಿಗೆ ಹೋಗಿತ್ತು ಎಂದರೆ, ಇನ್ಸ್ಪೆಕ್ಟರ್ ಠಾಣೆಯಲ್ಲಿ ಇಲ್ಲದ ವೇಳೆ ಕಜ್ಜಾಯದ ಡಬ್ಬಿ, ಹೂಗುಚ್ಛ ತಂದು ಠಾಣೆಯಲ್ಲೇ ಇಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಒಂದೇ ಅಲ್ಲ, ಬರೋಬ್ಬರಿ 11 ವಿಭಿನ್ನ ಮೊಬೈಲ್ ಸಂಖ್ಯೆಗಳ ಮೂಲಕ ಇನ್ಸ್ಪೆಕ್ಟರ್ಗೆ ಕರೆ ಮಾಡಿ ಪ್ರೀತಿ ನಿವೇದನೆ ಮಾಡುತ್ತಿದ್ದಳು. ಈ ಕಾರಣಕ್ಕೆ ಇನ್ಸ್ಪೆಕ್ಟರ್ ಎಲ್ಲಾ 11 ಸಂಖ್ಯೆಗಳನ್ನೂ ಬ್ಲಾಕ್ ಮಾಡಿದ್ದರು.
ಅಷ್ಟಕ್ಕೂ ನಿಲ್ಲದ ಮಹಿಳೆ, ಲವ್ ಲೆಟರ್ ಜೊತೆಗೆ ‘Nexito Plus’ ಎಂಬ ಮಾತ್ರೆಯನ್ನು ಕೂಡ ಕಳುಹಿಸಿದ್ದಳು. ‘ನನ್ನ ಪ್ರೀತಿಯನ್ನು ನೀವು ಒಪ್ಪಿಕೊಳ್ಳುತ್ತಿಲ್ಲ, ನಿಮಗೆ ತೊಂದರೆ ಕೊಡಲು ನನಗೆ ಇಷ್ಟವಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ನೀವೇ ಕಾರಣ’ ಎಂದು ಬರೆದು, ಹೃದಯದ ಚಿತ್ರವನ್ನೂ ಬಿಡಿಸಿ, ‘‘Chinni love u, u love m’’ ಎಂದು ರಕ್ತದಲ್ಲಿ ಬರೆದ ಪತ್ರವನ್ನು ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ ಎಂಬುದು ಮತ್ತೊಂದು ಗಂಭೀರ ಆರೋಪವಾಗಿದೆ.
ಈ ಮಧ್ಯೆ, ಮಹಿಳೆ ದೂರು ನೀಡಲು ಬಂದಿದ್ದು ಅದನ್ನು ಸ್ವೀಕರಿಸುವಂತೆ ಗೃಹ ಸಚಿವರ ಕಚೇರಿಯಿಂದಲೂ ಕರೆ ಬಂದಿತ್ತು ಎನ್ನಲಾಗಿದೆ. ಆದರೆ, ಮಹಿಳೆ ಯಾವುದೇ ಅಧಿಕೃತ ದೂರು ನೀಡಿಲ್ಲ ಎಂದು ಇನ್ಸ್ಪೆಕ್ಟರ್ ಸ್ಪಷ್ಟಪಡಿಸಿದ್ದರು.
ಕೊನೆಗೆ ಮಹಿಳೆಯ ನಿರಂತರ ಕಾಟದಿಂದ ಬೇಸತ್ತ ಇನ್ಸ್ಪೆಕ್ಟರ್ ಸತೀಶ್ ಕಾನೂನು ಕ್ರಮದ ಮೊರೆ ಹೋಗಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಆತ್ಮಹತ್ಯೆ ಬೆದರಿಕೆ ಆರೋಪದಡಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಯುವತಿ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ಉಡುಪಿಯಲ್ಲಿ ಸಿಡಿದೆದ್ದ ಬಿಲ್ಲವ ಸಮುದಾಯ, ಏನಿದು ಕೇಸ್?
ಪ್ರಕರಣ ಇದೀಗ ಪೊಲೀಸ್ ತನಿಖೆಯಲ್ಲಿದ್ದು, ಮಹಿಳೆಯ ವರ್ತನೆಯ ಹಿಂದಿನ ನಿಜಾಂಶಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
Published On - 9:35 am, Wed, 17 December 25