5 ದಿನಗಳಲ್ಲಿ ಬೆಂಗಳೂರು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಂದ 2 ಕೋಟಿ ರೂ. ಮೊತ್ತದ ಚಿನ್ನಾಭರಣ ವಶ
ಕಳೆದ ಐದು ದಿನಗಳ ಅವಧಿಯಲ್ಲಿ 15 ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಎರಡು ಕೋಟಿ ರೂಪಾಯಿ ಮೌಲ್ಯದ 3.31 ಕೆಜಿ ಚಿನ್ನವನ್ನು ಬೆಂಗಳೂರು ಏರ್‌ಪೋರ್ಟ್ ಕಸ್ಟಮ್ಸ್ ವಶಪಡಿಸಿಕೊಂಡಿದ್ದಾರೆ. ಸಿಕ್ಕಬಿದ್ದ ಪ್ರಯಾಣಿಕರಲ್ಲಿ 10 ಜನ ಮಹಿಳೆಯರು ಸೇರಿದ್ದಾರೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.
ಬೆಂಗಳೂರು, ಜನವರಿ 02: ಕಳೆದ ಐದು ದಿನಗಳ ಅವಧಿಯಲ್ಲಿ ವಿವಿಧ ನಗರಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಕ್ಕೆ ಆಗಮಿಸಿದ್ದ 15 ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಎರಡು ಕೋಟಿ ರೂಪಾಯಿ ಮೌಲ್ಯದ 3.31 ಕೆಜಿ ಚಿನ್ನವನ್ನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು (Customs officers) ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕರು ಬಟ್ಟೆಯಲ್ಲಿ ಚಿನ್ನವನ್ನು ಬಚ್ಚಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದರು. ಕೌಲಾಲಂಪುರ್, ಜೆಡ್ಡಾ, ಶಾರ್ಜಾ ಮತ್ತು ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರು ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಇನ್ನು ಸಿಕ್ಕಬಿದ್ದ ಪ್ರಯಾಣಿಕರಲ್ಲಿ 10 ಜನ ಮಹಿಳೆಯರು ಸೇರಿದ್ದಾರೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.
ಗುರುವಾರ (ಡಿಸೆಂಬರ್ 28) ನಾಲ್ವರು ಪುರುಷ ಪ್ರಯಾಣಿಕರಿಂದ 1.9 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಯಿತು. ಅವರಲ್ಲಿ ಇಬ್ಬರು ಬ್ಯಾಂಕಾಕ್‌ನಿಂದ ಆಗಮಿಸಿದ್ದರು. ಬ್ಯಾಂಕಾಕ್‌ನಿಂದ ಬಂದ ಇಬ್ಬರು ಪ್ರಯಾಣಿಕರು, ಮುಂಬೈ ಮೂಲದವರು. ರಾತ್ರಿ 11.30 ರ ಹೊತ್ತಿಗೆ TG 325 ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಪ್ರತಿಯೊಬ್ಬರೂ 734 ಗ್ರಾಂನ ಚಿನ್ನದ ಸರ ತಂದಿದ್ದರು. ಒಬ್ಬ ಪ್ರಯಾಣಿಕ ಚಿನ್ನವನ್ನು ಕರವಸ್ತ್ರದಲ್ಲಿ ಬಚ್ಚಿಟ್ಟುಕೊಂಡಿದ್ದರೇ, ಮತ್ತೊಬ್ಬನು ಜೇಬಿನಲ್ಲಿ ಇಟ್ಟುಕೊಂಡಿದ್ದನು. ಇಬ್ಬರ ಬಳಿ ಇದ್ದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅದೇ ದಿನ ಸಿಕ್ಕಿಬಿದ್ದ ಇನ್ನೋರ್ವ ಪ್ರಯಾಣಿಕ ಕೊಯಮತ್ತೂರು ಮೂಲದವರು. ಕೌಲಾಲಂಪುರ್‌ನಿಂದ (OD-241) ಬಾಟಿಕ್ ಏರ್‌ಲೈನ್ಸ್ ವಿಮಾನದಲ್ಲಿ ಬಂದಿದ್ದ ಅವರು ಒಳ ಉಡುಪಿನಲ್ಲಿ 200 ಗ್ರಾಂ ತೂಕದ ಮೂರು ಕಚ್ಚಾ ಚಿನ್ನದ ಸರಗಳನ್ನು ಬಚ್ಚಿಟ್ಟಿದ್ದರು. ಶಾರ್ಜಾದಿಂದ ಏರ್ ಅರೇಬಿಯಾ ವಿಮಾನ G9-946 ಮೂಲಕ ಬಂದಿದ್ದ ಆಂಧ್ರಪ್ರದೇಶ ಮೂಲದ ವೆಂಕಟೇಶ್ವರಲು ಕಾತೂರು ಎಂಬುವರು, ಜೀನ್ಸ್‌ನ ರಹಸ್ಯ ಪಾಕೆಟ್‌ನಲ್ಲಿ 233 ಗ್ರಾಂ ತೂಕದ ಎರಡು ಚಿನ್ನದ ಬಿಸ್ಕೆಟ್ಗಳನ್ನು ಬಚ್ಚಿಟ್ಟಿದ್ದರು. ಇದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣ: 55 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಕೊಡಗಿನ ಯುವಕ ಅರೆಸ್ಟ್
ಡಿಸೆಂಬರ್ 26 ರಂದು, ಶಿವಮೊಗ್ಗ ಮೂಲದ ಜನ ಮಹಿಳಾ ಪ್ರಯಾಣಿಕರು ಹಜ್ ಯಾತ್ರೆ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಇವರು ಬುರ್ಖಾದಲ್ಲಿ ಕಚ್ಚಾ ಚಿನ್ನದ ಸರಗಳನ್ನು ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸಲು ಯತ್ನಿಸಿದರು. ಇದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮತ್ತೊಬ್ಬ ಪ್ರಯಾಣಿಕ ಡಿಸೆಂಬರ್ 24 ರಂದು ತನ್ನ ಸಾಕ್ಸ್‌ನೊಳಗೆ ಹೊಲಿಯಲಾದ ಎರಡು ಪ್ಯಾಕೆಟ್‌ಗಳಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಇಟ್ಟುಕೊಂಡು ಸಾಗಿಸಲು ಯತ್ನಿಸಿದ್ದಾನೆ. ಇದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತನ ಬಳಿ 248.27 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ 15.88 ಲಕ್ಷ ರೂಪಾಯಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Tue, 2 January 24