ಬಿಜೆಪಿ ಸರ್ಕಾರದ ಅವಧಿಯಲ್ಲಿನ 3 ಕೋಟಿ ರೂ ಕಾಮಗಾರಿ ನೀರಿನಲ್ಲಿ ಹೋಮ
ಬೆಂಗಳೂರಿನ ಕೆಆರ್ ಸರ್ಕಲ್‌ನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ 'ಐ ಲವ್ ಬೆಂಗಳೂರು' ಕಾರಂಜಿ ಇದೀಗ ಹಾಳಾಗಿದೆ. ಕಳಪೆ ಕಾಮಗಾರಿ ಮತ್ತು ನಿರ್ವಹಣೆ ಮಾಡದಿರುವುದೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಈ ಬಗ್ಗೆ ಪಾದಚಾರಿಗಳು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು, ನವೆಂಬರ್ 23: ನಗರದ ಹೃದಯಭಾಗದಲ್ಲೇ ಮತ್ತೊಂದು ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂದಿನ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಿರ್ಮಿಸಿದ್ದ ಐ ಲವ್ ಬೆಂಗಳೂರು ಎನ್ನುವ ವಾಟರ್ ಫೌಂಟೆನ್ (Water fountain) ಹಾಳಾಗಿದೆ. ಆ ಮೂಲಕ ಮೂರು ಕೋಟಿ ರೂ. ವೆಚ್ಚದಲ್ಲಿ ನಡೆದಿದ್ದ ಕಾಮಗಾರಿ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಹಾಳಾದ ವಾಟರ್ ಫೌಂಟೆನ್
ಕೆಆರ್ ಸರ್ಕಲ್ ಜಂಕ್ಷನ್ ಬೆಂಗಳೂರು ನಗರದ ಹೃದಯಭಾಗ. ಈ ಜಂಕ್ಷನ್ನಲ್ಲಿ ನಿರ್ಮಾಣ ಮಾಡಿದ್ದ ಐ ಲವ್ ಬೆಂಗಳೂರು ಅನ್ನೋ ವಾಟರ್ ಫೌಂಟೆನ್ ಹತ್ತಿರ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಅದು ಹಾಳಾಗಿದೆ.
ಇದನ್ನೂ ಓದಿ: ಜನರ ರಕ್ಷಣೆ ಮಾಡುವ ಪೊಲೀಸರಿಗೇ ಇಲ್ಲಾ ರಕ್ಷಣೆ: ಇದೆಂಥಾ ಸ್ಟೇಷನ್?
2021ರ ವೇಳೆ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಅವಧಿಯಲ್ಲಿ ಕೆಆರ್ ಸರ್ಕಲ್ ಜಂಕ್ಷನ್ ಅಭಿವೃದ್ಧಿ ಮಾಡಲಾಗಿತ್ತು. ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ಕೊಟ್ಟು ಕೆಲಸ ಮಾಡಿಸಿದ್ದ ಅಂದಿನ ಬಿಬಿಎಂಪಿ ನಂತರ ಆ ಕಂಪನಿ ನಿರ್ವಹಣೆ ಮಾಡುತ್ತಿದೆಯಾ ಇಲ್ಲವಾ ಎನ್ನುವುದನ್ನು ನೋಡುವುದನ್ನೇ ಮರೆತಂತಿದೆ. ಕಾಬೂಲ್ ಶಿಲೆ, ಸರ್ಕಲ್ ವಿನ್ಯಾಸ, ಡಿಸ್ಕೋ ಲೈಟಿಂಗ್ ಹಾಗೂ ಕಾರಂಜಿ ಈಗ ಹಾಳಾಗಿದೆ. ಈ ಬಗ್ಗೆ ಪಾದಚಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಕಾರಂಜಿ, ಲೈಟಿಂಗ್ಗೆ ಹಾಕಿದ್ದ ವಿದ್ಯುತ್ ಡಿಪಿ ಬಾಕ್ಸ್ ಸಹ ಹಾಳಾಗಿದೆ. ವೈರ್ಗಳು ಆತಂಕ ಮೂಡಿಸುವ ಸ್ಥಿತಿಯಲ್ಲಿವೆ. ಜೊತೆಗೆ ಬೆಸ್ಕಾಂ ಕೇಂದ್ರ ಕಚೇರಿ ಎದುರೇ ಈ ರೀತಿ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾರೂ ಗಮನಹರಿಸಿಲ್ಲ. ಒಂದು ವೇಳೆ ಮಳೆ ಬಂದು ವಿದ್ಯುತ್ ತಂತಿ ಯಾರಿಗಾದರೂ ತಾಕಿದರೆ ಯಾರು ಹೊಣೆ. ಇನ್ನಾದರೂ ಬೆಸ್ಕಾಂ ಹಾಗೂ ಜಿಬಿಎ ಎಚ್ಚೆತ್ತುಕೊಳ್ಳಬೇಕಿದೆ ಎಂದು ಗೋಪಾಲಕೃಷ್ಣ ಎನ್ನುವವರು ಹೇಳಿದ್ದಾರೆ.
ಇದನ್ನೂ ಓದಿ: ಇಂದಿಗೂ ಈ ಗ್ರಾಮಸ್ಥರ ನೆಮ್ಮದಿ ಆಳು ಮಾಡಿದೆ 30 ವರ್ಷದ ಹಿಂದಿನ ಅದೊಂದು ವ್ಯವಹಾರ
ನಮ್ಮ ಜಿಬಿಎ ಅಧಿಕಾರಿಗಳಿಗೆ ಕಾಮಗಾರಿ ನಡೆಸಿ, ಉದ್ಘಾಟನೆ ಮಾಡುವಾಗ ಇರುವ ಉತ್ಸಾಹ ಅದನ್ನು ನಿರ್ವಹಣೆ ಮಾಡುವುದರಲ್ಲಿ ಇರುವುದಿಲ್ಲ ಎನ್ನುವುದಕ್ಕೆ ಈ ಕಾಮಗಾರಿ ಉತ್ತಮ ಉದಾಹರಣೆ ಎನ್ನಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



