ಬೆಂಗಳೂರು ಕರಗ: ಸರ್ಕಾರದಿಂದ ಹಣ ಬಿಡುಗಡೆ ವಿಚಾರದಲ್ಲಿ ಗೊಂದಲ, ಯಾರು ಏನಂದರು ನೋಡಿ

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಮುಜರಾಯಿ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲ ಎಂಬ ಆರೋಪ ಇದೀಗ ಕೇಳಿಬಂದಿದ್ದು, ಪರ ಹಾಗೂ ವಿರೋಧ ಹೇಳಿಕೆಗಳಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಕರಗ ಅರ್ಚಕ ಜ್ಞಾನೇಂದ್ರ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಯಾರ್ಯಾರು ಏನೇನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.

ಬೆಂಗಳೂರು ಕರಗ: ಸರ್ಕಾರದಿಂದ ಹಣ ಬಿಡುಗಡೆ ವಿಚಾರದಲ್ಲಿ ಗೊಂದಲ, ಯಾರು ಏನಂದರು ನೋಡಿ
ಬೆಂಗಳೂರು ಕರಗ
Edited By:

Updated on: Apr 12, 2025 | 3:50 PM

ಬೆಂಗಳೂರು, ಏಪ್ರಿಲ್ 12: ವಿಶ್ವವಿಖ್ಯಾತ ಬೆಂಗಳೂರು ಕರಗ (Bengaluru Karaga) ಈ ವರ್ಷ ಅನುದಾನದ ವಿಚಾರದಲ್ಲಿ ಚರ್ಚೆಗೆ ಗ್ರಾಸವಾಗುವಂತೆ ಆಗಿದೆ. ಒಂದೆಡೆ, ಅದ್ದೂರಿಯಾಗಿ ಕರಗ ಮಹೋತ್ಸವ ನಡೆಯುತ್ತಿದ್ದರೆ, ಮತ್ತೊಂದೆಡೆ ಕರಗ ಅರ್ಚಕ ಜ್ಞಾನೇಂದ್ರ (Jnanendra) ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಅಳಲು ತೋಡಿಕೊಂಡಿದ್ದಾರೆ. ಸರ್ಕಾರದಿಂದ ಒಂದು ರೂಪಾಯಿ ಬಂದಿಲ್ಲ. ದೇವಸ್ಥಾನದ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಅರ್ಚಕರು ಹಣ ಹಾಕಿ ಕರಗ ಮಾಡುತ್ತಿದ್ದೇವೆ ಎಂದು ಅವರು ಅಲವತ್ತುಕೊಂಡಿದ್ದಾರೆ.

‘ನಾವು ಕೈಯಿಂದ ಹಣ ಹಾಕಿ‌ ಅಲಂಕಾರ ಮಾಡುತ್ತಿದ್ದೇವೆ. ನಾನು 20 ಲಕ್ಷ ರೂ. ಹಣ ಹಾಕಿದ್ದೇನೆ. ಬಿಬಿಎಂಪಿ ಕಚೇರಿ ಇರುವುದು ಕರಗ ಸಮಿತಿ ಜಾಗದಲ್ಲಿ. ಸೇವೆಯ ರೂಪದಲ್ಲಿ ಬಿಬಿಎಂಪಿ ಸೇವೆ ಮಾಡಿಕೊಂಡು ಬರುತ್ತಿದೆ. ಇಓ (ಆಡಳಿತಾಧಿಕಾರಿ) ತಪ್ಪಿಸಿಕೊಂಡು ತಿರುಗಿದ್ದಾರೆ. ಕಾಣದ ಕೈಗಳು ಕರಗಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡುತ್ತಿವೆ. ಇದರಿಂದ ತುಂಬಾ ಬೇಸರವಾಗಿದೆ. ಡಿಸಿ ಈ ತನಕ ದೇವಸ್ಥಾನಕ್ಕೆ ಬಂದಿಲ್ಲ. ಡಿಸಿ ಸ್ಥಳ ಪರಿಶೀಲನೆ ಮಾಡಿಲ್ಲ. ಡಿಸಿ ಇಲ್ಲಿ ತನಕ ತಾಯಿ ದರ್ಶನ ಮಾಡಿಲ್ಲ’ ಎಂದು ಪೂಜಾರಿ ಎ.ಜ್ಞಾನೇಂದ್ರ ಸ್ವಾಮಿ ಆರೋಪಿಸಿದ್ದಾರೆ.

ಆರೋಪ ಅಲ್ಲಗಳೆದ ರಾಮಲಿಂಗಾ ರೆಡ್ಡಿ

ಆದರೆ, ಕರಗಕ್ಕೆ ಹಣ ಬಿಡುಗಡೆಯಾಗಿಲ್ಲ ಎಂಬ ಆರೋಪವನ್ನು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅಲ್ಲಗಳೆದಿದ್ದಾರೆ. ಶುಕ್ರವಾರ ಬೆಳಗ್ಗೆಯೇ 11 ಗಂಟೆಗೆ ಎಡಿಸಿ ಖಾತೆಗೆ ಹಣ ಹೋಗಿದೆ. ಅವರೇ ಜವಾಬ್ದಾರಿ ತೆಗೆದುಕೊಂಡು ಖರ್ಚು ವೆಚ್ಚ ನೋಡುತ್ತಾರೆ. ಪ್ರತಿ ವರ್ಷ ಮಹಾನಗರ ಪಾಲಿಕೆ ಹಣ ಬಿಡುಗಡೆ ಮಾಡುತ್ತದೆ. ಅನುದಾನದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಹೆಚ್ಚುವರಿ ಹಣ ಖರ್ಚು ಮಾಡಿದರೂ ಸಹ ಬಿಡುಗಡೆ ಮಾಡುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ
ಐಪಿಎಲ್ ಬೆಟ್ಟಿಂಗ್ ವಿರುದ್ಧ ಭರ್ಜರಿ ಕಾರ್ಯಾಚರಣೆ: 1.15 ಕೋಟಿ ರೂ. ಸೀಜ್
ಕೆಎಸ್​​ಸಿಎ ಸದಸ್ಯರಿಂದಲೇ ಐಪಿಎಲ್ ಟಿಕೆಟ್ ಬ್ಲ್ಯಾಕ್​ನಲ್ಲಿ ಮಾರಾಟ ಶಂಕೆ
ಪೊಲೀಸರಿಗೆ ಸವಾಲಾದ ಬೆಂಗಳೂರಿನ ಲೈಂಗಿಕ ದೌರ್ಜನ್ಯ ಕೇಸ್: ಆರೋಪಿ ಸುಳಿವಿಲ್ಲ!
ಈ ರಸ್ತೆಗಳಲ್ಲಿ ಭಾನುವಾರ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಸರ್ಕಾರದ ವಿರುದ್ಧ ಕರಗ ಸಮಿತಿ ಅಧ್ಯಕ್ಷ ಆಕ್ರೋಶ

ಕರಗಕ್ಕೆ ಹಣ ಬಿಡುಗಡೆ ಆಗಿದೆ ಎಂಬುದನ್ನು ಕರಗ ಸಮಿತಿ ಅಧ್ಯಕ್ಷ ಸತೀಶ್ ನಿರಾಕರಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸತತವಾಗಿ 6 ವರ್ಷಗಳಿಂದ ಕರಗ ಮಾಡಿಸುತ್ತಿದ್ದೇನೆ. ಈ ಬಾರಿ ಕರಗ ಶುರುವಾಗಿ 8 ದಿನಗಳು ಆಗಿವೆ. ಪಿ.ಆರ್.ರಮೇಶ್ ಅವರ ಪಿತೂರಿಯಿಂದಲೇ ಹಣ ಬಿಡುಗಡೆಯಾಗಿಲ್ಲ. 40 ಲಕ್ಷ ರೂ. ಯಾರ ಅಕೌಂಟ್​​ಗೆ ಹೋಯಿತು? ಒಂದು ರೂಪಾಯಿಯನ್ನೂ ಕರಗ ಮಾಡಲು ಕೊಟ್ಟಿಲ್ಲ. ನಿಮಗೆ ಕೊಡಲು ಸಾಧ್ಯವಿಲ್ಲ ಅಂದರೆ, ಆಗಲ್ಲ ಎನ್ನಿ. ನಾವೇ ದುಡ್ಡು ಹಾಕಿ ಕರಗ ಮಾಡಿಕೊಳ್ಳುತ್ತೇವೆ. ಈಗಾಗಲೇ ಕರಗಕ್ಕೆ 60 ಲಕ್ಷ ರೂ. ಖರ್ಚು ಮಾಡಿದ್ದೇವೆ. ಕರಗ ಪೂಜಾರಿ 20 ಲಕ್ಷ ರೂ. ಕೊಟ್ಟಿದ್ದಾರೆ. ನಾನು 20 ಲಕ್ಷ ರೂಪಾಯಿ ಹಾಕಿದ್ದೇನೆ. ಬಾಲಕೃಷ್ಣ 20 ಲಕ್ಷ ರೂಪಾಯಿ ಹಾಕಿ ಇಲ್ಲಿಯವರೆಗೆ ಖರ್ಚು ಮಾಡಿದ್ದೇವೆ. ಇವರು ಗುತ್ತಿಗೆ ಮಾಡಿರುವುದು ನಾಮಕಾವಸ್ತೆಗೆ. ಗುತ್ತಿಗೆದಾರನಿಗೆ ಪೋನ್ ಮಾಡಿದ್ರೆ ಬೆಳಗಾವಿಯಲ್ಲಿ ಇದ್ದೇನೆ ಎನ್ನುತ್ತಾರೆ. ರಾಜು ಎನ್ನುವವರು ಗುತ್ತಿಗೆ ತೆಗೆದುಕೊಂಡಿದ್ದಾರೆ. ಅವರಿಗೆ ಒಂದು ರೂಪಾಯಿ ಹಣ ರಿಲೀಸ್ ಮಾಡಿಲ್ಲ. ಇಒ ಅಕೌಂಟ್​​​ಗೆ ದುಡ್ಡು ಹಾಕಬೇಕಿತ್ತು. ಆದರೆ ಡಿಸಿ ಅಕೌಂಟ್​​ಗೆ ದುಡ್ಡು ಹಾಕಿದ್ದಾರೆ. ಇದು ಕೂಡ ನ್ಯಾಯಾಲಯದ ಪ್ರಕಾರ ತಪ್ಪು’ ಎಂದು ಸತೀಶ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಗಳಲ್ಲಿ ಭಾನುವಾರ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಕೋರ್ಟ್ ಆದೇಶದ ಪ್ರಕಾರ ದೇವಸ್ಥಾನದ ಇಒ ಹಾಗೂ ಸಮಿತಿ ನಡೆಸಬೇಕು. ಕರಗ ನಡೆಸಲು ಯೋಗ್ಯತೆ ಇಲ್ಲ ಅಂದರೆ ಬಿಟ್ಟು ಬಿಡಿ. ಮುಜರಾಯಿ ಇಲಾಖೆಯಿಂದ ತೆಗೆದು ನಮ್ಮ ಕೈಗೆ ದೇವಸ್ಥಾನವನ್ನು ಕೊಟ್ಟುಬಿಡಿ. ನಿಮಗೆ ದೇವಾಲಯ ಹುಂಡಿ ದುಡ್ಡು ಬೇಕು. ದೇವಸ್ಥಾನದ ಆಸ್ತಿ ಬೇಕು, ಆದ್ರೆ ಕರಗಕ್ಕೆ ದುಡ್ಡು ಕೊಡಲು ಆಗಲ್ಲ. ನಮ್ಮ 10 ಮನೆಯವರು ದುಡ್ಡು ಹಾಕಿ ಕರಗ ಮಾಡುತ್ತೇವೆ ಎಂದು ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ