ಗಣೇಶ ಹಬ್ಬದ ಮಾರ್ಗಸೂಚಿಗೆ ಅಸಮಾಧಾನ; ಬಿಬಿಎಂಪಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ

ಗಣೇಶ ಹಬ್ಬದ ಮಾರ್ಗಸೂಚಿಗೆ ಅಸಮಾಧಾನ; ಬಿಬಿಎಂಪಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ
ಗಣೇಶ (ಸಾಂದರ್ಭಿಕ ಚಿತ್ರ)

Ganesh Chaturthi 2021: ಚೌತಿಯಿಂದ ಚತುರ್ದಶಿವರೆಗೆ ಹಬ್ಬ ಆಚರಣೆಗೆ ಅವಕಾಶ ನೀಡಬೇಕು. ಅನುಮತಿಗಾಗಿ ತಕ್ಷಣ ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು. 5 ಬೇಡಿಕೆ ಮುಂದಿಟ್ಟುಕೊಂಡು ಮುತ್ತಿಗೆ ಹಾಕಲು ಸಮಿತಿ ನಿರ್ಧಾರ ಮಾಡಿದೆ.

TV9kannada Web Team

| Edited By: ganapathi bhat

Sep 08, 2021 | 8:08 PM

ಬೆಂಗಳೂರು: ಗಣೇಶ ಹಬ್ಬದ ಮಾರ್ಗಸೂಚಿಗೆ ಅಸಮಾಧಾನ ವ್ಯಕ್ತವಾಗಿದೆ. ಮಾರ್ಗಸೂಚಿ ಅವೈಜ್ಞಾನಿಕ ಎಂಬ ಟೀಕೆಗಳನ್ನು ಕೆಲವರು ಹಾಗೂ ಕೆಲ ಸಂಘಟನೆಗಳು ವ್ಯಕ್ತಪಡಿಸಿವೆ. ಇದೇ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ನಿರ್ಧಾರ ಮಾಡಿದೆ. ಮಾರ್ಗಸೂಚಿ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಮುತ್ತಿಗೆ ಹಾಕಲು ನಿರ್ಧಾರ ಕೈಗೊಂಡಿದೆ. ಹಬ್ಬ ಆಚರಿಸಲು ಎಲ್ಲಾ ಸಮಿತಿಗಳಿಗೆ ಅವಕಾಶ ಕೊಡಬೇಕು. ಗಣೇಶ ಮೂರ್ತಿ ಎತ್ತರದ ಸಂಬಂಧ ನಿರ್ಧಾರ ಹಿಂಪಡೆಯಿರಿ ಎಂದು ಹೇಳಿದೆ.

ಚೌತಿಯಿಂದ ಚತುರ್ದಶಿವರೆಗೆ ಹಬ್ಬ ಆಚರಣೆಗೆ ಅವಕಾಶ ನೀಡಬೇಕು. ಅನುಮತಿಗಾಗಿ ತಕ್ಷಣ ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು. 5 ಬೇಡಿಕೆ ಮುಂದಿಟ್ಟುಕೊಂಡು ಮುತ್ತಿಗೆ ಹಾಕಲು ಸಮಿತಿ ನಿರ್ಧಾರ ಮಾಡಿದೆ. ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಈ ಬಗ್ಗೆ ಯೋಜನೆ ಹಾಕಿಕೊಂಡಿದೆ.

ಬೀದಿಗೊಂದರಂತೆ ಗಣಪತಿ ಕೂರಿಸುವಂತಿಲ್ಲ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರದ ಅನುಮತಿ ಸಿಕ್ಕಿದೆಯಾದರೂ ಬೀದಿಗೆ ಒಂದರಂತೆ ಗಣೇಶ ಪ್ರತಿಷ್ಠಾಪಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಬೇಕು, ಏರಿಯಾಗೆ ಇಂತಿಷ್ಟೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿದ್ದು, ಬಿಬಿಎಂಪಿ, ಜಿಲ್ಲಾಡಳಿತದ ಅನುಮತಿ  ಪಡೆಯಲೇಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಗರಿಷ್ಠ 5 ದಿನಗಳ ಆಚರಣೆಗೆ ಅನುಮತಿ ರಾಜ್ಯದ ನಗರ ಪ್ರದೇಶಗಳಲ್ಲಿ ಗರಿಷ್ಠ 5 ದಿನಗಳ ಕಾಲ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ನಗರಗಳಲ್ಲಿ ವಾರ್ಡ್‌ಗೆ 1 ಮೂರ್ತಿ ಮಾತ್ರ ಪ್ರತಿಷ್ಠಾಪಿಸಬೇಕು. ಗ್ರಾಮಗಳಲ್ಲಿ ಸ್ಥಳೀಯ ಆಡಳಿತ ಅನುಮತಿ ಮೇರೆಗೆ ಸಾರ್ವಜನಿಕ ಉತ್ಸವ ನಡೆಸಲು ಅವಕಾಶ ನೀಡಲಾಗಿದೆ.

ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತಿಲ್ಲ. ನಿಗದಿತ ಸ್ಥಳಗಳಲ್ಲಿ ಮಾತ್ರ ಗಣೇಶ ಮೂರ್ತಿ ವಿಸರ್ಜಿಸಬೇಕು ಎಲ್ಲೂ ಮೆರವಣಿಗೆ ಮಾಡುವಂತಿಲ್ಲ. ಗಡಿ ಜಿಲ್ಲೆಗಳಲ್ಲಿ ಪಾಸಿಟಿವಿಟಿ ಸರಾಸರಿ ಶೇ 2ಕ್ಕಿಂತ ಕಡಿಮೆ ಇದ್ದರೆ ಮಾತ್ರ ಗಣೇಶೋತ್ಸವಕ್ಕೆ ಅವಕಾಶ ಸಿಗಲಿದೆ.

ಶಾಲಾ-ಕಾಲೇಜುಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಕಾರ್ಯಕ್ರಮಗಳಲ್ಲಿ ಡಿಜೆ ಬಳಕೆ ನಿರ್ಬಂಧಿಸಲಾಗಿದೆ. ಮೂರ್ತಿ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ತೊಂದರೆ ನೀಡಬಾರದು. ಕಾರ್ಯಕ್ರಮಕ್ಕೆ 50X50 ಅಡಿ ಪೆಂಡಾಲ್ ಮಾತ್ರ ಹಾಕಬೇಕು. ಅಪಾರ್ಟ್‌ಮೆಂಟ್‌ಗಳಲ್ಲೂ 20ಕ್ಕೂ ಹೆಚ್ಚು ಜನ ಸೇರಬಾರದು. ಆಯಾ ಸಮಿತಿಯವರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಹಬ್ಬ ಆಚರಣೆ ಸ್ಥಳದಲ್ಲಿ ಲಸಿಕೆ ಅಭಿಯಾನ ನಡೆಸಬೇಕು. ಮನೆಗಳಲ್ಲಿ 2 ಅಡಿ, ಸಾರ್ವಜನಿಕವಾಗಿ 4 ಅಡಿ ಮೂರ್ತಿ ಕೂಡಿಸಲು ಅವಕಾಶವಿದೆ ಎಂದು ಆಶೋಕ ಹೇಳಿದ್ದಾರೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಯಥಾಸ್ಥಿತಿ ಮುಂದುವರಿಯಲಿದೆ. ಗ್ರಾಮಗಳಲ್ಲೂ ಕೇವಲ ಒಂದು ಮೂರ್ತಿ ಪ್ರತಿಷ್ಠಾಪಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Ganesh Chaturthi: ಗಣೇಶನ ಮೂರ್ತಿಗೆ ಎತ್ತರ ನಿಗದಿ ಮಾಡಿರುವ ಆದೇಶ ಹಿಂಪಡೆಯಿರಿ; ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಒತ್ತಾಯ

ಇದನ್ನೂ ಓದಿ: Ganesha Chaturthi 2021: ಗಣೇಶ ಮೂರ್ತಿ ತಯಾರಿಕೆ; ಕಲೆ ಮಾಸುತ್ತಿದೆ, ಎಲ್ಲವೂ ಮುಂದಿನ ಪೀಳಿಗೆಯ ಕೈಯ್ಯಲ್ಲಿದೆ ಎಂದ ವಿನಯ್ ಗುಡಿಗಾರ

Follow us on

Related Stories

Most Read Stories

Click on your DTH Provider to Add TV9 Kannada