ಹೆಬ್ಬಾಳದಲ್ಲಿ ಬಿಎಂಆರ್ಸಿಎಲ್ನಿಂದ ಬಹುಮಾದರಿ ಸಾರಿಗೆ ಕೇಂದ್ರ ನಿರ್ಮಾಣ ವಿಳಂಬ: ಡಿಕೆ ಶಿವಕುಮಾರ್ಗೆ ಸುರೇಶ್ ಕುಮಾರ್ ಪತ್ರ
ಬೆಂಗಳೂರಿನ ಹೆಬ್ಬಾಳದಲ್ಲಿ ಮೆಟ್ರೋ ಸಂಸ್ಥೆಯ 45 ಎಕರೆ ಜಾಗವನ್ನು ಖಾಸಗಿ ಸಂಸ್ಥೆ ಪಂಚತಾರಾ ಹೋಟೆಲ್‌ಗೆ ಬಳಸಲು ಯೋಜಿಸಿದೆ. ಇದು ಮೆಟ್ರೋ ವಿಸ್ತರಣೆಗೆ ಅಡ್ಡಿಯಾಗುತ್ತಿದೆ. ಸರ್ಕಾರ ಮೆಟ್ರೋ ಯೋಜನೆಗೆ ಆದ್ಯತೆ ನೀಡಬೇಕು ಮತ್ತು ಖಾಸಗಿ ಹಿತಾಸಕ್ತಿಗಳನ್ನು ಪರಿಗಣಿಸಬಾರದು. ಭೂಮಾಲೀಕರಿಗೆ ಸೂಕ್ತ ಪರಿಹಾರ ನೀಡುವುದು ಅಗತ್ಯ ಎಂದು ಶಾಸಕ ಸುರೇಶ್ ಕುಮಾರ್ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ಗೆ ಪತ್ರ ಬರೆದಿದ್ದಾರೆ.

ಬೆಂಗಳೂರು, ಫೆಬ್ರವರಿ 27: ನಗರದ ಹೆಬ್ಬಾಳದಲ್ಲಿ ಬಿಎಂಆರ್ಸಿಎಲ್ನಿಂದ (BMRCL) ಬಹು ಮಾದರಿ ಸಾರಿಗೆ ಕೇಂದ್ರ ನಿರ್ಮಾಣ ವಿಚಾರವಾಗಿ ಕೆಐಎಡಿಬಿಯ 45 ಎಕರೆ ಜಮೀನನ್ನು ಶೀಘ್ರ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ಗೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಬಹಿರಂಗ ಪತ್ರ ಬರೆದಿದ್ದಾರೆ.
ಹೆಬ್ಬಾಳದ ಬಳಿ ನಮ್ಮ ಮೆಟ್ರೋ ಸಂಸ್ಥೆ ಬಹುಮಾದರಿಯ ಸಾರಿಗೆ ಕೇಂದ್ರ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿರುವ 45 ಎಕರೆ ಜಾಗದಲ್ಲಿಯೇ ಖಾಸಗಿ ಸಂಸ್ಥೆಯೊಂದು ಪಂಚತಾರಾ ಹೋಟೆಲ್, ಮಾಲ್ ಮತ್ತು ರೆಸಾರ್ಟ್ ಸೇರಿದಂತೆ ಪ್ರೀಮಿಯಂ ಟೌನ್ಶಿಪ್ ನಿರ್ಮಾಣವನ್ನು ಯೋಜಿಸಿದೆ ಎಂದು ಮಾಧ್ಯಮ ವರದಿಗಳಿಂದ ನಾನು ಅರಿತಿದ್ದೇನೆ.
ಇದನ್ನೂ ಓದಿ: ಕೆಂಪೇಗೌಡ ಲೇಔಟ್ಗೆ ಮೂಲಭೂತ ಸೌಕರ್ಯ ವಿಳಂಬ: ಬಿಡಿಎ ಅಧಿಕಾರಿಗಳ ವರ್ತನೆಗೆ ಅರ್ಜಿ ಸಮಿತಿ ಸದಸ್ಯರು ಸಭಾತ್ಯಾಗ
ಸಂಚಾರ ದಟ್ಟಣೆಯಿಂದ ನಲುಗುತ್ತಿರುವ ಅಸಂಖ್ಯ ಜನಸಾಮಾನ್ಯರ ಬಳಕೆಗೆ ನಮ್ಮ ಮೆಟ್ರೋ ಸೇವೆ ಮೌಲ್ಯಾತೀತದ್ದಾಗಿದ್ದು, ನಮ್ಮ ಮೆಟ್ರೋ ಸಂಸ್ಥೆಯ ಬೇಡಿಕೆಗಳನ್ನು ಪುರಸ್ಕರಿಸುವುದು ಬೆಂಗಳೂರು ನಗರದ ಹಿತದೃಷ್ಟಿಯಿಂದ ಸರ್ಕಾರದ ಮೊದಲ ಆದ್ಯತೆಯಾಗಬೇಕಾದ ಅನಿವಾರ್ಯತೆ ಇದೆ. ನಿಮಗೆ ತಿಳಿದಿರುವಂತೆ, ನಮ್ಮ ಮೆಟ್ರೋ ಸಂಸ್ಥೆಯು ತನ್ನ ಸಾರ್ವಜನಿಕ ಸಾರಿಗೆ ಅಗತ್ಯಗಳಿಗಾಗಿ ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಇಷ್ಟು ವಿಶಾಲವಾದ ಭೂಮಿಯನ್ನು ಪಡೆಯುವುದು ಅಸಾಧ್ಯ. ನನಗೆ ತಿಳಿದಂತೆ ಬಿಎಂಆರ್ ಸಿಎಲ್ ಸಂಸ್ಥೆ ಮಾರ್ಚ್ 2024 ರಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ “ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸ್ವಾಧೀನದಲ್ಲಿರುವ ಹೆಬ್ಬಾಳದಲ್ಲಿನ 45-ಎಕರೆ ಭೂಮಿಯನ್ನು ತನ್ನ ಸುಪರ್ದಿಗೆ ಕೋರಿದೆ. ಭೂ ಮಾಲೀಕರಿಗೆ ಪಾವತಿಸಲು ಮಂಡಳಿ ನಿಗದಿಪಡಿಸಿದ ಬೆಲೆಯನ್ನು ಪಾವತಿಸಲು ಕೂಡಾ ಬಿಎಂಆರ್ಸಿಎಲ್ ಸಿದ್ಧವಾಗಿದೆ. ಆದರೆ ಈ ಭೂಮಿಯನ್ನು ಬಿಎಂಆರ್ಸಿಎಲ್ಗೆ ವರ್ಗಾಯಿಸಲು ನಗರಾಭಿವೃದ್ಧಿ ಮತ್ತು ಕೈಗಾರಿಕೆ ಇಲಾಖೆಗಳು ತಮ್ಮದೇ ಆದ ಕಾರಣಗಳಿಗೆ ವಿಳಂಬ ಮಾಡುತ್ತಿವೆ ಎನ್ನುವುದು ಅನವಶ್ಯಕ ಸಂದೇಹವನ್ನು ಸೃಷ್ಟಿಸುತ್ತಿದೆ ಎಂದಿದ್ದಾರೆ.
ಇದು ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ, ನಿರ್ಣಾಯಕ ಮೂಲಸೌಕರ್ಯ ಯೋಜನೆಗಳ ಕುರಿತಾದ ನಿರ್ಧಾರಗಳನ್ನು ಯಾವುದೇ ಸರ್ಕಾರಗಳು ವಿಳಂಬ ಮಾಡಬಾರದು. ಜೊತೆಗೆ ಈ ಪ್ರಕರಣವು ಇನ್ನಷ್ಟು ಹೆಚ್ಚು ಸೂಕ್ಷವೆಂದು ನನ್ನ ಪ್ರಾಮಾಣಿಕ ಅನಿಸಿಕೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ ಕೆಲ ರೈಲುಗಳ ಸಂಚಾರ ಭಾಗಶಃ ರದ್ದು, ಮಾರ್ಗ ಬದಲಾವಣೆ
ನಾಳಿನ ಮಹತ್ವದ ಸಭೆಯಲ್ಲಿ ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಗಮನಿಸಬೇಕು. ಯಾವುದೇ ರಿಯಲ್ ಎಸ್ಟೇಟ್ ಲಾಬಿಯ ಒತ್ತಡಕ್ಕೆ ಸರ್ಕಾರ ಮಣಿಯಬಾರದು ಮತ್ತು ಅಂತಹ ಎಲ್ಲಾ ಪ್ರಯತ್ನಗಳನ್ನು ಮೊಳಕೆಯಲ್ಲಿ ಚಿವುಟಿ ಹಾಕಬೇಕೆಂದು ಆಗ್ರಹಪೂರ್ವಕವಾಗಿ ವಿನಂತಿ ಮಾಡಿದ್ದಾರೆ. ಇಲ್ಲಿ ಖಾಸಗಿ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಬೇಕಿದ್ದು, ಈ ನಿಟ್ಟಿನ ನಿಮ್ಮ ನಿರ್ಧಾರ ಅತ್ಯಂತ ನಿರ್ಣಾಯಕವಾದದ್ದಾಗಲಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



