ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಪತ್ತೆ: ಕೋಳಿಗಳ ಸಾವು, ಚಿಕನ್ ತಿನ್ನದಂತೆ ಡಿಸಿ ಮನವಿ
ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿ ಗ್ರಾಮದಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ. 28 ಕೋಳಿಗಳು ಸಾವನ್ನಪ್ಪಿದ್ದು, ಪಶುಪಾಲನಾ ಇಲಾಖೆ ಮತ್ತು ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಕೈಗೊಂಡಿದೆ. ಗ್ರಾಮದಲ್ಲಿ ಸೋಂಕುನಿವಾರಕ ಸಿಂಪಡಣೆ ಮಾಡಲಾಗಿದೆ ಮತ್ತು ಕೋಳಿ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಗೆ ಕೋಳಿ ಸೇವನೆ ಮತ್ತು ಸಾಗಾಣಿಕೆ ಮಾಡದಂತೆ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ, ಫೆಬ್ರವರಿ 28: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ವರದಹಳ್ಳಿ ಗ್ರಾಮದ ನಾಟಿ ಕೋಳಿಗಳಲ್ಲಿ ಹಕ್ಕಿಜ್ವರ (Avian Influenza)ಪತ್ತೆಯಾಗಿದೆ. ಗ್ರಾಮದ ರೈತ ದ್ಯಾವಪ್ಪ ಎಂಬುವರಿಗೆ ಸೇರಿದ 23 ಕೋಳಿಗಳು ಫೆಬ್ರವರಿ 23ರಂದು ಮೃತಟ್ಟಿದ್ದವು. ಬಳಿಕ ಅದೇ ಗ್ರಾಮದ ರತ್ನಮ್ಮಗೆ ಸೇರಿದ 5 ಕೋಳಿಗಳು ಮೃತಟ್ಟಿದ್ದವು. ಇದರಿಂದ ಆತಂಕಗೊಂಡ ದ್ಯಾವಪ್ಪ ಹಾಗೂ ರತ್ನಮ್ಮ ಯಾರೊ ಕೋಳಿಗಳಿಗೆ ವಿಷ ಉಣಿಸಿರಬಹುದು ಅಂತ ಬಾವಿಸಿದ್ದರು.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪಶುಪಾಲಾನಾ ಇಲಾಖೆಯ ವೈದ್ಯರು ಪರಿಶೀಲನೆ ನಡೆಸಿ ಮೃತ ಕೋಳಿಗಳ ಸ್ಯಾಂಪಲ್ ಅನ್ನು ಸಂಗ್ರಹಿಸಿ ಹೆಬ್ಬಾಳದಲ್ಲಿನ ಭಾರತೀಯ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಗೆ ರವಾನಿಸಿದರು. ಲ್ಯಾಬ್ ವರದಿಯಲ್ಲಿ ಕೋಳಿಗಳ ಸಾವಿಗೆ ಹಕ್ಕಿಜ್ವರವೇ ಕಾರಣ ಎಂದು ಧೃಡವಾಗಿದೆ.
ಭಾರತೀಯ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಯ ಲ್ಯಾಬ್ ವರದಿ ಕೈ ಸೇರುತ್ತಿದ್ದಂತೆ, ಜಿಲ್ಲಾ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಸ್ವಚ್ಚತೆ, ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡಿರುವ ಕೋಳಿ ಪಾರ್ಮ್ಗಳಲ್ಲಿ ಮುಂಜಾಗೃತೆ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಸ್ವತಃ ಭಾರತೀಯ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಯ ವಿಜ್ಞಾನಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ ಸೇರಿದಂತೆ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಇನ್ನೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಭೆ ನಡೆಸಿದ್ದು ಜಿಲ್ಲೆಯಾದ್ಯಂತ ಮುಂಜಾಗೃತಾ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ.
ವರದಹಳ್ಳಿ ಗ್ರಾಮದ ಜನ ಚಿಕನ್ ತಿನ್ನಬೇಡಿ. ಗ್ರಾಮದ ಕೋಳಿಗಳನ್ನು ಸಂಬಂಧಿಕರಿಗೂ ಕೊಡಬೇಡಿ. ದಯಮಾಡಿ ನಮಗೆ ಸಹಕಾರ ಮಾಡಿ. ಕೋಳಿಗಳನ್ನು ಪಶುಪಾಲನಾ ಇಲಾಖೆಗೆ ನೀಡಿ. ನಿಯಮಾನುಸಾರ ಕೋಳಿಗಳ ಹತ್ಯೆ ಮಾಡಿ ವೈರಸ್ ನಿರ್ಮೂಲನೆ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ಹುಚ್ಚುನಾಯಿ, ಸಿಕ್ಕಸಿಕ್ಕವರ ಮೇಲೆ ದಾಳಿ
ಇನ್ನು, ವರದಹಳ್ಳಿ ಗ್ರಾಮದ 1 ಕಿಲೋಮೀಟರ್ ಸುತ್ತಲೂ ನಾಕಾ ಬಂಧಿ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚನೆ ನೀಡಿದ್ದಾರೆ. ವರದಹಳ್ಳಿ ಗ್ರಾಮದಿಂದ ಕೋಳಿಗಳ ಸಾಗಾಣಿಕೆಗೆ ಸಂಪೂರ್ಣ ಬಂದ್ ಮಾಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Fri, 28 February 25