ಐಪಿಎಲ್ ಬೆಟ್ಟಿಂಗ್ ವಿರುದ್ಧ ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 1.15 ಕೋಟಿ ರೂ. ಸೀಜ್
ಬೆಂಗಳೂರಿನಲ್ಲಿ ಐಪಿಎಲ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ವಾರದಲ್ಲಿ 1.15 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದು, ಹಲವಾರು ನಕಲಿ ಬೆಟ್ಟಿಂಗ್ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಪತ್ತೆ ಹಚ್ಚಲಾಗಿದೆ. ಐಪಿಎಲ್ ಟಿಕೆಟ್ ಅಕ್ರಮ ಮಾರಾಟ ದಂಧೆ ವಿರುದ್ಧದ ಕಾರ್ಯಾಚರಣೆ ಬೆನ್ನಲ್ಲೇ ಬೆಟ್ಟಿಂಗ್ ವಿರುದ್ಧದ ಕಾರ್ಯಾಚರಣೆಯೂ ನಡೆದಿದೆ.

ಬೆಂಗಳೂರು, ಏಪ್ರಿಲ್ 12: ಒಂದೆಡೆ ಐಪಿಎಲ್ ಟಿಕೆಟ್ ಬ್ಲ್ಯಾಕ್ನಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಸಿಸಿಬಿ ಪೊಲೀಸರು (CCB Police) ಕಾರ್ಯಾಚರಣೆ ನಡೆಸುತ್ತಿದ್ದರೆ ಮತ್ತೊಂದೆಡೆ, ಬೆಟ್ಟಿಂಗ್ (IPL Betting) ವಿರುದ್ಧವೂ ಕಾರ್ಯಾಚರಣೆ ತೀವ್ರಗೊಂಡಿದೆ. ವಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ (Bengaluru) ಐದು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು 1.15 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಗುರುವಾರ ಒಂದೇ ದಿನ 86 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಪಾರ್ಕರ್, ರಿಲೆಕ್ಸ್, ದುಬೈ ಎಕ್ಸ್‌ಚೇಂಜ್, ಲೋಟಸ್ ಮತ್ತು ಬಿಗ್‌ಬುಲ್ 24/7 ಸೇರಿದಂತೆ ಹಲವಾರು ಸಂಶಯಾಸ್ಪದ ನಕಲಿ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಫೋನ್ ಅಪ್ಲಿಕೇಶನ್‌ಗಳನ್ನೂ ಪತ್ತೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸಿದ್ಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಈ ಆ್ಯಪ್‌ಗಳು, ವೆಬ್‌ಸೈಟ್‌ಗಳನ್ನು ತೆರಯಲಾಗುತ್ತಿದೆ. ಸಾವಿರಾರು ಜನರು ಈ ಅಪ್ಲಿಕೇಶನ್‌ಗಳಿಗೆ ಲಾಗಿನ್ ಆಗುತ್ತಾರೆ. ಟಾಸ್‌ನಿಂದ ಹಿಡಿದು ಇಡೀ ಪಂದ್ಯದವರೆಗೆ ವಿವಿಧ ಅಂಶಗಳ ಮೇಲೆ ಬೆಟ್ಟಿಂಗ್‌ಗೆ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿವೆ ಎಂದು ಪೊಲೀಸರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಪಂಟರ್‌ಗಳು ಟಾಸ್ ಯಾರು ಗೆಲ್ಲುತ್ತಾರೆ, ಮ್ಯಾಚ್ ರಿಸಲ್ಟ್ ಏನಾಗುತ್ತದೆ ಇತ್ಯಾದಿಗಳ ಮೇಲೆ ಬೆಟ್ ಮಾಡಬಹುದಾಗಿದೆ.
ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಆಯ್ಕೆಗಳಲ್ಲಿ ಬೆಟ್ಟಿಂಗ್ ಮಾಡಲು ಪಂಟರ್‌ಗಳು ಡಿಜಿಟಲ್ ನಾಣ್ಯಗಳನ್ನು ಬಳಸುತ್ತಾರೆ. ಇದನ್ನು ಅವರು ‘ಚಿಪ್ಸ್’ ಎಂದು ಕರೆಯುತ್ತಾರೆ. ಅಪ್ಲಿಕೇಶನ್‌ಗಳು ಪ್ರೀಮಿಯಂ ಮತ್ತು ಸಾಮಾನ್ಯ ಮಟ್ಟದ ಬೆಟ್ಟಿಂಗ್ ಅನ್ನು ಸಹ ನೀಡುತ್ತವೆ. ಹಲವಾರು ಮಧ್ಯವರ್ತಿಗಳು ಪಂಟರ್‌ಗಳಿಗೆ ಪ್ರೀಮಿಯಂ ಖಾತೆಗಳನ್ನು ನೀಡುತ್ತಾರೆ ಎಂದು ಪೊಲೀಸರು ತಿಳಿಸಿರುವುದನ್ನು ವರದಿ ಉಲ್ಲೇಖಿಸಿದೆ.
ವೃತ್ತಿಯಲ್ಲಿ ಅಡುಗೆಯವನಾದ ರಾಮಕೃಷ್ಣ ಎನ್ ಎಂಬ ಮಧ್ಯವರ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈತ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ‘ಚಿಪ್’ಗಳಿಗಾಗಿ ಪ್ರೀಮಿಯಂ ಖಾತೆಗಳ ವಿತರಣೆಯ ಮೇಲ್ವಿಚಾರಣೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ರಾಮಕೃಷ್ಣ ಪಂಟರ್‌ಗಳನ್ನು ನಿರ್ವಹಿಸುತ್ತಿದ್ದ. ಅವರು ಹಣ ಪಾವತಿಸಿ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಲಾಗಿನ್ ಕ್ರೆಡೆನ್ಶಿಯಲ್ಗಳನ್ನು ಪಡೆಯುತ್ತಿದ್ದರು. ಪ್ರತಿ ಖರೀದಿಯೊಂದಿಗೆ, ‘ಚಿಪ್ಸ್’ ಅನ್ನೂ ಅವರು ಖರೀದಿಸುತ್ತಿದ್ದರು. ಬೆಟ್ಟಿಂಗ್ ದಂಧೆಕೋರರು ಕೆಲವೇ ನಿಮಿಷಗಳಿಗಾಗಿ ಖಾತೆಗಳನ್ನು ಖರೀದಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಕೆಎಸ್ಸಿಎ ಸದಸ್ಯರಿಂದಲೇ ಐಪಿಎಲ್ ಟಿಕೆಟ್ ಬ್ಲ್ಯಾಕ್ನಲ್ಲಿ ಮಾರಾಟ ಶಂಕೆ: ಸಿಸಿಬಿ ಪೊಲೀಸರಿಂದ ನಿಗಾ
ಈ ಜೂಜಾಟವು ಬಾಲ್-ಟು-ಬಾಲ್ ಅಥವಾ ಕೇವಲ ಒಂದು ಬಾಲ್‌ಗಾಗಿ ನಡೆಯುವುದರಿಂದ, ಪಂಟರ್‌ಗಳು ಈ ಖಾತೆಗಳನ್ನು 10-20 ನಿಮಿಷಗಳಿಗಷ್ಟೇ ಖರೀದಿಸುತ್ತಾರೆ ಎಂದು ಸಿಸಿಬಿಯ ವಿಶೇಷ ವಿಚಾರಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿರುವದಾಗಿಯೂ ವರದಿ ಹೇಳಿದೆ.