ಕಾರುಗಳಿಗೆ ಕರ್ನಾಟಕದಲ್ಲೇ ಅತಿ ಹೆಚ್ಚು ತೆರಿಗೆ! ಐಷಾರಾಮಿ ಕಾರುಗಳ ಟ್ಯಾಕ್ಸ್ ಕಡಿಮೆ ಮಾಡಲು ಸರ್ಕಾರಕ್ಕೆ ಪತ್ರ
ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಬೇರೆಬೇರೆ ರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಆಗಿರುವ ಐಷಾರಾಮಿ ಕಾರುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದಕ್ಕೆ ಕಾರಣ ರಾಜ್ಯದ ದುಬಾರಿ ಟ್ಯಾಕ್ಸ್. ದೇಶದಲ್ಲೇ ಅತಿ ಹೆಚ್ಚು ಟ್ಯಾಕ್ಸ್ ಕರ್ನಾಟಕದಲ್ಲಿ ವಿಧಿಸಲಾಗುತ್ತಿದೆ ಎನ್ನಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಟ್ಯಾಕ್ಸ್ ಇಳಿಸಿ ಎಂದು ಕರ್ನಾಟಕ ಟೂರ್ಸ್ ಅಂಡ್ ಟ್ರಾವೆಲ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದೆ.

ಬೆಂಗಳೂರು, ಫೆಬ್ರವರಿ 28: ಬೇರೆಬೇರೆ ರಾಜ್ಯದಲ್ಲಿ ರಿಜಿಸ್ಟ್ರೇಷನ್ ಆಗಿರುವ ವಾಹನಗಳ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಕರ್ನಾಟಕದಲ್ಲಿ ಕಾರಿನ ಮೇಲಿರುವ ದುಬಾರಿ ತೆರಿಗೆ ಎನ್ನಲಾಗಿದೆ. ದೇಶದಲ್ಲೇ ವಾಹನಗಳಿಗೆ ಅತಿಹೆಚ್ಚು ತೆರಿಗೆ ಇರುವುದು ಕರ್ನಾಟಕದಲ್ಲಿ. ನಮ್ಮ ರಾಜ್ಯದಲ್ಲಿ ಶೇ 18+1 ರಷ್ಟು ಟ್ಯಾಕ್ಸ್ ಕಟ್ಟಬೇಕು. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ಟ್ಯಾಕ್ಸ್ ಹೆಚ್ಚಾಗಿದೆ. ಹೀಗಾಗಿ ಐಷಾರಾಮಿ ಕಾರುಗಳ ಟ್ಯಾಕ್ಸ್ ಕಡಿಮೆ ಮಾಡಿ ಎಂದು ‘ಕರ್ನಾಟಕ ಟೂರ್ಸ್ ಅಂಡ್ ಟ್ರಾವೆಲ್ಸ್ ಅಸೋಸಿಯೇಷನ್’ ಸರ್ಕಾರಕ್ಕೆ ಪತ್ರ ಬರೆದಿದೆ.
ರಾಜ್ಯದ ದುಬಾರಿ ತೆರಿಗೆಯಿಂದಾಗಿ ಕಾರು ಮಾಲೀಕರು ಬೇರೆ ರಾಜ್ಯದಿಂದ ಕಾರು ಖರೀದಿ ಮಾಡುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ನೂರಾರು ಕೋಟಿ ರುಪಾಯಿ ನಷ್ಟ ಉಂಟಾಗುತ್ತಿದೆ. ರಾಜ್ಯದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಲು ಆಗ್ತಿಲ್ಲ. ನೆರೆಹೊರೆಯ ರಾಜ್ಯದಲ್ಲಿ ಟ್ಯಾಕ್ಸ್ ಕಡಿಮೆ ಇದೆ. ಆದರೆ ನಮ್ಮ ರಾಜ್ಯದಲ್ಲಿ ತುಂಬಾ ಹೆಚ್ಚಾಗಿದೆ, ದಯವಿಟ್ಟು ಟ್ಯಾಕ್ಸ್ ಕಡಿಮೆ ಮಾಡಿ ಎಂಬುದಾಗಿ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಆಪರೇಟರ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಮಾತ್ರ ಶೇ 18 ರಷ್ಟು ಟ್ಯಾಕ್ಸ್ ಮತ್ತು 1 ರಷ್ಟು ಸೆಸ್ ವಿಧಿಸಲಾಗುತ್ತಿದೆ. ಒಂದು ಕೋಟಿ ರುಪಾಯಿ ಮೌಲ್ಯದ ಕಾರು ಖರೀದಿ ಮಾಡಿದರೆ, ಬರೋಬ್ಬರಿ 19 ಲಕ್ಷ ರುಪಾಯಿ ಪಾವತಿ ಮಾಡಬೇಕು. 2 ಕೋಟಿ ರುಪಾಯಿ ಕಾರು ಖರೀದಿ ಮಾಡಿದ್ರೆ, 38 ಲಕ್ಷ ರೂ. ತೆರಿಗೆ ಪಾವತಿಸಬೇಕು. ಇಷ್ಟೊಂದು ತೆರಿಗೆ ಪಾವತಿಸಿ ಐಷಾರಾಮಿ ಕಾರುಗಳನ್ನು ತಂದು ಟ್ರಾವೆಲ್ಸ್ ನಡೆಸಲು ಆಗ್ತಿಲ್ಲ. ಇದರಿಂದ ನಮಗೆ ತುಂಬಾ ಸಮಸ್ಯೆ ಆಗ್ತಿದೆ. ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಟ್ಯಾಕ್ಸ್ ಕಡಿಮೆ ಮಾಡಿ ಎಂದು ಸಾರಿಗೆ ಸಚಿವರಿಗೆ ಮತ್ತು ಸಿಎಂಗೆ ಪತ್ರ ಬರೆದಿದ್ದಾರೆ.
ನೆರೆ ರಾಜ್ಯಗಳಲ್ಲಿ ಎಷ್ಟಿದೆ ತೆರಿಗೆ?
ನೆರೆಯ ರಾಜ್ಯಗಳಾದ ಮಹಾರಾಷ್ಟ್ರದಲ್ಲಿ ಶೇ 7.5 ರಷ್ಟು ಟ್ಯಾಕ್ಸ್ ಪಾವತಿ ಮಾಡಬೇಕು, ಆಂಧ್ರಪ್ರದೇಶದಲ್ಲಿ ಶೇ 12 ರಿಂದ 14 ರಷ್ಟು, ತಮಿಳುನಾಡಿನಲ್ಲಿ ಶೇ 10 ರಿಂದ 15 ರಷ್ಟು, ಕೇರಳದಲ್ಲಿ ಶೇ 6 ರಿಂದ 15 ರಷ್ಟು ಟ್ಯಾಕ್ಸ್ ಇದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಶೇ 13 ರಿಂದ 18 ರಷ್ಟು ಟ್ಯಾಕ್ಸ್ ಇದೆ ಎಂದು ಅಸೋಸಿಯೇಷನ್ ಹೇಳಿದೆ.
ಸಾರಿಗೆ ಸಚಿವರು ಏನಂದ್ರು?
ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕಳೆದ ವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಸೋಸಿಯೇಷನ್ಗಳು ಸಿಎಂಗೆ ಟ್ಯಾಕ್ಸ್ ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. ಸಿಎಂ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಅರಮನೆ ಜಮೀನು ವಿವಾದ; ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ಒಪ್ಪದ ಸುಪ್ರೀಂ ಕೋರ್ಟ್
ಒಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ವಿಪರೀತ ಟ್ಯಾಕ್ಸ್ ಇದೆ ಎಂಬ ಕಾರಣಕ್ಕೆ ಟ್ರಾವೆಲ್ಸ್ ಮಾಲೀಕರು ಬೇರೆಬೇರೆ ರಾಜ್ಯದಿಂದ ಕಾರು ಖರೀದಿ ಮಾಡಲು ಮುಂದಾದ್ರೆ, ಇದರಿಂದ ರಾಜ್ಯ ಸರ್ಕಾರಕ್ಕೆ ನೂರಾರು ಕೋಟಿ ರುಪಾಯಿ ನಷ್ಟ ಉಂಟಾಗುತ್ತಿದೆ ಎಂಬುದು ಟ್ರಾವೆಲ್ಸ್ ಮಾಲೀಕರ ಆರೋಪ. ಇದಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಟ್ಯಾಕ್ಸ್ ಏನಾದರೂ ಕಡಿಮೆ ಮಾಡುತ್ತಾರೆಯೇ ಎಂದು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:09 am, Fri, 28 February 25