ಬೆಂಗಳೂರು-ಕೊಚ್ಚಿ ವಂದೇ ಭಾರತ್ ಎಕ್ಸ್‌ಪ್ರೆಸ್: ಅಧಿಕೃತ ವೇಳಾಪಟ್ಟಿ ಪ್ರಕಟ
ಬೆಂಗಳೂರು-ಕೊಚ್ಚಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಅಧಿಕೃತ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದೆ. ಈ ಹೊಸ ಅತಿವೇಗದ ರೈಲು ಕರ್ನಾಟಕ ಮತ್ತು ಕೇರಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಇದು ನವೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ, ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಬೆಂಗಳೂರಿನಿಂದ ಬೆಳಿಗ್ಗೆ 5:10 ಕ್ಕೆ ಹೊರಟು ಮಧ್ಯಾಹ್ನ 1:50 ಕ್ಕೆ ಎರ್ನಾಕುಲಂ ತಲುಪಲಿದೆ. ಇದು ದಕ್ಷಿಣ ಭಾರತದ ಪ್ರಯಾಣಿಕರಿಗೆ ಅನುಕೂಲಕರವಾಗಿದೆ.

ಬೆಂಗಳೂರು, ನವೆಂಬರ್ 2: ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ಹೈಸ್ಪೀಡ್ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ಭಾರತೀಯ ರೈಲ್ವೆ ಸಚಿವಾಲಯವು ಬೆಂಗಳೂರು–ಕೊಚ್ಚಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharath Express) ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಸಾರ್ವಜನಿಕ ಸೇವೆ ಪ್ರಾರಂಭಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್, ದಕ್ಷಿಣ ಭಾರತದಲ್ಲಿ ಸಂಚಾರ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.
ವೇಳಾಪಟ್ಟಿ
ಶುಕ್ರವಾರ ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ರೈಲು ಸಂಖ್ಯೆ 26651 ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತಿ ದಿನ ಬೆಳಗ್ಗೆ 5:10ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಳಿ, ಮಧ್ಯಾಹ್ನ 1:50ಕ್ಕೆ ಎರ್ನಾಕುಲಂ ಜಂಕ್ಷನ್ ತಲುಪಲಿದೆ. ಮರಳಿ ಪ್ರಯಾಣಕ್ಕಾಗಿ, ರೈಲು ಸಂಖ್ಯೆ 26652 ಎರ್ನಾಕುಲಂನಿಂದ ಮಧ್ಯಾಹ್ನ 2:20ಕ್ಕೆ ಹೊರಟು, ರಾತ್ರಿ 11:00ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.
ಈ ರೈಲು ಕೃಷ್ಣರಾಜಪುರಂ, ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶೂರ್ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರಲಿದೆ. ನಿಯಮಿತ ಸೇವೆ ಆರಂಭಕ್ಕೂ ಮೊದಲು ಪರೀಕ್ಷಾರ್ಥ ವಿಶೇಷ ರೈಲು ಸಂಚಾರ ಸಾಧ್ಯತೆಯೂ ಇದೆ. ದಕ್ಷಿಣ ಹಾಗೂ ನೈಋತ್ಯ ರೈಲ್ವೆ ವಲಯಗಳಿಗೆ ತ್ವರಿತ ಸಿದ್ಧತೆ ಮಾಡಲು ಸಚಿವಾಲಯ ನಿರ್ದೇಶನ ನೀಡಿದೆ.
ನವೆಂಬರ್ ಮಧ್ಯಭಾಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್
ಅಕ್ಟೋಬರ್ ಆರಂಭದಲ್ಲಿಯೇ ಬೆಂಗಳೂರಿನಿಂದ ಕೇರಳದ ಪ್ರಮುಖ ನಗರಗಳಾದ ತ್ರಿಶೂರ್ ಮತ್ತು ಪಾಲಕ್ಕಾಡ್‌ಗಳೊಂದಿಗೆ ಸಂಪರ್ಕಿಸುವ ಈ ವಿಶೇಷ ರೈಲುಗಳ ಕುರಿತ ಘೋಷಣೆ ಮಾಡಲಾಗಿತ್ತು. ಇದು ವಿಶೇಷವಾಗಿ ಬೆಂಗಳೂರಿನ ತಂತ್ರಜ್ಞಾನ ಮತ್ತು ಸೇವಾ ವಲಯಗಳಲ್ಲಿ ಕೆಲಸ ಮಾಡುವ ಮಲಯಾಳಿ ಸಮುದಾಯದಲ್ಲಿ ಗಮನಾರ್ಹ ಉತ್ಸಾಹವನ್ನು ಹುಟ್ಟುಹಾಕಿತ್ತು. ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರ ಹೇಳಿರುವಂತೆ ಎರ್ನಾಕುಲಂ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ನವೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




