ಲಿಂಗಾಯತ ಸಮರ; ಯತ್ನಾಳ್ ವಿರುದ್ಧ ಅಖಾಡಕ್ಕಿಳಿದ ವಿಜಯೇಂದ್ರ ಬಣ
ಬಿಜೆಪಿ ಮನೆಯೊಳಗಿನ ಬಣ ಬಡಿದಾಟದ ದಂಗೆ ಮತ್ತೊಂದು ಸಮರಕ್ಕೆ ಸಾಕ್ಷಿಯಾಗುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್, ಬಿ.ವೈ. ವಿಜಯೇಂದ್ರ ಬಣದ ಮಧ್ಯೆ ಲಿಂಗಾಯತ ವಾರ್ ನಡೆಯುತ್ತಿದೆ. ಅತೃಪ್ತ ಲಿಂಗಾಯತ ದಾಳಕ್ಕೆ ಕೌಂಟರ್ ಆಗಿ ಬಿ.ವೈ. ವಿಜಯೇಂದ್ರ ಪರವಾಗಿ ಯಡಿಯೂರಪ್ಪ ಆಪ್ತರೇ ಇದೀಗ ಅಖಾಡಕ್ಕೆ ಧುಮುಕಿದ್ದಾರೆ. ಯತ್ನಾಳ್ ವಿರುದ್ಧಬಿ.ಎಸ್. ಯಡಿಯೂರಪ್ಪ ಆಪ್ತರಿಂದ ಶಕ್ತಿ ಪ್ರದರ್ಶನ ಯುದ್ಧ ಶುರುವಾಗಿದೆ.

ಬೆಂಗಳೂರು: ಬಿಜೆಪಿ ಒಡೆದು ಬಣಗಳಾಗಿರುವುದು ಗೊತ್ತಿರದ ವಿಷಯವೇನಲ್ಲ. ಬಿಜೆಪಿಯಲ್ಲಿ ಒಳ ಜಗಳ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿಯ ಅತೃಪ್ತ ಶಾಸಕ ಬಸನಗೌಡ ಯತ್ನಾಳ್ ಬಿ.ವೈ. ವಿಜಯೇಂದ್ರ ವಿರುದ್ಧ ಲಿಂಗಾಯತ ದಾಳವನ್ನು ಉರುಳಿಸಿದ್ದು, ಈ ಮೂಲಕ ಇಬ್ಬರೂ ನಾಯಕರ ನಡುವೆ ಲಿಂಗಾಯತ ಸಮರ ಶುರುವಾಗಿದೆ. ಮೊನ್ನೆಯಷ್ಟೇ ಯತ್ನಾಳ್ ಪ್ರಮುಖ ಲಿಂಗಾಯತ ನಾಯಕರ ಜೊತೆ ಸಭೆ ಮಾಡಿದ್ದನ್ನು ಸಹಿಸಿಕೊಳ್ಳಲಾಗದ ವಿಜಯೇಂದ್ರ ಬೆಂಬಲಿತ ಗುಂಪು ಇದೀಗ ಯತ್ನಾಳ್ ಅವರಿಗೆ ಟಕ್ಕರ್ ಕೊಡೋಕೆ ಮುಂದಾಗಿದೆ.
ತಮ್ಮ ಮಗನ ಪರವಾಗಿ ಯಡಿಯೂರಪ್ಪನವರೇ ಪರೋಕ್ಷವಾಗಿ ಅಖಾಡಕ್ಕೆ ಇಳಿದಿದ್ದು, ಸಾಲು ಸಾಲು ಸಭೆ ನಡೆಸೋ ಮೂಲಕ, ಯಡಿಯೂರಪ್ಪರ ಲಿಂಗಾಯತ ಶಕ್ತಿ ಏನೆಂದು ತೋರಿಸ್ತೀವಿ ಎಂದು ಯಡಿಯೂರಪ್ಪನವರ ಆಪ್ತ, ಮಾಜಿ ಸಚಿವ ಎಂಪಿ. ರೇಣುಕಾಚಾರ್ಯ ಕಹಳೆ ಮೊಳಗಿಸಿದ್ದಾರೆ.
ಇದನ್ನೂ ಓದಿ: ಮತ್ತೊಂದು ಮಗ್ಗುಲಿಗೆ ಹೊರಳಿದ ಬಿಜೆಪಿ ಬಣಬಡಿದಾಟ: ವಿಜಯೇಂದ್ರ ವಿರುದ್ಧ ಲಿಂಗಾಯತ ಅಸ್ತ್ರ ಹೂಡಿದ ಯತ್ನಾಳ್
ದುಷ್ಟ ಶಕ್ತಿಯಿಂದ ಸಮಾಜ ಒಡೆಯೋ ಕೆಲಸ ಆಗುತ್ತಿದೆ ಎಂದು ಯತ್ನಾಳ್ ಬಣದ ವಿರುದ್ಧ ರೇಣುಕಾಚಾರ್ಯ ರೋಷಾವೇಶಗೊಂಡಿದ್ದಾರೆ. ಯಡಿಯೂರಪ್ಪನವರ ಋಣ ತೀರಿಸ್ಬೇಕು ಅಂದರೆ ಎಲ್ಲರೂ ಕೈ ಜೋಡಿಸ್ಬೇಕು ಎಂದು ರೇಣುಕಾಚಾರ್ಯ ಕರೆ ನೀಡಿದ್ದಾರೆ.
ಇದೀಗ ಯತ್ನಾಳ್ ಗ್ಯಾಂಗ್ ವಿರುದ್ಧ ತೊಡೆತಟ್ಟಿರೋ ವಿಜಯೇಂದ್ರ ಬಣ, ತಮ್ಮ ವೀರಶೈವ ಲಿಂಗಾಯತ ಶಕ್ತಿ ಏನು ಅಂತಾ ತೋರಿಸೋಕೆ ಹೊರಟಿದ್ದಾರೆ. ಅದಕ್ಕೆ ಸಾಲು ಸಾಲು ಸಭೆಯನ್ನೇ ನಿಗದಿ ಮಾಡಿದ್ದಾರೆ. ನಾಳೆ ಬಿ.ಎಸ್. ಯಡಿಯೂರಪ್ಪನವರ ಆಪ್ತರು, ನೆಲಮಂಗಲ, ದಾಬಸ್ ಪೇಟೆ ಭಾಗದ ವೀರಶೈವ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಮಾರ್ಚ್ 1ರಂದು ದಾವಣಗೆರೆ ಬೈಪಾಸ್ನಲ್ಲಿ, ಚಿತ್ರದುರ್ಗ, ಹಾವೇರಿ ಮುಖಂಡರ ಜೊತೆ ಮೀಟಿಂಗ್ ಮಾಡಲಿದ್ದಾರೆ. ಮಾರ್ಚ್ 4ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ದೊಡ್ಡ ಸಭೆ ಸೇರೋಕೆ ನಿರ್ಧಾರ ಮಾಡಿದ್ದಾರೆ. ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಶಂಕರ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ಸಭೆ ಆಯೋಜನೆ ಮಾಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ