ಶಿರಾಡಿ ರಸ್ತೆಯಲ್ಲಿ ಮುಗಿಯದ ಸಂಕಷ್ಟ: 8 ವರ್ಷಗಳಾದರೂ ಮುಗಿಯದ 45 ಕಿಮೀ ಕಾಮಗಾರಿ!
ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿ ರಸ್ತೆ ಕಾಮಗಾರಿ ಶುರುವಾಗಿ 8 ವರ್ಷಗಳೆ ಕಳೆದಿವೆ. ಆದರೂ ಇನ್ನೂ ಮುಗಿದಿಲ್ಲ! 45 ಕಿಮೀ ಕಾಮಗಾರಿ ಮಾಡಲು ಇಷ್ಟೊಂದು ವರ್ಷಗಳೇ ಬೇಕಾ? ಕರ್ನಾಟಕದ ಪ್ರಮುಖ ರಾಷ್ಟ್ರಿಯ ಹೆದ್ದಾರಿ, ನಿತ್ಯ 25 ಸಾವಿರಕ್ಕೂ ಅಿಕ ಸಂಖ್ಯೆಯ ವಾಹನಗಳು ಓಡಾಡುವ ಈ ರಸ್ತೆಯ ಸ್ಥಿತಿ ಏಕೆ ಹೀಗೆ?

ಹಾಸನ, ನವೆಂಬರ್ 24: ಶಿರಾಡಿ ಘಾಟ್ (Shiradi Ghat) ರಾಷ್ಟ್ರೀಯ ಹೆದ್ದಾರಿ 75ರ ಪ್ರಯಾಣಿಕರ ಸಂಕಷ್ಟ, ಗೋಳು ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಮಳೆಗಾಲದಲ್ಲಿ ಭೂ ಕುಸಿತದ ಭಯ, ಬೇಸಿಗೆಯಲ್ಲಿ ಹೊಂಡ ಗುಂಡಿಗಳ ಆತಂಕ. ಎಂಟು ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ. ಇದರಿಂದಾಗಿ ಧೂಳುಮಯ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ, ನಿತ್ಯವೂ 25 ಸಾವಿರಕ್ಕೂ ಅಧಿಕ ಸಂಖ್ಯೆಯ ವಾಹನಗಳು ಸಂಚರಿಸುವ ರಾಜ್ಯದ ಜೀವನಾಡಿ ರಸ್ತೆ ಎಂದೇ ಕರೆಸಿಕೊಳ್ಳುವ ಶಿರಾಡಿ ಘಾಟ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಹಾಸನದಿಂದ (Hassan) ಬೆಂಗಳೂರು ನಡುವಿನ ಚತುಷ್ಪತ ರಸ್ತೆ ಕಾಮಗಾರಿ ಮುಗಿದು ದಶಕವೇ ಕಳೆದಿದೆ. ಆದರೆ, ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್ ವ್ಯಾಪ್ತಿಯ ಮಾರನಹಳ್ಳಿವರೆಗಿನ 45 ಕಿಲೋಮೀಟರ್ ರಸ್ತೆ ಕಾಮಗಾರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ಸದ್ಯ ಹಾಸನದಿಂದ ಸಕಲೇಶಪುರದ ವರೆಗಿನ ಕಾಮಗಾರಿ ಮುಗಿದಿದೆ. ಆದರೆ ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಕಾಮಗಾರಿಗೆ ನೂರೆಂಟು ವಿಘ್ನಗಳು. ಮಳೆಗಾಲದಲ್ಲಿ ಮಳೆ ನೆಪವೊಡ್ಡಿ ಕಾಮಗಾರಿ ವಿಳಂಬಮಾಡುವ ಅಧಿಕಾರಿಗಳು ಮಳೆ ನಿಂತ ಮೇಲಾದರೂ ಕಾಮಗಾರಿ ಚುರುಗೊಳಿಸುತ್ತಿಲ್ಲ. ಸದ್ಯ ಈಗಲೂ ಅಲ್ಲಲ್ಲಿ ಸ್ವಲ್ಪ ಕಾಮಗಾರಿ ನಡೆಯುತ್ತಿದೆ. ದೊಡ್ಡ ದೊಡ್ಡ ಹೊಂಡ ಗುಂಡಿಗಳ ನಡುವೆ ಸವಾರರು ಪರದಾಡುತ್ತಾ ಧೂಳುಮಯವಾದ ರಸ್ತೆಯಲ್ಲಿ ಪ್ರಯಾಣ ಮಾಡುತ್ತಾ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಬಂದರು ನಗರ ಮಂಗಳೂರು ಹಾಗು ರಾಜಧಾನಿ ಬೆಂಗಳೂರು ನಡುವೆ ವ್ಯಾಪಾರ ವಾಣಿಜ್ಯಸರಕು ಸಾಗಣೆ, ಜೊತೆಗೆ ಎರಡೂ ಕಡೆಯಿಂದ ಅಪಾರ ಸಂಖ್ಯೆಯ ಜನರ ಸಂಚಾರವೂ ಇದೆ. ಜೊತೆಗೆ ರಾಜ್ಯದ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೂ ನಿತ್ಯವೂ ಸಹಸ್ರಾರು ಜನರು ಓಡಾಡುತ್ತಾರೆ. ಸರ್ಕಾರವೇನೋ ಎಂಟು ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಆದರೆ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ.
ಇದನ್ನೂ ಓದಿ: ಇದು ಅಪ್ಪಟ ಕನ್ನಡದ ಅಂಗಡಿ; ಇಲ್ಲಿ ಸಿಗೋ ವಸ್ತುಗಳೆಲ್ಲ ಹಳದಿ, ಕೆಂಪು ಬಣ್ಣದ್ದೇ
ಒಟ್ಟಿನಲ್ಲಿ ಮಳೆಗಾಲದಲ್ಲಿ ಸರಣಿ ಭೂ ಕುಸಿತದಿಂದ ಗಮನ ಸೆಳೆಯುವ ಶಿರಾಡಿ ಘಾಟ್ ರಸ್ತೆ, ಮಳೆ ನಿಂತಮೇಲೂ ಪ್ರಯಾಣಿಕರಿಗೆ ಇನ್ನಿಲ್ಲದ ಕಿರಿಕಿರಿಗೆ ಕಾರಣವಾಗುತ್ತಿದೆ. ಪ್ರತೀ ವರ್ಷ ಜೂನ್, ಡಿಸೆಂಬರ್ ಎಂದು ಗಡುವು ನಿಗದಿ ಮಾಡಲಾಗುತ್ತಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಲಕ್ಷಾಂತರ ಪ್ರಯಾಣಿಕರ ಪಾಲಿಕೆ ನರಕಮಯ ಪ್ರಯಾಣವಾಗಿ ಬದಲಾಗಿದೆ.



