Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Kambala:ಇಂದಿನಿಂದ ಬೆಂಗಳೂರಿನಲ್ಲಿ ಕಂಬಳ ಕಲರವ, ಗೆಲ್ಲುವ ಕೋಣಗಳಿಗೆ ಬಹುಮಾನ ಎಷ್ಟು ಗೊತ್ತಾ?

Kambala In Bengaluru: ಅಖಾಡ ರೆಡಿಯಾಗಿದೆ.. ಕೋಣಗಳು ಆಗಮಿಸಿವೆ.. ಈ ವೀಕೆಂಡ್​​ನಲ್ಲಿ ಬೆಂಗಳೂರಿನ ಅರಮನೆ ಅಂಗಳ ಜನರಿಂದ ತುಂಬಿ ತುಳುಕಲಿದೆ.. ಯಾಕಂದ್ರೆ, ಇದೇ ಮೊದಲ ಸಲ ನಗರದಲ್ಲಿ ಕಂಬಳ ನಡೆಯಲಿದೆ. ಇಷ್ಟು ದಿನ ಕರಾವಳಿ ಭಾಗದಲ್ಲಿ ಆಕರ್ಷಣೆಯಾಗಿದ್ದ ಕಂಬಳ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಅದ್ಧೂರಿಯಾಗಿ ಕಂಬಳ ಆಯೋಜಿಸಲಾಗಿದೆ. ಹೀಗಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇರುವದರಿಂದ ಮುನ್ನೆಚ್ಚರಿಕೆಯಾಗಿ ಸಂಚಾರ ಮಾರ್ಗಸೂಚಿ ಹೊರಡಿಸಲಾಗಿದೆ.

Bengaluru Kambala:ಇಂದಿನಿಂದ ಬೆಂಗಳೂರಿನಲ್ಲಿ ಕಂಬಳ ಕಲರವ, ಗೆಲ್ಲುವ ಕೋಣಗಳಿಗೆ ಬಹುಮಾನ ಎಷ್ಟು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 24, 2023 | 7:19 AM

ಬೆಂಗಳೂರು, (ನವೆಂಬರ್ 24): ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ((Bengaluru Kambala)ಕಲರವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ(ನವೆಂಬರ್ 24) ಮೂರು ದಿನಗಳ ಕಾಲ ಕಂಬಳ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಳೆ(ನವೆಂಬರ್ 25) ಸಂಜೆ 3:30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಕಂಬಳ ಉದ್ಘಾಟನೆ ಮಾಡಲಿದ್ದಾರೆ. ನಿನ್ನೆ ಎರಡು ಜೋಡಿ ಕೋಣಗಳು ಮಾತ್ರ ಬಂದಿದ್ದು, ಕಂಬಳದ ಕೆರೆಗೆ ಪೂಜೆ ಸಲ್ಲಿಸಿ, ಕೋಣಗಳನ್ನ ಓಡಿಸಿ ರಿಹರ್ಸಲ್ ಮಾಡಲಾಯ್ತು. 200ಕ್ಕೂ ಹೆಚ್ಚು ಕೋಣಗಳು ಕಂಬಳದಲ್ಲಿ ಭಾಗವಹಿಸಲಿದ್ದು, 157 ಮೀಟರ್ ಉದ್ದ, 8 ಮೀಟರ್ ಅಗಲದ ರಾಜಮಾಹಾರಾಜ ಹೆಸರಿನ ಟ್ರ್ಯಾಕ್​ನಲ್ಲಿ ಮಿಂಚು ಹರಿಸಲಿವೆ.

ವೀಕೆಂಡ್​ನಲ್ಲಿ ಕಂಬಳ ವೀಕ್ಷಣೆಗೆ 6 ರಿಂದ 7 ಲಕ್ಷ ಜನ ಬರುವ ಸಾಧ್ಯತೆ ಇದೆ. ಇದಕ್ಕಾಗಿ ಸಕಲ ತಯಾರಿ ಮಾಡಲಾಗಿದ್ದು, ಜನರು ಕೂತು ಕಂಬಳ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೋಣಗಳಿಗೂ ಸೂಕ್ತ ಜಾಗ, ಮೇವು, ನೀರಿನ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಕರಾವಳಿ ಕಂಬಳದ ಇತಿಹಾಸ ತಿಳಿಯೋಣ ಬನ್ನಿ

ಕಂಬಳಕ್ಕೆ 77.50- 78 ಕೋಟಿ ರೂ. ವೆಚ್ಚ ತಗಲುವ ನಿರೀಕ್ಷೆಯಿದ್ದು, ಸರ್ಕಾರ ಒಂದು ಕೋಟಿ ರೂ. ಅನುದಾನ ಪ್ರಕಟಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳು ಹಣ ಸಹಾಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.

ವಿಜೇತರ ಬಹುಮಾನ ವಿವರ ಹೀಗಿದೆ

ಬೆಂಗಳೂರು ಕಂಬಳದಲ್ಲಿ ವಿಜೇತರಾಗುವ ಕೋಣದ ಮಾಲೀಕರಿಗೆ 1 ಲಕ್ಷ ರೂ. ನಗದು, 16 ಗ್ರಾಂ ಸ್ವರ್ಣ ಕೊಡಲಾಗುತ್ತದೆ. ದ್ವಿತೀಯ ಸ್ಥಾನ ಗಳಿಸಿದವರಿಗೆ 50,000 ರೂ. ಜತೆಗೆ 2.8 ಗ್ರಾಂ ಚಿನ್ನ ಮತ್ತು ತೃತೀಯ ಸ್ಥಾನ ಪಡೆದವರಿಗೆ 25,000 ರೂ. ನಗದು ಹಾಗೂ 4 ಗ್ರಾಂ ಬಂಗಾರದ ಪದಕವನ್ನು ಬಹುಮಾನವಾಗಿ ನೀಡಲಾಗುತ್ತದೆ.

ಸಂಚಾರಿ ಪೊಲೀಸರ ಮಾರ್ಗಸೂಚಿ

ಇಷ್ಟು ದಿನ ಕರಾವಳಿ ಭಾಗದಲ್ಲಿ ಆಕರ್ಷಣೆಯಾಗಿದ್ದ ಕಂಬಳ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಅದ್ಧೂರಿಯಾಗಿ ಕಂಬಳ ಆಯೋಜಿಸಲಾಗಿದೆ. ಹೀಗಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಸಂಚಾರ ಮಾರ್ಗಸೂಚಿ ಹೊರಡಿಸಲಾಗಿದೆ. ಇಂದಿನಿಂದ ನವೆಂಬರ್ 26 ರವರೆಗೆ ಸಂಚಾರಿ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ. ಕಾರ್ಯಕ್ರಮ ಹೊರತುಪಡಿಸಿ ಸಂಚರಿಸುವ ಸವಾರರಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದೆ.

ಯಾವ ರಸ್ತೆಯಲ್ಲಿ ಸಂಚಾರ?

ಮೈಸೂರು ಬ್ಯಾಂಕ್ ರಸ್ತೆ ಮೂಲಕ ವಸಂತ್ ನಗರ ಅಂಡರ್ ಪಾಸ್ ಹೋಗೋರು ಅರಮನೆ ರಸ್ತೆ ಮೂಲಕವೇ ಸಂಚರಿಸಬೇಕು. ಅರಮನೆ ರಸ್ತೆ, ಬಿಡಿಎ ಜಂಕ್ಷನ್ ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್ ನಿಂದ ಹಳೇ ಉದಯ ಟಿವಿ ಜಂಕ್ಷನ್ ವರೆಗೆ ಎಮ್ ವಿ ಜಯರಾಂ ರಸ್ತೆ ಬಳಕೆಗೆ ಸೂಚನೆ‌‌ ನೀಡಲಾಗಿದೆ. ಮೇಖ್ರಿ ಸರ್ಕಲ್ ನಿಂದ ಎಲ್ ಆರ್ ಡಿಇ ಜಂಕ್ಷನ್ ವರೆಗೆ ಬಳ್ಳಾರಿ ರಸ್ತೆ ಬಳಸುವುದು ಹಾಗೂ ಬಾಳೆಕುಂದಿ ಸರ್ಕಲ್‌ನಿಂದ ಲೀ ಮೆರಿಡಿಯನ್ ಅಂಡರ್ ಪಾಸ್ ವರೆಗೆ ಕನ್ನಿಂಗ್ ಹಾಮ್ ರೋಡ್ ಬಳಸಲು ತಿಳಿಸಲಾಗಿದೆ. ಹಳೇ ಉದಯ ಟಿವಿ ಜಂಕ್ಷನ್ ನಿಂದ‌ ಎಲ್ ಆರ್ ಡಿಇ ಜಂಕ್ಷನ್ ವರೆಗೆ ಮಿಲ್ಲರ್ಸ್ ಜಂಕ್ಷನ್ ಬಳಕೆ, ಜಯಮಹಲ್ ರಸ್ತೆ ಹಾಗೂ ಅರಮನೆ ರಸ್ತೆ ಸುತ್ತಮುತ್ತ ಸಂಚಾರ ಮಾಡೋರು ಜಯಮಹಲ್ ರಸ್ತೆ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.

ಒಟ್ಟಿನಲ್ಲಿ ಈ ವೀಕೆಂಡ್​​ನಲ್ಲಿ ನಗರದಲ್ಲಿ ಕಂಬಳ ಕಲರವ ಜೋರಾಗಲಿದ್ದು, ಅರಮನೆ ಅಂಗಳದಲ್ಲಿ ಕೋಣಗಳು ಕಮಾಲ್ ಮಾಡಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ