ಬಿಸಿಲ ಶಾಖಕ್ಕೆ ಎಸಿ, ಕೂಲರ್ ಖರೀದಿಯತ್ತ ಮುಖ ಮಾಡಿದ ಸಿಟಿ ಮಂದಿ: ಬೆಲೆ ಕೇಳೇ ಮತ್ತಷ್ಟು ಬೆವೆತ ಜನ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಫ್ಯಾನ್, ಎಸಿ, ಏರ್ ಕೂಲರ್ಗಳಿಗೆ ಬೇಡಿಕೆ ಬಂದಿದೆ. ಇದರಿಂದಾಗಿ ಈ ಉತ್ಪನ್ನಗಳ ಬೆಲೆಗಳು ಶೇಕಡಾ 15 ರಿಂದ 20 ರಷ್ಟು ಏರಿಕೆಯಾಗಿದೆ. ಗ್ರಾಹಕರು ಬೆಲೆ ಏರಿಕೆಗೆ ಒಂದು ಶಾಕ್ ಆದರೂ ಬೇಸಿಗೆಯ ತೀವ್ರತೆಯಿಂದಾಗಿ ಖರೀದಿಸುವಂತಾಗಿದೆ. ವ್ಯಾಪಾರಸ್ಥರಿಗೆ ಮಾತ್ರ ಈ ಪರಿಸ್ಥಿತಿ ಲಾಭದಾಯಕವಾಗಿದೆ.

ಬೆಂಗಳೂರು, ಫೆಬ್ರವರಿ 26: ಇಷ್ಟು ದಿನ ಕೊರೆಯುವ ಚಳಿಗೆ ನಲುಗಿದ್ದ ಜನಸಾಮಾನ್ಯರು ಈಗ ಸುಡುವ ಬಿಸಿಲಿಗೆ (Heat) ಹೈರಾಣಾಗುತ್ತಿದ್ದಾರೆ. ಸೂರ್ಯನ ಶಾಖಕ್ಕೆ ಮನೆಯಿಂದ ಹೊರಗೆ ಬರಲು ಸಹ ಯೋಚನೆ ಮಾಡುವ ಸ್ಥಿತಿ ಬಂದೊದಗಿದೆ. ಇದರ ಪರಿಣಾಮ ಎಸಿ, ಫ್ಯಾನ್, ಕೂಲರ್ಗಳ ಮೊರೆ ಹೋಗಿರುವ ಜನರು ತಣ್ಣಗೆ ಇರಲು ನಾನಾ ಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಬೇಡಿಕೆ ಹೆಚ್ಚಾದ ಪರಿಣಾಮ ಫ್ಯಾನ್, ಎಸಿ, ಏರ್ ಕೂಲರ್ಗಳ ದರವೂ ಹೆಚ್ಚಾಗಿದೆ.
ಶೇಕಡಾ 15 ರಿಂದ 20 ರಷ್ಟು ಬೆಲೆ ಏರಿಕೆ!
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲ ಶಾಖ ಹೆಚ್ಚಾಗಿದ್ದು, ಗರಿಷ್ಠ ತಾಪಮಾನ ದಾಖಲಾಗುತ್ತಿವೆ. ಇತ್ತ ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ವರೆಗೂ ವಾತಾವರಣ ಕಂಡುಬರುತ್ತಿದೆ. ಇಷ್ಟು ದಿನ ಚಳಿಗೆ ನಲುಗಿದ್ದ ಜನರು ಈಗ ಬಿಸಿಲ ಝಳಕ್ಕೆ ಸುಸ್ತಾಗಿದ್ದಾರೆ. ಇನ್ನೂ ಏರ್ ಕೂಲರ್, ಫ್ಯಾನ್, ಎಸಿ ಗಳಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದ್ದು, ಇಷ್ಟು ದಿನ ಡಲ್ ಹೊಡೆದಿದ್ದ ಇವುಗಳ ವ್ಯಾಪಾರ ಈಗ ಮತ್ತೆ ಗರಿಗೆದರಿದೆ.
ಇದನ್ನೂ ಓದಿ: ಬೆಂಗಳೂರು: ಫೆಬ್ರವರಿ ಉಷ್ಣಾಂಶ 20 ವರ್ಷಗಳಲ್ಲೇ ಗರಿಷ್ಠ
ಇನ್ನು ವ್ಯಾಪಾರ ಗರಿಗೆದರಿರುವುದು ವ್ಯಾಪಾರಿಗಳಿಗೆ ಸಮಾಧಾನ ತಂದಿದ್ದರೆ, ಗ್ರಾಹಕರಿಗೆ ಟೆನ್ಶನ್ ಶುರುವಾಗಿದೆ. ಏಕೆಂದರೆ ಕೂಲಿಂಗ್ ಉತ್ಪನಗಳ ಬೆಲೆ ಶೇಕಡಾ 15 ರಿಂದ 20 ರಷ್ಟು ಏರಿಕೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ಇದೂ ಸಹ ದುಬಾರಿ ಆಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ. ಸದ್ಯ ಬಿಸಿಲ ಬೇಗೆ ಸಹಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇರುವುದರಿಂದ ಕೊಳ್ಳುವುದು ಈಗ ಗ್ರಾಹಕರಿಗೆ ಅನಿವಾರ್ಯ ಆಗಲಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲೇ ಬಿಸಿಲಿನ ಝಳಕ್ಕೆ ತತ್ತರಿಸುತ್ತಿದೆ ಬೆಂಗಳೂರು: ಗರಿಷ್ಠ ಉಷ್ಣಾಂಶ ದೆಹಲಿಗಿಂತಲೂ ಹೆಚ್ಚು
ಒಟ್ಟಿನಲ್ಲಿ ಇಷ್ಟು ದಿನ ಡಲ್ ಹೊಡೆದಿದ್ದ ಎಸಿ, ಕೂಲರ್ ಫ್ಯಾನ್ಗಳ ವ್ಯಾಪಾರ ವಹಿವಾಟು ಜೋರಾಗಿದ್ದು, ಚಿಕ್ಕಪೇಟೆ ಹಾಗೂ ಹೋಲ್ ಸೇಲ್ ಅಂಗಡಿಗಳಲ್ಲಿ ಗ್ರಾಹಕರ ದಂಡು ಹೆಚ್ಚಾಗಿದೆ. ಆದರೆ ರೇಟ್ ಕೇಳಿ ಅಸಮಾಧಾನ ವ್ಯಕ್ತಪಡಿಸಿದರೂ, ಬೇರೆ ದಾರಿಯಿಲ್ಲದೆ ಖರೀದಿ ಮಾಡುತ್ತಿದ್ದಾರೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:49 pm, Wed, 26 February 25




