ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ: ಸಿಎಂ ಕುರ್ಚಿ ಕಿತ್ತಾಟಕ್ಕೆ ಅಸಹಾಯಕತೆ ಹೊರಹಾಕಿದ ಖರ್ಗೆ
ಕರ್ನಾಟಕ ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಸದ್ದು ತೀವ್ರಗೊಳ್ಳುತ್ತಿದೆ. ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿನ ಬಣ ಬಡಿದಾಟ ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬಂದಿದ್ದು, ನಾಯಕರು ಖರ್ಗೆ ಭೇಟಿಯಾಗಿ ತಮ್ಮದೇ ದಾಳ ಉರುಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಎಐಸಿಸಿ ಅಧ್ಯಕ್ಷ ಖರ್ಗೆಯವರನ್ನು ಭೇಟಿಯಾಗಿ ನಾಯಕತ್ವ ಗೊಂದಲಕ್ಕೆ ಆದಷ್ಟು ಬೇಗ ತೆರೆ ಎಳೆಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಲ್ಲಿಕಾರ್ಜು ಖರ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, ತಮ್ಮ ಅಸಹಾಯುತೆಯನ್ನು ಹೊರಹಾಕಿದ್ದಾರೆ.

ಬೆಂಗಳೂರು, (ನವೆಂಬರ್ 23): ರಾಜ್ಯ ಕಾಂಗ್ರೆಸ್ ನಲ್ಲಿ (Karnataka Congress) ಈಗ ಸಿಎಂ ಕುರ್ಚಿ ಫೈಟ್ ಜೋರಾಗಿದೆ. ಸರ್ಕಾರಕ್ಕೆ ಎರಡುವರೆ ವರ್ಷ ತುಂಬಿಂದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಿಡಿದೆದ್ದಿದ್ದು, ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದ್ದಾರೆ. ಅಲ್ಲದೇ ಡಿಕೆಶಿ ಬಣದ ಶಾಸಕರು ದೆಹಲಿಗೆ ಹೋಗಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಡಿಕೆ ಶಿವಕುಮಾರ್ ರನ್ನು ಸಿಎಂ ಮಾಡಲೇಬೇಕೆಂದು ಬಹಿರಂಗವಾಗಿ ಕೆಲವರು ಹೇಳಿದ್ದಾರೆ. ಇನ್ನೊಂದೆಡೆ ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಪರೇಡ್ ನಡೆಸಿದ್ದು, ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಈ ಎಲ್ಲಾ ಬೆಳವಣಿಗೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಅಸಹಾಯಕತೆ ಹೊರಹಾಕಿದ ಖರ್ಗೆ
ಸದ್ಯ ಕರ್ನಾಟಕ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೆಂಗಳೂರಿನಲ್ಲಿಂದು ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ/ ರಾಜ್ಯದಲ್ಲಿನ ಸದ್ಯದ ಬೆಳವಣಿಗೆ ಬಗ್ಗೆ ನಾನು ಏನೂ ಹೇಳಲ್ಲ. ಈಗ ನಡೆದ ವಿದ್ಯಮಾನದ ಬಗ್ಗೆ ಹೇಳಲು ನನ್ನ ಬಳಿ ಏನೂ ಇಲ್ಲ. ಯಾವುದೇ ವಿಚಾರದ ಬಗ್ಗೆಯೂ ಹೇಳುವುದಕ್ಕೆ ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅಸಹಾಯಕತೆ ಹೊರಹಾಕಿದ್ದಾರೆ.
ಇದನ್ನೂ ನೋಡಿ: ಸಿಎಂ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ರಿಯಾಕ್ಷನ್, ನವೆಂಬರ್ ಕ್ರಾಂತಿ ಆಗುತ್ತಾ?
ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ ಅಧ್ಯಕ್ಷ
ಮೂರು ದಿನದಿಂದ ಇಲ್ಲೇ ಇದ್ದೇನೆ. ನನಗೆ ತುಂಬಾ ಬೇಜಾರ್ ಆಗಿದೆ. ನನ್ನ ಹತ್ತಿರ ಹೇಳಲು ಏನು ಇಲ್ಲ.ಸಧ್ಯದ ಬೆಳವಣಿಗೆ ಬಗ್ಗೆ ನಾನು ಏನು ಹೇಳಲ್ಲ. ನಡೆದ ವಿದ್ಯಮಾನದ ಬಗ್ಗೆ ನನಗೆ ಹೇಳಲು ಏನೂ ಇಲ್ಲ. ದಯವಿಟ್ಟು ನೀವೂ ಇಲ್ಲಿ ಕಾಯುವುದು ಬೇಡ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ತಗೆದುಕೊಳ್ಳುತ್ತೆ ಎಂದು ಕರ್ನಾಟಕ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ಬಗ್ಗೆ ಬಹಿರಂಗವಾಗಿಯೇ ಬೇಸರ ಹೊರಹಾಕಿದರು.
ಸಿದ್ದು, ಡಿಕೆಶಿ ಪಟ್ಟಿಗೆ ಹೈಕಮಾಂಡ್ ಅಸಹಾಯಕತೆ ಆಯ್ತಾ?
ಎಐಸಿಸಿ ಅಧ್ಯಕ್ಷರೇ ಈ ರೀತಿ ಅಸಹಾಯಕತೆ ಹೊರಹಾಕಿದ್ದಾರೆ ಅಂದರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಕಾಳಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಡಿಕೆ ಶಿವಕುಮಾರ್ ಸಿಎಂ ಕುರ್ಚಿ ಬೇಕೆ ಬೇಕು ಎಂದು ಪಟ್ಟು ಹಿಡಿದ್ದರೆ, ಇತ್ತ ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತೇನೆ ಎಂದು ಹಠಕ್ಕೆ ಬಿದ್ದಂತಿದೆ. ಹೀಗಾಗಿ ಪರಿಸ್ಥಿತಿ ಕೈಮಿರಿದಂತಿದೆ. ಇದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದಿಕ್ಕುತೋಚದಂತಾಗಿದ್ದು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯತ್ತ ಬೊಟ್ಟು ಮಾಡಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಬಣ ಬಡಿದಾಟಕ್ಕೆ ಸುರ್ಜೇವಾಲ ತೇಪೆ: ಮಾಧ್ಯಮಗಳ ಮೇಲೂ ಗೂಬೆ ಕೂರಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಡಿಕೆಶಿಯ ಹುರಿಗಣ್ಣಿನ ಜ್ವಾಲೆಗೆ ಹೈಕಮಾಂಡ್ಗೂ ನಡುಕ ಹುಟ್ಟಿಸಿದೆ. ಇತ್ತ ಸಿದ್ದು ಕಾಲಡಿಯಲ್ಲಿ ಗುಡುಗುವ ಸಿಡಿಲಿನ ಸದ್ದು ಕೇಳಿಸುತ್ತಿದ್ದು, ಪಟ್ಟ ಬಿಟ್ಟು ಕೊಡಲ್ ಎಂದು ಈಗಾಗಲೇ ಸಂದೇಶ ರವಾನಿಸಿದ್ದಾರೆ. ಈ ರಣಾರ್ಭಟಗಳಿಂದ ಹಸ್ತಪಡೆ ಅತ್ತ ಧರಿ-ಇತ್ತ ಪುಲಿ ಆಗಿ ಒದ್ದಾಡುವಂತಾಗಿದೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಎರಡುವರೆ ವರ್ಷ ತುಂಬಿದ ಬೆನ್ನಲ್ಲೇ ಸಿಎಂ ಕುರ್ಚಿ ಕದನ ತೀರ್ವ ಸ್ವರೂ ಪಡೆದುಕೊಂಡಿದ್ದು, ರಣರೋಚಕ ಹಂತದತ್ತ ಸಾಗುತ್ತಿದೆ. ಸದ್ಯಕ್ಕೆ ಹೈಕಮಾಂಡ್ ಸೈಲೆಂಟ್ ನಡೆ ನವೆಂಬರ್ ಕ್ರಾಂತಿಯ ಸಸ್ಪೆನ್ಸ್ ಥ್ರಿಲ್ಲರ್ ರೀತಿ ಕಾಣಿಸುತ್ತಿದ್ದು, ಮುಂದೆ ಏನೆಲ್ಲಾ ಬೆಳವಣಿಗೆಗಳು ಆಗಲಿವೆ ಎನ್ನುವ ಕುತೂಹಲ ಮೂಡಿಸಿದೆ.
Published On - 4:53 pm, Sun, 23 November 25




