ಮಜೆಸ್ಟಿಕ್ ಮೆಟ್ರೋದಲ್ಲಿ ಭದ್ರತೆಗೇ ಇಲ್ಲ ಭದ್ರತೆ: ಸರದಿ ಪಾಲಿಸುವಂತೆ ಹೇಳಿದ್ದ ಸಿಬ್ಬಂದಿಗೆ ಪ್ರಯಾಣಿಕರಿಂದ 7 ಬಾರಿ ಕಪಾಳಮೋಕ್ಷ

ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಗ್ರೀನ್ ಲೈನ್ ರೈಲು ಹತ್ತುವ ಸರದಿ ಪಾಲಿಸುವಂತೆ ಸೂಚಿಸಿದ್ದಕ್ಕೆ ಭದ್ರತಾ ಸಿಬ್ಬಂದಿಯ ಮೇಲೆ ನಾಲ್ವರು ಪ್ರಯಾಣಿಕರು ಹಲ್ಲೆ ನಡೆಸಿದ್ದಾರೆ. ಡಿಸೆಂಬರ್ 31ರಂದು ನಡೆದ ಈ ಘಟನೆ ಬಳಿಕ ಸಿಬ್ಬಂದಿಯ ದೂರಿನಡಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಮಜೆಸ್ಟಿಕ್ ಮೆಟ್ರೋದಲ್ಲಿ ಭದ್ರತೆಗೇ ಇಲ್ಲ ಭದ್ರತೆ: ಸರದಿ ಪಾಲಿಸುವಂತೆ ಹೇಳಿದ್ದ ಸಿಬ್ಬಂದಿಗೆ ಪ್ರಯಾಣಿಕರಿಂದ 7 ಬಾರಿ ಕಪಾಳಮೋಕ್ಷ
ಸರದಿ ಪಾಲಿಸುವಂತೆ ಹೇಳಿದ್ದ ಸಿಬ್ಬಂದಿಗೆ ಪ್ರಯಾಣಿಕರಿಂದ 7 ಬಾರಿ ಕಪಾಳಮೋಕ್ಷ

Updated on: Dec 31, 2025 | 2:52 PM

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನ ಕೆಂಪೇಗೌಡ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣದ ಮಜೆಸ್ಟಿಕ್‌ನಲ್ಲಿ ಭಾನುವಾರ ಮಧ್ಯಾಹ್ನ ಮೆಟ್ರೋ (Namma Metro) ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ನಾಲ್ವರು ಪ್ರಯಾಣಿಕರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಗ್ರೀನ್ ಲೈನ್ ರೈಲು ಹತ್ತುವಾಗ ಸರದಿಯಲ್ಲಿ ನಿಲ್ಲುವಂತೆ ಸೂಚಿಸಿದ್ದಕ್ಕೆ ಕೋಪಗೊಂಡ ಆರೋಪಿಗಳು ಸಿಬ್ಬಂದಿಯನ್ನು ಥಳಿಸಿದ್ದಾರೆ.

ಭದ್ರತಾ ಸಿಬ್ಬಂದಿಗೇ ಕಾಲಿನಿಂದ ಒದ್ದ ಪ್ರಯಾಣಿಕ

ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿಯ ಹೆಸರು ಇಂದ್ರಜಿತ್. ಮಧ್ಯಾಹ್ನ 12.45ರ ಸುಮಾರಿಗೆ ಗ್ರೀನ್ ಲೈನ್‌ನ ಪ್ಲಾಟ್‌ಫಾರ್ಮ್ 3ರಲ್ಲಿ ಈ ಘಟನೆ ನಡೆದಿದೆ. ಮಡವಾರದ ಕಡೆ ಪ್ರಯಾಣಿಸಲು ಬಂದಿದ್ದ ನಾಲ್ವರು ಯುವಕರು ಪ್ಲಾಟ್‌ಫಾರ್ಮ್‌ನಲ್ಲಿ ಸರದಿ ಪಾಲಿಸದೆ ರೈಲಿಗೆ ಏರಲು ಯತ್ನಿಸಿದರು. ಸುರಕ್ಷತೆಯ ದೃಷ್ಟಿಯಿಂದ ಖಾಲಿ ಸ್ಥಳದಲ್ಲಿ ಸರದಿ ರೂಪಿಸಿಕೊಳ್ಳುವಂತೆ ಇಂದ್ರಜಿತ್ ಸೂಚನೆ ನೀಡಿದರು. ಆದರೆ ಅವರು ಸೂಚನೆ ಪಾಲಿಸದೆ 12.47ಕ್ಕೆ ಬಂದ ರೈಲನ್ನು ತಪ್ಪಿಸಿಕೊಂಡರು.

ಇದನ್ನೂ ಓದಿ ಮೆಟ್ರೋ ಪ್ರಯಾಣಿಕರಿಗೆ ಶುಭಸುದ್ದಿ: ಹಸಿರು ಮಾರ್ಗಕ್ಕೆ ಸೇರ್ಪಡೆಗೊಳ್ಳಲಿವೆ 21 ಹೊಸ ರೈಲುಗಳು

ಮುಂದಿನ ರೈಲಿಗೆ ಸರದಿಯಲ್ಲಿ ನಿಲ್ಲುವಂತೆ ಪುನಃ ಹೇಳಿದಾಗ, ಆರೋಪಿಗಳಲ್ಲಿ ಒಬ್ಬರು ಇಂದ್ರಜಿತ್‌ಗೆ ಏಳು ಬಾರಿ ಕಪಾಳಮೋಕ್ಷ ಮಾಡಿದ್ದು, ಮತ್ತೊಬ್ಬರು ಕಾಲಿನಿಂದ ಒದ್ದಿದ್ದಾರೆ ಎನ್ನಲಾಗಿದೆ. ಹಲ್ಲೆಯ ಬಳಿಕ ಮೆಟ್ರೋ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಈ ವೇಳೆ ಇಬ್ಬರು ವಯೋವೃದ್ಧ ಪ್ರಯಾಣಿಕರು ಆರೋಪಿಗಳನ್ನು ಪ್ರಶ್ನಿಸಿ ಮುಂದಿನ ರೈಲಿಗೆ ಏರದಂತೆ ತಡೆದಿದ್ದಾರೆ. ಉಪ್ಪಾರಪೇಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುದೊಯ್ದಿದ್ದು, ಇಂದ್ರಜಿತ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.