ಟ್ರಾಫಿಕ್ ಫೈನ್ ಹೆಸರಿನಲ್ಲಿ ಬಂತು ವಾಟ್ಸ್​ಆ್ಯಪ್ ಮೆಸೇಜ್​: ಆ್ಯಪ್ ಡೌನ್​ಲೋಡ್ ಮಾಡಿದ ಬೆನ್ನಲ್ಲೇ 5.6 ಲಕ್ಷ ರೂ. ಮಾಯ!

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಚಲನ್ ಬಗ್ಗೆ ಬಂದ ವಾಟ್ಸಾಪ್ ಸಂದೇಶವನ್ನು ನಂಬಿದ ವ್ಯಕ್ತಿಯೊಬ್ಬರು "ವಾಹನ್ ಪರಿವಾಹನ್" ಎಂಬ ನಕಲಿ ಎಪಿಕೆ ಆ್ಯಪ್ ಡೌನ್ಲೋಡ್ ಮಾಡಿದ್ದಾರೆ. ಇದರಿಂದ ಅವರ ಕ್ರೆಡಿಟ್ ಕಾರ್ಡ್ ಖಾತೆಯಿಂದ 5.6 ಲಕ್ಷ ರೂ.ಗೆ ಕನ್ನಬಿದ್ದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸಾರ್ವಜನಿಕರು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಟ್ರಾಫಿಕ್ ಫೈನ್ ಹೆಸರಿನಲ್ಲಿ ಬಂತು ವಾಟ್ಸ್​ಆ್ಯಪ್ ಮೆಸೇಜ್​: ಆ್ಯಪ್ ಡೌನ್​ಲೋಡ್ ಮಾಡಿದ ಬೆನ್ನಲ್ಲೇ 5.6 ಲಕ್ಷ ರೂ. ಮಾಯ!
ಸಾಂದರ್ಭಿಕ ಚಿತ್ರ

Updated on: Feb 28, 2025 | 7:50 AM

ಬೆಂಗಳೂರು, ಫೆಬ್ರವರಿ 28: ಸಂಚಾರ ನಿಯಮ ಉಲ್ಲಂಘನೆಯ ಚಲನ್​ಗಳು ಬಾಕಿ ಇವೆ ಎಂದು ವಾಟ್ಸ್​ಆ್ಯಪ್​ನಲ್ಲಿ ಬಂದ ಸಂದೇಶವನ್ನು ನಂಬಿದ ವ್ಯಕ್ತಿಯೊಬ್ಬರು ಎಪಿಕೆ ಆ್ಯಪ್ ಡೌನ್​ಲೋಡ್ ಮಾಡಿ ಕ್ರೆಡಿಟ್ ಕಾರ್ಡ್ ಖಾತೆಗಳಿಂದ 5.6 ಲಕ್ಷ ರೂ. ಕಳೆದುಕೊಂಡ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಫೆಬ್ರವರಿ 20 ರ ಮಧ್ಯಾಹ್ನ ವ್ಯಕ್ತಿಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್​ಆ್ಯಪ್​ ಸಂದೇಶ ಬಂದಿತ್ತು.

ವಾಟ್ಸ್​ಆ್ಯಪ್​ ಸಂದೇಶದಲ್ಲಿ ಏನಿತ್ತು?

ನಿಮ್ಮ ವಾಹನಕ್ಕೆ ಸಂಚಾರ ನಿಯಮ ಉಲ್ಲಂಘನೆಯ ದಂಡ ವಿಧಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸಲು ಇಲ್ಲಿ ನೀಡಿದ ಲಿಂಕ್ ಮೂಲಕ ‘‘ವಾಹನ್ ಪರಿವಾಹನ್’’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಎಂದು ವಾಟ್ಸ್​ಆ್ಯಪ್​ ಸಂದೇಶದಲ್ಲಿ ಸೂಚನೆ ನೀಡಲಾಗಿತ್ತು.

ವಾಹನದ ನೋಂದಣಿ ಸಂಖ್ಯೆಯನ್ನೂ ವಾಟ್ಸ್​ಆ್ಯಪ್​ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ನಿಮ್ಮ ವಾಹನಕ್ಕೆ ಸಂಚಾರ ನಿಯಮ ಉಲ್ಲಂಘನೆಯ ದಂಡ ವಿಧಿಸಲಾಗಿದ್ದು, ಅದರ ಕುರಿತಾದ ಪುರಾವೆಗಳನ್ನು ಅಥವಾ ಸಿಸಿಟಿವಿ ಕ್ಯಾಮರಾ ಸೆರೆಹಿಡಿದಿರುವ ಚಿತ್ರಗಳು ಇಲ್ಲಿವೆ. ಅದನ್ನು ಪರಿಶೀಲಿಸಬೇಕಾದಲ್ಲಿ ಅಥವಾ ಒಂದು ವೇಳೆ ನೀವು ನಿಯಮ ಉಲ್ಲಂಘಿಸದಿದ್ದಲ್ಲಿ ಆ ಬಗ್ಗೆ ಅಪ್​ಡೇಟ್ ಮಾಡಲು ಇಲ್ಲಿ ನೀಡಿರುವ ಲಿಂಕ್ ಮೂಲಕ ‘‘ವಾಹನ್ ಪರಿವಾಹನ್’’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಎಂದು ವ್ಯಕ್ತಿಗೆ ಬಂದ ವಾಟ್ಸ್​ಆ್ಯಪ್​ ಸಂದೇಶದಲ್ಲಿ ಉಲ್ಲೇಖವಾಗಿತ್ತು ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ಉಲ್ಲೇಖಿಸಲಾದ ವಾಹನ ಸಂಖ್ಯೆಯು ಅವನ ವಾಹನದ ಸಂಖ್ಯೆ

ಇದನ್ನೂ ಓದಿ
ಬೆಂಗಳೂರು ಅರಮನೆ ವಿವಾದ; ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ಒಪ್ಪದ ಸುಪ್ರೀಂ
ಕರ್ನಾಟಕದ ಹೋಟೆಲ್​, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ​ ನಿಷೇಧ
ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ: ಇಡ್ಲಿ ತಿಂದರೂ ಬರಬಹುದು ಕ್ಯಾನ್ಸರ್‌!
ಬಿಸಿಲ ಶಾಖಕ್ಕೆ ಎಸಿ ಖರೀದಿಯತ್ತ ಮುಖ ಮಾಡಿದ ಸಿಟಿ ಮಂದಿ: ಬೆಲೆ ಶಾಕ್​

ವಾಹನದ ನೋಂದಣಿ ಸಂಖ್ಯೆ ಸರಿಯಾಗಿಯೇ ಇದ್ದುದರಿಂದ ಆ ವ್ಯಕ್ತಿ ಎಪಿಕೆ ಫೈಲ್ ಡೌನ್​ಲೋಡ್ ಮಾಡಿ ಇನ್​​​ಸ್ಟಾಲ್ ಮಾಡಿದ್ದಾರೆ. ಅದಾದ 24 ಗಂಟೆಯ ಅವಧಿಯಲ್ಲಿ ಅವರಿಗೆ ಗೊತ್ತಾಗದಂತೆ ಅವರ ಕ್ರೆಡಿಟ್ ಕಾರ್ಡ್‌ಗಳಿಂದ 5.6 ಲಕ್ಷ ರೂ. ಡೆಬಿಟ್ ಆಗಿದೆ.

ನಂತರ, ಫೋನ್ ಹ್ಯಾಕ್ ಆಗಿದೆ ಎಂಬುದನ್ನು ಅರಿತ ವ್ಯಕ್ತಿ, ಫೆಬ್ರವರಿ 22 ರಂದು ಪಶ್ಚಿಮ ಸಿಇಎನ್ ಪೊಲೀಸರಿಗೆ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಕಾರುಗಳಿಗೆ ಕರ್ನಾಟಕದಲ್ಲೇ ಅತಿ ಹೆಚ್ಚು ತೆರಿಗೆ! ಐಷಾರಾಮಿ ಕಾರುಗಳ ಟ್ಯಾಕ್ಸ್ ಕಡಿಮೆ ಮಾಡಲು ಸರ್ಕಾರಕ್ಕೆ ಪತ್ರ

ವ್ಯಕ್ತಿ ಡೌನ್​ಲೋಡ್ ಮಾಡಿರುವ ಎಪಿಕೆ ಫೈಲ್​ನಲ್ಲಿ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ನಂತಹ ಮಾಲ್‌ವೇರ್ ಇರುವ ಸಾಧ್ಯತೆ ಇದೆ. ಇದರಿಂದಾಗಿ ವಂಚಕರಿಗೆ ಕ್ರೆಡಿಟ್ ಕಾರ್ಡ್ ವಿವರ ತಿಳಿಯಲು ಹಾಗೂ ಹಣ ಎಗರಿಸುವುದು ಸಾಧ್ಯವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಾಹನ ಸವಾರರೇ ಎಚ್ಚರ

ಬೆಂಗಳೂರು ಟ್ರಾಫಿಕ್ ಪೊಲೀಸರು ವಾಟ್ಸ್​ಆ್ಯಪ್​ ಸಂದೇಶ ಅಥವಾ ಎಸ್‌ಎಂಎಸ್ ಮೂಲಕ ಚಲನ್‌ಗಳನ್ನು ಕಳುಹಿಸುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಚಾರದಲ್ಲಿ ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸದ್ಯ, ಟ್ರಾಫಿಕ್ ಫೈನ್ ನೆಪದಲ್ಲಿ ನಡೆದ ಆನ್​ಲೈನ್ ವಂಚನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ