Bengaluru: ಪ್ರಚಾರಕ್ಕಾಗಿ ಅರುಣ್ ಕೆ.ಆರ್.ಮಾರ್ಕೆಟ್ ಫ್ಲೈಓವರ್ನಿಂದ 10ಸಾವಿರ ರೂಪಾಯಿ ಎಸೆದಿದ್ದಾನಂತೆ ಮಾರಾಯ್ರೆ!
ಬೆಂಗಳೂರಿನ ಮಾರ್ಕೆಟ್ ಫ್ಲೈಓವರ್ನಲ್ಲಿ ಹಣ ಎಸೆದ ಪ್ರಕರಣ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ನಡೆಯುತ್ತಿದ್ದ ಅರುಣ್ ವಿಚಾರಣೆ ಮುಕ್ತಾಯಗೊಂಡಿದ್ದು, ಸಾಮಾಜಿ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಪಡೆಯಲು ಹಣ ಎಸೆದಿರುವುದಾಗಿ ತಿಳಿದುಬಂದಿದೆ.
ಬೆಂಗಳೂರು: ನಗರದ ಕೆ.ಆರ್.ಮಾರ್ಕೆಟ್ ಫ್ಲೈಓವರ್ನಲ್ಲಿ (K.R.Market Flyover) ಹಣ ಎಸೆದ ಪ್ರಕರಣ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ನಡೆಯುತ್ತಿದ್ದ ಅರುಣ್ ವಿಚಾರಣೆ ಮುಕ್ತಾಯಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಹುಚ್ಚಿಗಾಗಿ ಹಣ ಎಸೆದಿರುವುದು ತಿಳಿದುಬಂದಿದೆ. ರೀಲ್ಸ್ಗಾಗಿ ಮಾಡಿದ್ದಲ್ಲ, ನನಗೆ ಸ್ವಲ್ಪ ಸಮಯ ಕೊಡಿ ಎಲ್ಲವೂ ಹೇಳುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿದ್ದ ಅರುಣ್, ಪೊಲೀಸರ ಮುಂದೆ, “ತಾನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಹಣ ಎಸೆದಿದ್ದೆ, ಹೆಚ್ಚು ಲೈಕ್ಸ್ ಹಾಗೂ ಪ್ರಚಾರ ಸಿಗಬೇಕು ಎಂದು ಈ ರೀತಿ ಮಾಡಿದ್ದೇನೆ” ಎಂದು ಬಾಯಿಬಿಟ್ಟಿದ್ದಾನೆ.
ಚಿಕ್ಕಪೇಟೆ ಎಸಿಪಿ ನೇತೃತ್ವದಲ್ಲಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಅರುಣ್ ವಿಚಾರಣೆ ನಡೆದಿದೆ. ಚೀಲದಲ್ಲಿ ನೋಟುಗಳನ್ನು ತುಂಬಿಸಿಕೊಂಡು ಬಂದ ಅರುಣ್ ಮಾರ್ಕೆಟ್ ಫ್ಲೈಓವರ್ ಮೇಲೆ ನಿಂತು ಹಣವನ್ನು ಕೆಳಭಾಗದಲ್ಲಿ ಜನರು ಓಡಾಡುವ ಸ್ಥಳಗಳಿಗೆ ಎಸೆದಿದ್ದಾನೆ. ಸುಮಾರು 4,500 ರೂ. ಹಣವನ್ನು ತೆಗೆದುಕೊಂಡು ಬಂದು ಎಸೆದಿದ್ದ ಅರುಣ್, ಪೊಲೀಸರ ಮುಂದೆ 10 ಸಾವಿರ ತಂದಿದ್ದಾಗಿ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನ ಮಾರ್ಕೆಟ್ ಫ್ಲೈಓವರ್ನಿಂದ ಹಣ ಎಸೆದ ವ್ಯಕ್ತಿ ಖಾಕಿ ವಶಕ್ಕೆ
ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಹೆಚ್ಚು ಲೈಕ್ಸ್ ಹಾಗೂ ಪ್ರಚಾರ ಪಡೆಯಲು ಫ್ಲೈಓವರ್ನಿಂದ ಹಣ ಎಸೆದಿದ್ದೇನೆ. ಹಲವು ಜನರು ಬೇರೆ ಬೇರೆ ರೀತಿ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ನನ್ನ ಮಾಲೀಕತ್ವದ ಈವೆಂಟ್ ಮ್ಯಾನೇಜ್‌ಮೆಂಟ್‌ಗೆ ಪ್ರಚಾರ ಬೇಕಿತ್ತು. ಹೀಗಾಗಿ ನಾನು ಹಣ ಎಸೆದು ಮಾರ್ಕೆಟಿಂಗ್ ಮಾಡಿಕೊಂಡೆ ಅಷ್ಟೇ. ಬೇರೆ ಯಾವುದೇ ಉದ್ದೇಶ ಇರಲಿಲ್ಲವೆಂದು ಹೇಳಿಕೆ ನೀಡಿದ್ದಾನೆ.
ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿದ್ದೇನು?
ಪ್ರಚಾರದ ಹುಚ್ಚಿಗಾಗಿ ಅರುಣ್ ಈ ರೀತಿ ಮಾಡಿದ್ದಾನೆ. ಜನರ ಓಡಾಟ ಜಾಸ್ತಿ ಇರುತ್ತೆಂದು ಮಾರ್ಕೆಂಟ್ನಲ್ಲಿ ಹಣ ಎಸೆದಿದ್ದಾನೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 11ರ ಸುಮಾರಿಗೆ ಹಣ ಎಸೆದ ವಿಡಿಯೋ ವೈರಲ್ ಆಗಿತ್ತು. ಹಣ ಎಸೆದಿದ್ದರಿಂದ ಟ್ರಾಫಿಕ್ ಜಾಮ್, ಇತರೆ ಸಮಸ್ಯೆ ಆಗಿತ್ತು. ಪರಿಶೀಲನೆ ಮಾಡಿದಾಗ ಆತ ಅರುಣ್ ಎಂದು ತಿಳಿದು ಬಂದಿದೆ. ಗೆಳೆಯ ಸತೀಶ್ ಜೊತೆಗೆ ಸೇರಿ ಅರುಣ್ ಈ ರೀತಿ ಮಾಡಿದ್ದಾನೆ. ಈ ಸಂಬಂಧ ಆರಂಭದಲ್ಲಿ ಸುಮೋಟೋ ಪ್ರಕರಣ ದಾಖಲಿಸಿದ್ದೆವು. ನಂತರ ಕೋರ್ಟ್ ಅನುಮತಿ ಪಡೆದು ಎಫ್ಐಆರ್ ದಾಖಲಿಸಿದ್ದೇವೆ. ಹಣ ಎರಚುವ ವಿಡಿಯೋ ಮಾಡಿ ಜಾಲತಾಣದಲ್ಲಿ ಹಾಕಿದ್ದಾನೆ. ಆಂಕರಿಂಗ್ ಮಾಡುವಾಗ ಬಂದ ಹಣವನ್ನು ಈ ರೀತಿ ಮಾಡಿದ್ದಾನೆ, ಎಷ್ಟು ಹಣ ಎಸೆದಿದ್ದಾನೆ ಎಂದು ತಿಳಿದಿಲ್ಲ ಎಂದರು.
ಏನಿದು ಪ್ರಕರಣ?
ನಗರದ ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲೆ ಬಂದ ಅರುಣ್ ಹಣ ಎಸೆದು ಸ್ಥಳದಿಂದ ತೆರಳಿದ್ದನು. ಈ ಪ್ರಕರಣ ಸಂಬಂಧ ತನಿಖೆಗೆ ಇಳಿದ ಪೊಲೀಸರು, ನಾಗಬಾವಿಯ ಅರುಣ್ ನಿವಾಸಕ್ಕೆ ನೋಟಿಸ್ ಜಾರಿ ಮಾಡಿದ್ದರು. ಇದೇ ವೇಳೆ ಯೂಟ್ಯೂಬ್ ಚಾನಲ್ ಕಚೇರಿಯಲ್ಲಿ ಅರುಣ್ ಇರುವುದನ್ನು ಖಚಿತಪಡಿಸಿದ ಪೊಲೀಸರು ಕಚೇರಿಗೆ ಎಂಟ್ರಿ ಕೊಟ್ಟು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Tue, 24 January 23