ರಾಹುಲ್ ಗಾಂಧಿ ಅಂಗಳಕ್ಕೆ ಕಾಂಗ್ರೆಸ್ ಕುರ್ಚಿ ಕಿತ್ತಾಟ: ಮಂಗಳವಾರವೇ ದೆಹಲಿಯಲ್ಲಿ ಖರ್ಗೆ, ರಾಹುಲ್ ಭೇಟಿ ಸಾಧ್ಯತೆ
ಕರ್ನಾಟಕ ಕಾಂಗ್ರೆಸ್‌ನಲ್ಲಿ ಇಷ್ಟು ದಿನ ಒಳಗೊಳಗೆ ಕುದಿಯುತ್ತಿದ್ದ ಅಧಿಕಾರ ಹಂಚಿಕೆಯ ಜ್ವಾಲಾಮುಖಿ ಸ್ಫೋಟಗೊಂಡಿದೆ. ಕಾಂಗ್ರೆಸ್‌ನ ದಿಗ್ಗಜ ನಾಯಕರಾದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ಕುರ್ಚಿ ಕಾಳಗಕ್ಕೆ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೈರಾಣಾಗಿದ್ದಾರೆ. ಸದ್ಯ ಕುರ್ಚಿ ಕಿತ್ತಾಟದ ಚೆಂಡು ರಾಹುಲ್ ಗಾಂಧಿ ಅಂಗಳಕ್ಕೆ ತಲಪುತ್ತಿದೆ.

ಬೆಂಗಳೂರು, ನವೆಂಬರ್ 24: ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ಬೆಂಕಿಯಲ್ಲಿ ಬೇಯುತ್ತಿದೆ. ದೆಹಲಿಯಿಂದ ಹಿಡಿದು ಬೆಂಗಳೂರಿನವರೆಗೆ ನಾಯಕರ ಮಧ್ಯೆ ಸಭೆಗಳ ಮೇಲೆ ಸಭೆ ನಡೆಯುತ್ತಿದೆ. ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬೆಂಗಳೂರಿನ ನಿವಾಸವಂತೂ ಹೈವೋಲ್ಟೇಜ್ ಸಭೆಗಳ ಪವರ್ ಸೆಂಟರ್ ಆಗಿದೆ. ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಎರಡೂ ಬಣಗಳ ನಾಯಕರು ದೆಹಲಿಗೆ ಪರೇಡ್ ನಡೆಸುತ್ತಿದ್ದಂತೆಯೇ ಖರ್ಗೆ ಎಚ್ಚೆತ್ತುಕೊಂಡಿದ್ದರು. ಸಮಸ್ಯೆ ಇತ್ಯರ್ಥಕ್ಕೆ ಬೆಂಗಳೂರಿಗೆ ಬಂದರು. ಆದರೆ, ಈ ಸಮಸ್ಯೆ ಎಐಸಿಸಿ ಅಧ್ಯಕ್ಷರ ವ್ಯಾಪ್ತಿಯನ್ನೂ ಮೀರಿದ ಬಿಕ್ಕಟ್ಟಿನಂತಾಗಿದೆ. ಇದೇ ಕಾರಣಕ್ಕೆ, ‘ನನ್ನ ಬಳಿ ಏನೂ ಇಲ್ಲ’ ಎಂದು ಖರ್ಗೆ ಹೈಕಮಾಂಡ್ ನಾಯಕರತ್ತ ಬೊಟ್ಟು ಮಾಡಿ ತೋರಿಸಿದ್ದಾರೆ.
ಬೆಂಗಳೂರಿನಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಚಿವರ ದಂಡೇ ಅಹವಾಲು ಹೊತ್ತು ತರುತ್ತಿದೆ. ಸಚಿವರಾದ ಕೆಜೆ ಜಾರ್ಜ್, ಹೆಚ್.ಸಿ.ಮಹದೇವಪ್ಪ, ವೆಂಕಟೇಶ್ ಭಾನುವಾರ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಖರ್ಗೆ ಜೊತೆಗೆ ಮಾತುಕತೆ ಬಳಿಕ ಸಿಎಂ ಸಿದ್ದರಾಮಯ್ಯ ನಿವಾಸಕ್ಕೂ ಸಚಿವರು ಭೇಟಿ ನೀಡಿ ಸುದೀರ್ಘವಾಗಿ ಮಾತನಾಡಿದ್ದಾರೆ. ಆದರೆ, ಏನು ಮಾತನಾಡಿದ್ದರು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ಸಿಎಂ, ಡಿಸಿಎಂ ಬಣದ ಅಹವಾಲು ಆಲಿಸಿದ ಖರ್ಗೆ
ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಖರ್ಗೆ, ಸಿಎಂರಿಂದ ಹಿಡಿದು ಸಚಿವರು, ಶಾಸಕರಾದಿಯಾಗಿ ಎಲ್ಲರಿಂದ ವರದಿ ಪಡೆದಿದ್ದಾರೆ. ಮೊನ್ನೆ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ನಲ್ಲಿ ಏನೆಲ್ಲಾ ಅಭಿಪ್ರಾಯ ಮಂಡನೆ ಆಯಿತು ಎಂಬುದರ ಬಗ್ಗೆ ಸಚಿವ ಮಹದೇವಪ್ಪ ಮತ್ತು ವೆಂಕಟೇಶ್ ಸಂಪೂರ್ಣ ಮಾಹಿತಿಯನ್ನ ಖರ್ಗೆಗೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡಾ ಶನಿವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ಹಲವು ವಿಚಾರ ಪ್ರಸ್ತಾಪಿಸಿದ್ದಾರೆ.
ಖರ್ಗೆಗೆ ಸಿದ್ದರಾಮಯ್ಯ ಹೇಳಿದ್ದೇನು?
ಪಕ್ಷದಲ್ಲಿ ಹೀಗೆ ಗೊಂದಲಗಳಾದರೆ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲವನ್ನ ಬಗಹರಿಸಿ. ಡಿಕೆ ಆಪ್ತರಿಂದ ಸಹಿ ಸಂಗ್ರಹ ಮಾಡ್ತಿದ್ದಾರೆ. ಇದೆಲ್ಲಾ ಪಕ್ಷಕ್ಕೆ ಒಳ್ಳೆಯದಲ್ಲ. ನೀವೇ ಸರಿಪಡಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಬಣದ ಸಚಿವರ ಅಹವಾಲು, ಅಭಿಪ್ರಾಯ, ದೂರು ದುಮ್ಮಾನಗಳನ್ನ ಮಲ್ಲಿಕಾರ್ಜುನ ಖರ್ಗೆ ಆಲಿಸಿದ್ದಾರೆ. ರಾಹುಲ್ ಗಾಂಧಿ ಜೊತೆ ಮಾತನಾಡುವ ತನಕ ಇರಿ ಎಂದು ಸಮಾಧಾನಪಡಿಸಿದ್ದಾರೆ. ಸಿದ್ದರಾಮಯ್ಯ ಟೀಮ್ ಮಾತ್ರವಲ್ಲ, ಡಿ.ಕೆ.ಶಿವಕುಮಾರ್ ಬಣವೂ ಕೂಡ ಖರ್ಗೆ ಅವರನ್ನ ದೆಹಲಿಯಲ್ಲೇ ಭೇಟಿ ಮಾಡಿತ್ತು. ಇನ್ನು, ಬೆಂಗಳೂರಿಗೆ ಬಂದ ಖರ್ಗೆ ಅವರನ್ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾಗಿ ಚರ್ಚಿಸಿದ್ರು. ಈವರೆಗೆ ಡಿ.ಕೆ.ಶಿವಕುಮಾರ್ ಭೇಟಿ ಮಾಡಿಲ್ಲ. ಆದರೆ, ನನ್ನ ಮನೆಗೆ ಅವರ ಮನೆ ನೂರು ಮೀಟರ್ ದೂರ ಅಷ್ಟೇ ಇದೆ ಅನ್ನುವ ಮೂಲಕ ಖರ್ಗೆ ಅಚ್ಚರಿ ಮೂಡಿಸಿದ್ದಾರೆ.
ಮಂಗಳವಾರವೇ ರಾಹುಲ್ ಭೇಟಿ ಆಗ್ತಾರಾ ಮಲ್ಲಿಕಾರ್ಜುನ ಖರ್ಗೆ?
ಮಲ್ಲಿಕಾರ್ಜುನ ಖರ್ಗೆ ಮಂಗಳವಾರವೇ ದೆಹಲಿಗೆ ತೆರಳಲಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಅವರಿಗೆ ಸಂಪೂರ್ಣ ವರದಿ ನೀಡಲು ಸಿದ್ಧರಾಗಿದ್ದಾರೆ. ಹೀಗಾಗಿ, ರಾಜ್ಯ ನಾಯಕರು ಕೂಡಾ ರಾಹುಲ್ ಗಾಂಧಿ ಅವರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ ಎನ್ನುತ್ತಿದ್ದಾರೆ.
ಸಚಿವ ಕೆ.ಜೆ.ಜಾರ್ಜ್ ಮತ್ತು ಸಚಿವರು ಭಾನುವಾರ ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನೂ ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನೂ ಮೀಟ್ ಮಾಡಿ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಖುದ್ದು ಸಚಿವ ಜಾರ್ಜ್ ನಿವಾಸಕ್ಕೆ ನೇರವಾಗಿ ಹೋಗಿದ್ದಾರೆ. ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಜಾರ್ಜ್ ನಿವಾಸದಲ್ಲಿ ರಹಸ್ಯ ಮಾತುಕತೆ ನಡೆಸಿದ್ದಾರೆ. ವಿಷಯ ಏನೆಂದರೆ, ಸಚಿವ ಜಾರ್ಜ್ ಹೈಕಮಾಂಡ್ ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ, ಡಿಕೆಶಿ ಭೇಟಿ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ: ಸಿಎಂ ಕುರ್ಚಿ ಕಿತ್ತಾಟಕ್ಕೆ ಅಸಹಾಯಕತೆ ಹೊರಹಾಕಿದ ಖರ್ಗೆ
ಒಟ್ಟಿನಲ್ಲಿ, ರಾಜ್ಯ ಕಾಂಗ್ರೆಸ್‌ನ ಕುರ್ಚಿ ಕಲಹಕ್ಕೆ ಅಂತ್ಯ ಹಾಡಲು ರಾಹುಲ್ ಗಾಂಧಿಯೇ ಬರಬೇಕಿದೆ. ಹೀಗಾಗಿ, ಎಲ್ಲರ ಚಿತ್ತ ಈಗ ದೆಹಲಿಯಲ್ಲಿ ಖರ್ಗೆ, ರಾಹುಲ್ ಭೇಟಿಯತ್ತ ನೆಟ್ಟಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 am, Mon, 24 November 25




