
ಬೆಂಗಳೂರು, ಜನವರಿ 17: ಅಪರಾಧವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಕಳೆದ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ (police) ಭಾಗಿಯಾಗಿರುವುದು ನಾಚಿಗೇಡಿನ ವಿಷಯ. ಇದು ಸರ್ಕಾರಕ್ಕೆ ಮಾತ್ರವಲ್ಲ, ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಿಡಿಸಿದ್ದಾರೆ.
ಇಂದು ಬೆಂಗಳೂರಿನ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರ ಕಚೇರಿಯಲ್ಲಿ ಆಯೋಜಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಕೆಲವು ಪೊಲೀಸ್ ಠಾಣೆಗಳು ಉತ್ತಮ ಕೆಲಸ ಮಾಡುತ್ತಿವೆ. ಇನ್ನೂ ಕೆಲವು ಠಾಣೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪೊಲೀಸ್ ಅಧಿಕಾರಿಗಳಿಗೆ ಗೊತ್ತಾಗದೇ ಕ್ರೈಂ ನಡೆಯಲು ಸಾಧ್ಯವಿಲ್ಲ, ಪೊಲೀಸರು ಬಲಾಢ್ಯರ ಕೈಗೊಂಬೆಯಂತೆ ಕೆಲಸ ಮಾಡಬಾರದು. ರಾಯಚೂರಿನ ಕವಿತಾಳ ಠಾಣೆ ದೇಶದಲ್ಲೇ 3ನೇ ಸ್ಥಾನ ಪಡೆದುಕೊಂಡಿದೆ ಎಂದರು.
ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡುವ ಗುರುತರವಾದ ಕಾರ್ಯವನ್ನು ರಾಜ್ಯದ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಮಾಡುತ್ತಿದೆ. ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವುದು, ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಪೂರಕವಾಗಿ ಕೆಲಸ ಮಾಡಬೇಕು.
ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ರಕ್ಷಣೆಯನ್ನು ಒದಗಿಸಿದೆ.… pic.twitter.com/ItOCH4NWSf
— CM of Karnataka (@CMofKarnataka) January 17, 2026
ನಮ್ಮಲ್ಲಿ ಕಳ್ಳತನ, ಸುಲಿಗೆ, ದರೋಡೆ ಪ್ರಕರಣ ಕಡಿಮೆ ಆಗುತ್ತಿದೆ. ಆದರೆ ಸೈಬರ್ ಕ್ರೈಂ ಮತ್ತು ಡ್ರಗ್ಸ್ ಪೆಡ್ಲಿಂಗ್ ಜಾಸ್ತಿ ಆಗುತ್ತಿದೆ. ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕೆಂದು ನಮ್ಮ ಸರ್ಕಾರದಿಂದ ಹೋರಾಟ ಮಾಡಲಾಗುತ್ತಿದೆ. ಪೊಲೀಸರು ಸರಿಯಾಗಿ ಕೆಲಸ ಮಾಡಿದರೆ ಎಲ್ಲವನ್ನೂ ಮಟ್ಟಹಾಕಬಹುದು ಎಂದಿದ್ದಾರೆ.
ಡ್ರಗ್ಸ್ ಮುಕ್ತಮಾಡಲು ವ್ಯಸನಿ ವಿಚಾರಣೆ ಮಾಡಿದರೆ ಮೂಲ ಮಾಹಿತಿ ಸಿಗುತ್ತದೆ. ಪೆಡ್ಲರ್ ವಿಚಾರಣೆ ಮಾಡಿದರೆ ಎಲ್ಲಿಂದ ಡ್ರಗ್ಸ್ ಬಂತು ಅಂತಾ ಗೊತ್ತಾಗುತ್ತೆ. ಅಪರಾಧದಲ್ಲಿ ಭಾಗಿಯಾದ ವಿದೇಶಿಯರನ್ನು ಅವರ ದೇಶಕ್ಕೆ ವಾಪಸ್ ಕಳಿಸುವ ಕೆಲಸ ಮಾಡುತ್ತೇವೆ. ಪಿಐ, ಪಿಎಸ್ಐ ಸೇರಿ ಎಲ್ಲರ ಮೇಲೂ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು. ಮಹಾರಾಷ್ಟ್ರದ ಪೊಲೀಸರು ಬಂದು ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಮಾಡಿದ್ದಾರೆ. ಅದನ್ನು ಕರ್ನಾಟಕ ಪೊಲೀಸರು ಏಕೆ ಮಾಡುತ್ತಿಲ್ಲ. ಈ ರೀತಿ ಇನ್ಮುಂದೆ ಆಗಬಾರದು ಅಂತಾ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಸೈಬರ್ ಕ್ರೈಂ ತಡೆಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಮನೆ ಮನೆಗೆ ಪೊಲೀಸ್ ಕಾರ್ಯಕ್ಕೆ ನಮಗೆ ದೇಶದಲ್ಲಿ ಮೂರನೇ ಸ್ಥಾನ ಬಂದಿದೆ ಎಂದು ಹೇಳಿದರು.
ವರದಿ: ವಿಕಾಸ್ ಕ್ರೈಂ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.