ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು?
ಬೆಂಗಳೂರಿನ ಕೋಗಿಲು ನಿರಾಶ್ರಿತರಿಗೆ ಜನವರಿ 2 ರಂದು ಮನೆ ಹಸ್ತಾಂತರವಾಗುವುದು ಬಹುತೇಕ ಖಚಿತವಾಗಿದೆ. ಆದರೆ, ಲಿಂಗನಮಕ್ಕಿ, ಬೆಳಗಾವಿಯಂತಹ ಪ್ರದೇಶಗಳ ಅರ್ಹ ಸಂತ್ರಸ್ತರಿಗೆ ದಶಕಗಳಿಂದ ಸೂರು ಸಿಕ್ಕಿಲ್ಲ. ಈ ನಡುವೆ, ಕೋಗಿಲು ಲೇಔಟ್ನಲ್ಲಿ ರೋಹಿಂಗ್ಯಾ, ಬಾಂಗ್ಲಾದೇಶಿ ಅಕ್ರಮ ವಲಸಿಗರಿದ್ದ ಬಗ್ಗೆ ಬಿಜೆಪಿ ಪ್ರಸ್ತಾಪಿಸಿದ್ದು ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ‘ಮಿನಿ ಬಾಂಗ್ಲಾದೇಶ’ ಮಾಡಹೊರಟಿದೆ ಎಂದು ಕಿಡಿಕಾರಿದೆ.

ಬೆಂಗಳೂರು, ಜನವರಿ 1: ಜನವರಿ 2 ರಂದು ಕೋಗಿಲು (Kogilu Layout) ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬಂಡೆ ಹೊಸೂರಿನ ಬೈಯಪ್ಪನಹಳ್ಳಿಯಲ್ಲಿರೋ ಅಪಾರ್ಟ್ಮೆಂಟ್ನಲ್ಲಿ ಮನೆ ನೀಡಲು ನಿರ್ಧರಿಸಲಾಗಿದೆ. ಸುಮಾರು 1 ಸಾವಿರಕ್ಕೂ ಹೆಚ್ಚು 1 BHK ಫ್ಲ್ಯಾಟ್ಗಳು ಈ ಅಪಾರ್ಟ್ಮೆಂಟ್ನಲ್ಲಿವೆ. ಸದ್ಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿವೆ.
ಆದರೆ, ಸರ್ಕಾರ ಕೋಗಿಲು ನಿವಾಸಿಗಳಿಗೆ ಸೂರು ಕಲ್ಪಿಸಿಕೊಡುತ್ತಿದ್ದು, ಮನೆ ಕಳೆದುಕೊಂಡು ದಶಕಗಳೇ ಉರುಳಿದರೂ ರಾಜ್ಯದ ಅನೇಕ ಕಡೆಯಲ್ಲಿ ಅರ್ಹ ಸಂತ್ರಸ್ತರತ್ತ ಗಮನವೇ ಕೊಟ್ಟಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡವರಿಗೆ 65 ವರ್ಷದಿಂದ ಹಕ್ಕುಪತ್ರ ನೀಡಿಲ್ಲ.
ಬೆಳಗಾವಿ ನೆರೆ ಸಂತ್ರಸ್ತರ ಗೋಳನ್ನೂ ಹೇಳುವವರಿಲ್ಲ. ಎರಡು ವರ್ಷಗಳಿಂದ 500 ಕುಟುಂಬಗಳು ಬೀದಿಗೆ ಬಿದ್ದಿದ್ದರೂ ಒಂದು ಸೂರಿನ ಗತಿ ಇಲ್ಲದ ಪರಿಸ್ಥಿತಿ ಇವರದ್ದು. ಸರ್ಕಾರ ಮಾತ್ರ ಒಂದು ಎರಡು ಕಂತಿನ ಹಣ ಕೊಟ್ಟು ಕೈತೊಳೆದುಕೊಂಡಿದೆ.
ಮಿನಿ ಬಾಂಗ್ಲಾ ಮಾಡ್ತಿದ್ದೀರಿ: ಬಿಜೆಪಿ ವಾಗ್ದಾಳಿ
ಮತ್ತೊಂದೆಡೆ, ಕೋಗಿಲು ಪ್ರಕರಣ ಸುತ್ತ ರಾಜಕೀಯ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ಇದೇ ವಿಚಾರ ಮುಂದಿಟ್ಟು ವಿಪಕ್ಷ ಬಿಜೆಪಿ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದೆ. ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಛಲವಾದಿ ನಾರಾಯಣಸ್ವಾಮಿ, ಅಶ್ವತ್ಥ್ ನಾರಾಯಣ್ ಸೇರಿದಂತೆ ಕೇಸರಿ ನಾಯಕರು, ಅಕ್ರಮ ಮನೆಗಳ ತೆರವು ಸ್ಥಳ ಪರಿಶೀಲನೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಮಿನಿ ಬಾಂಗ್ಲಾದೇಶ ಮಾಡಲು ಹೊರಟಿದೆ ಎಂದು ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಕೋಗಿಲು ಲೇಔಟ್ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ? ಮುಸ್ಲಿಂ ದಂಪತಿ ಆಧಾರ್ ಕಾರ್ಡ್ ನೋಡಿ ಬಿಜೆಪಿ ನಾಯಕರಿಗೆ ಶಾಕ್!
ಇಲ್ಲಿ ರೋಹಿಂಗ್ಯಾಗಳು, ಬಾಂಗ್ಲಾದವರು ಇದ್ದಾರೆ. ನಾವು ಬರುವ ವಿಷಯ ತಿಳಿದು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ದೇಶದ ಭದ್ರತೆ ಕಥೆ ಏನು ಎಂದು ಛಲವಾದಿ ನಾರಾಯಣಸ್ವಾಮಿ, ಅಶ್ವತ್ಥ್ ನಾರಾಯಣ್ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸಚಿವ ಸತೀಶ್ ಜಾರಕಿಹೊಳಿ ಕೂಡ ಪಶ್ಚಿಮ ಬಂಗಾಳ, ಬಾಂಗ್ಲಾದವರ ಪತ್ತೆ ಆಗಬೇಕು ಎಂದಿದ್ದಾರೆ.
ಸತ್ಯಶೋಧನೆಗೆ ಸಮಿತಿ ರಚಿಸಿದ ಬಿಜೆಪಿ
ಕೋಗಿಲು ಲೇಔಟ್ನಲ್ಲಿ ಬಿಜೆಪಿ ಸತ್ಯ ಶೋಧನೆಗೆ ಮುಂದಾಗಿದೆ. ಯಲಹಂಕ ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶಾಸಕ ಮುನಿರಾಜು, ಪರಿಷತ್ ಸದಸ್ಯ ನವೀನ್ ಸೇರಿ 7 ನಾಯಕರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚನೆ ಮಾಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಕುರ್ಚಿ ವ್ಯಾಮೋಹಕ್ಕೆ ರಾಜ್ಯದ ಜನರ ಹಿತಾಸಕ್ತಿ ಬಲಿ ಕೊಟ್ಟಿದ್ದಾರೆ ಎಂದು ಬಿಜೆಪಿ ಸಾಮಾಜಿಕ ತಾಲತಾಣದಲ್ಲಿ ಕುಟುಕಿದೆ.



