ಯುವತಿ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ಉಡುಪಿಯಲ್ಲಿ ಸಿಡಿದೆದ್ದ ಬಿಲ್ಲವ ಸಮುದಾಯ, ಏನಿದು ಕೇಸ್?
ಉಡುಪಿಯ ಬ್ರಹ್ಮಾವರದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಅಕ್ಷತಾ ಪೂಜಾರಿ ಎಂಬ ಯುವತಿ ಬಲಿಯಾಗಿದ್ದಾರೆ. ಆಶಿಕ್ ಎಂಬಾತನ ಶೋಧಕ್ಕೆ ಬಂದ ಪೊಲೀಸರು ಮನೆಯಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ರಾಜ್ಯದ ಜನರಲ್ಲಿ ಆತಂಕ ಮೂಡಿದ್ದು, ಬಿಲ್ಲವ ಸಮುದಾಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಕ್ಷತಾಗೆ ನ್ಯಾಯ ದೊರಕಿಸಿಕೊಡುವಂತೆ ಸಮುದಾಯದ ಮುಖಂಡರು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

ಉಡುಪಿ,ಡಿ.16: ಪೊಲೀಸರು (Udupi police brutality) ಮಾಡುವ ಕೆಲವೊಂದು ಕೃತ್ಯಗಳಿಂದ ರಾಜ್ಯದ ಜನರಲ್ಲಿ ಆತಂಕ ಮೂಡಿಸಿದೆ. ಕಳ್ಳತನ, ಸೂಲಿಯ ನಡುವೆ, ಹಲ್ಲೆ ಮಾಡುವ ಪ್ರವೃತ್ತಿಯನ್ನು ಕೂಡ ಬೆಳೆಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಕೇಳಿ ಬಂದಿದೆ. ದಿನದಿಂದ ದಿನಕ್ಕೆ ಪೊಲೀಸರು ಮನುಷ್ಯರಂತೆ ವರ್ತಿಸುತ್ತಿಲ್ಲ. ಇದರಿಂದ ನಿಷ್ಠವಂತ ಅಧಿಕಾರಿಗಳಿಗೆ ಕಪ್ಪು ಚುಕ್ಕೆಯಾಗಿದೆ ಎಂದು ಹೇಳಲಾಗಿದೆ. ಇದೀಗ ಪೊಲೀಸರು ಅಧಿಕಾರಿದ ಅಮಲಿನಲ್ಲಿ ಯುವತಿಯೊಬ್ಬಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಅಕ್ಷತಾ ಪೂಜಾರಿ ಎಂಬ ಯುವತಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಆರೋಪ ಕೇಳಿ ಬರುತ್ತಿದ್ದಂತೆ ಬಿಲ್ಲವ ಸಮುದಾಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಬ್ರಹ್ಮಾವರ ಠಾಣಾ ವ್ಯಾಪ್ತಿಯ ಉಪ್ಪೂರು ನಿವಾಸಿ ಅಕ್ಷತಾ ಪೂಜಾರಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. 2014ರಲ್ಲಿ ದೇವೇಂದ್ರ ಸುವರ್ಣ ಎಂಬವರಿಗೆ ಆಶಿಕ್ ಎಂಬ ಯುವಕ ಬೈಕ್ ಅಪಘಾತ ಮಾಡಿದ್ದ, ಇದರಿಂದ ಅವರಿಗೆ ಗಂಭೀರ ಗಾಯಗಳಾಗಿದ್ದು, ಇಂದಿಗೂ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆಶಿಕ್ಗೆ 25 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಆದೇಶ ನೀಡಿತ್ತು. ಆದರೆ ಆಶಿಕ್ ಪರಿಹಾರ ನೀಡದೆ ತಲೆಮರೆಸಿಕೊಂಡಿದ್ದ ಎಂದು ಹೇಳಲಾಗಿತ್ತು. ಆಶಿಕ್ಗಾಗಿ ಪೊಲೀಸರು ಹಲವಾರು ಬಾರಿ ಹುಡುಕಾಟ ನಡೆಸಿದ್ದರು. ಆತ ಉಪ್ಪೂರಿನಲ್ಲಿರುವ ಅಜ್ಜಿಯ ಮನೆಯಲ್ಲಿ ಇದ್ದಾನೆ ಎಂಬ ಲೊಕೇಶನ್ ಆಧಾರದಲ್ಲಿ ಪೊಲೀಸರು ಮುಂಜಾನೆ 4:00 ಗಂಟೆ ವೇಳೆ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ಷತಾ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸರು ಹೇಳುವ ಪ್ರಕಾರ ನ್ಯಾಯಾಲಯದ ಆದೇಶದಂತೆ ಕೆಲಸ ಮಾಡಿದ್ದೇವೆ. ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ನಾವು ಮಾಡಿದ್ದೇವೆ. ಜತೆಗೆ ನ್ಯಾಯಾಲಯ ಹೇಳಿದಂತೆ ಆಶಿಕ್ ಮನೆಗೆ ದಾಳಿ ಮಾಡುವ ವೇಳೆ ನಮ್ಮ ಜತೆಗೆ ಕೋರ್ಟ್ ಅಮೀನ್ (ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಧಿಕಾರಿ) ಕೂಡ ಇದ್ದರು ಎಂದು ಹೇಳಿದ್ದಾರೆ. ಇನ್ನು ಈ ದಾಳಿಯ ವೇಳೆ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಆಶಿಕ್ ನ ಸಹೋದರ ಸಂಬಂಧಿ ಅಕ್ಷತಾ ಪೂಜಾರಿ ಆರೋಪಿಸುತ್ತಿದ್ದಾರೆ. ಪೊಲೀಸರು ದಾಳಿಯ ವೇಳೆ ಅವರ ಜತೆಗೆ ಕೋರ್ಟ್ ಅಮೀನ್ ಇರಲಿಲ್ಲ. ಇನ್ನು ಅವರ ಜತೆಗೆ ಒಬ್ಬ ಮಹಿಳಾ ಪೊಲೀಸ್ ಕೂಡ ಇರಲಿಲ್ಲ ಎಂದು ಅಕ್ಷತಾ ಹೇಳಿದ್ದಾರೆ. ಸದ್ಯಕ್ಕೆ ಆಕೆಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಪೊಲೀಸ್ರು ಹೋದಾಗ ಯುವತಿ ಬಾಲ್ಕನಿಯಿಂದ ಜಿಗಿದ ಕೇಸಿಗೆ ಟ್ವಿಸ್ಟ್: ಸಿಕ್ಕ ಸಾಕ್ಷಿ ಏನು?
ನಮ್ಮ ಸಮುದಾಯದ ಹುಡುಗಿಗೆ ನ್ಯಾಯ ಸಿಗಬೇಕು:
ಘಟನೆ ಕುರಿತು ಅಕ್ಷತಾ ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದು, ಯಾವುದೇ ಎಫ್ಐಆರ್ ದಾಖಲಿಸಿಲ್ಲ. ಇದು ಬಿಲ್ಲವ ಸಂಘಟನೆಗಳನ್ನು ಕೆರಳಿಸಿದೆ. ತಮ್ಮ ಸಮುದಾಯದ ಯುವತಿಗೆ ಅನ್ಯಾಯ ಆಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ. ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ. ಇದರ ನಡುವೆ ಬಿಲ್ಲವ ಮುಖಂಡರು ಸಭೆಗಳನ್ನು ನಡೆಸಿದ್ದು, ಅಕ್ಷತಾ ಪೂಜಾರಿ ಪರ ಹೋರಾಟಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಕಾನೂನು ಪ್ರಕಾರ ಆರೋಪಿಯನ್ನು ಬಂಧಿಸೋದರ ಬದಲಾಗಿ, ಕಾನೂನು ಮೀರಿ ಪೊಲೀಸರು ವರ್ತಿಸಿದ್ದಾರೆ. ಕಾನೂನು ಬಾಹಿರವಾಗಿ ಕೋರ್ಟ್ ಅಮೀನರನ್ನು ಕರೆತರದೆ ದಾಳಿ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರನ್ನು ಅಮಾನತು ಮಾಡಬೇಕು. ಅಕ್ಷತಾ ನೀಡಿರುವ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಬೇಕು. ಅಕ್ಷತಾ ವಿರುದ್ಧ ಎಫ್ ಐ ಆರ್ ದಾಖಲಿಸಿರುವ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಬಿಲ್ಲವ ಮುಖಂಡ ಪ್ರವೀಣ್ ಪೂಜಾರಿ ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



