ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್​ ಬಾಡಿಗೆ ದರ ಹೆಚ್ಚಳ: ಅಸಲಿ ಕಾರಣ ಏನು ಗೊತ್ತಾ?

ಬೆಂಗಳೂರಿನಲ್ಲಿ ಜೆಸಿಬಿ, ಟಿಪ್ಪರ್ ಲಾರಿ, ಟ್ರಾಕ್ಟರ್ ಬಾಡಿಗೆ ದುಬಾರಿ ಆಗಿದೆ. ಸರ್ಕಾರದ ತುಘಲಕ್ ನೀತಿಗಳಿಗೆ ಜನಸಾಮಾನ್ಯರು ಈ ದುಬಾರಿ ಬೆಲೆ ತೆರಬೇಕಾಗಿದೆ. ನಿರ್ವಹಣಾ ವೆಚ್ಚ ಭರಿಸಲು ಬಾಡಿಗೆ ಹೆಚ್ಚಿಸಿದ್ದು, ಗ್ರಾಹಕರು ಸಹಕರಿಸಬೇಕೆಂದು ಅಖಿಲ ಭಾರತ ಲಾರಿ ಅಸೋಸಿಯನ್ ಅಧ್ಯಕ್ಷ ಷಣ್ಮುಗಪ್ಪ ಮನವಿ ಮಾಡಿದ್ದಾರೆ.

ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್​ ಬಾಡಿಗೆ ದರ ಹೆಚ್ಚಳ: ಅಸಲಿ ಕಾರಣ ಏನು ಗೊತ್ತಾ?
ಪ್ರಾತಿನಿಧಿಕ ಚಿತ್ರ
Edited By:

Updated on: Dec 28, 2025 | 8:02 PM

ಆನೇಕಲ್, ಡಿಸೆಂಬರ್​ 28: 15 ಮತ್ತು 20 ವರ್ಷ ಮೀರಿದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಲು ಸಾರಿಗೆ ಸಚಿವರು ಸೂಚಿಸಿದ್ದರು. ಆದರೆ ಆರ್​ಟಿಓ (RTO) ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಜನವರಿ 5ರೊಳಗೆ ಫಿಟ್ನೆಸ್ ಸರ್ಟಿಫಿಕೇಟ್ ರಿಜಿಸ್ಟರ್ ಮಾಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಅಖಿಲ ಭಾರತ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಖಪ್ಪ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ರಾಜ್ಯದಲ್ಲಿ ಮೀತಿಮೀರಿದ ಆರ್​ಟಿಓ, ಪೊಲೀಸ್ ಕಿರುಕುಳ

15 ಮತ್ತು 20 ವರ್ಷ ಹಳೆಯದಾದ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ದುಬಾರಿ ಹಣ ಪಾವತಿಗೆ ಕೇಂದ್ರ ಸರ್ಕಾರ ಕಾನೂನು ರೂಪಿಸಿದೆ. ಇದು ವಾಹನಗಳ ಮಾಲೀಕರಿಗೆ ನುಂಗಲಾರದ ತುತ್ತಾಗಿದೆ. ಕೇರಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಹಳೆಯ ಪದ್ದತಿ ಚಾಲ್ತಿಯಲ್ಲಿದೆ. ಆದರೆ ರಾಜ್ಯದಲ್ಲಿ ಆರ್​ಟಿಓ ಮತ್ತು ಪೊಲೀಸ್ ಕಿರುಕುಳ ಮೀತಿಮೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!

ಇನ್ನು ಬೆಂಗಳೂರಿನಲ್ಲಿ ಜೆಸಿಬಿ, ಟಿಪ್ಪರ್ ಲಾರಿ, ಟ್ರಾಕ್ಟರ್ ಬಾಡಿಗೆ ಕೂಡ ದುಬಾರಿಯಾಗುತ್ತಿದೆ. ಸರ್ಕಾರದ ತುಘಲಕ್ ನೀತಿಗಳಿಗೆ ಜನಸಾಮಾನ್ಯರು ದುಬಾರಿ ಬೆಲೆ ತೆರಬೇಕಿದೆ‌. ಟ್ರಾಫಿಕ್ ಕಿರಿಕಿರಿ ನೆಪದಲ್ಲಿ ಟಿಪ್ಪರ್ ಲಾರಿ ಜೆಸಿಬಿ ಮಾಲೀಕರಿಗೆ ಆರ್​​ಟಿಓ ಮತ್ತು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ದಿನಕ್ಕೆ ಕೇವಲ ಮೂರು ತಾಸು ಕೆಲಸ ಮಾಡಲು ಅವಕಾಶ ನೀಡುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ಟ್ರಾಫಿಕ್ ಪೀಕ್ ಅವರ್ ಎಂದು ಜೆಸಿಬಿ, ಲಾರಿ ಟ್ರಾಕ್ಟರ್​ಗಳಿಗೆ ನಿರ್ಬಂಧ ವಿಧಿಸುತ್ತಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಏರ್ಪೋರ್ಟ್: ಹಳದಿ ಬೋರ್ಡ್ ಕ್ಯಾಬ್ ನಿಯಮ, ದಂಡ ಪರಿಷ್ಕರಣೆ, ಚಾಲಕರಿಗೆ ರಿಲೀಫ್

20 ಲಕ್ಷ ರೂ ಇದ್ದ ಲಾರಿ ಬೆಲೆ 40 ಲಕ್ಷ ರೂ ಆಗಿದೆ. ಚಾಲಕ ಮತ್ತು ಕ್ಲೀನರ್ ಬಾಟಾ ಸಾವಿರ ಮುಟ್ಟಿದೆ. ಡಿಸೇಲ್ ಬೆಲೆ ನಾಗಾಲೋಟಕ್ಕೆ ಏರುತ್ತಿದೆ. ಒಂದು ರೂ. ಇದ್ದ ಸ್ಪೇರ್ ಪಾರ್ಟ್ಸ್ 15 ರೂ ಆಗಿದೆ. ಸರ್ಕಾರದ ತುಘಲಕ್ ನೀತಿಗಳು, ಬೆಲೆ ಹೆಚ್ಚಳ ಮತ್ತು ನಿರ್ವಹಣೆ ದುಬಾರಿ ಆಗಿದೆ‌. ಹಾಗಾಗಿ ಟಿಪ್ಪರ್ ಲಾರಿ ಬಾಡಿಗೆ 5000 ದಿಂದ 7000 ರೂ ಏರಿಕೆಯಾಗಿದೆ. ಜೆಸಿಬಿ ಬಾಡಿಗೆ ಗಂಟೆಗೆ 900 ರಿಂದ 1200 ರೂ ಏರಿಕೆಯಾಗಿದ್ದು, ಗ್ರಾಹಕರು ಬೆಲೆ ಏರಿಕೆಗೆ ಸಹಕರಿಸಬೇಕು ಎಂದು ಲಾರಿ ಮತ್ತು ಜೆಸಿಬಿ ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.