ನಮ್ಮ ಮೆಟ್ರೋದ ಲಕ್ಷಾಂತರ‌ ರೂ. ಮೌಲ್ಯದ ವಿದ್ಯುತ್ ಕೇಬಲ್ ಕಳವು!

| Updated By: ವಿವೇಕ ಬಿರಾದಾರ

Updated on: Jan 20, 2025 | 9:43 AM

ಬೆಂಗಳೂರಿನ ನಮ್ಮ ಮೆಟ್ರೋ ರೈಲು ಮಾರ್ಗಗಳಲ್ಲಿ ವ್ಯಾಪಕವಾದ ವಿದ್ಯುತ್ ಕೇಬಲ್ ಕಳ್ಳತನಗಳು ನಡೆಯುತ್ತಿವೆ. ಪೀಣ್ಯ, ರಾಜಾಜಿನಗರ ಮತ್ತು ಬಸವನಗುಡಿ ಮಾರ್ಗಗಳಲ್ಲಿ ಹಲವು ಮೀಟರ್ ಉದ್ದದ ಕೇಬಲ್‌ಗಳು ಕಳವುಗೊಂಡಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಕಾಪರ್ ಕೇಬಲ್‌ಗಳ ಕಳ್ಳತನದಿಂದ ಬಿಎಂಆರ್‌ಸಿಎಲ್‌ಗೆ ಭಾರಿ ನಷ್ಟ ಉಂಟಾಗಿದೆ. ಈ ಘಟನೆಗಳು ಒಳಗಿನವರ ಸಹಾಯದಿಂದ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಮ್ಮ ಮೆಟ್ರೋದ ಲಕ್ಷಾಂತರ‌ ರೂ. ಮೌಲ್ಯದ ವಿದ್ಯುತ್ ಕೇಬಲ್ ಕಳವು!
ನಮ್ಮ ಮೆಟ್ರೋ
Follow us on

ಬೆಂಗಳೂರು, ಜನವರಿ 20: ಬೆಂಗಳೂರು (Bengaluru) ನಗರದಲ್ಲಿ ನಮ್ಮ ಮೆಟ್ರೋ (Namma Metro) ರೈಲು ಸಂಚಾರ ಜನರಿಗೆ ಅನುಕೂಲವಾಗಿದೆ. ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳಿಗೆ ಕಳ್ಳರು ಚಿಂತೆಯಾಗಿದೆ. ಹೌದು, ಬಿಎಂಆರ್​ಸಿಎಲ್ ಸಿಬ್ಬಂದಿ ವರ್ಗ ಹಾಗೂ ಸೆಕ್ಯುರಿಟಿ ಅಧಿಕಾರಿಗಳಿಗೆ ಕಳೆದ ಕೆಲ‌ ತಿಂಗಳಿನಿಂದ ವಿದ್ಯುತ್ ಕೇಬಲ್ ಕಳ್ಳತನ ನಿದ್ದೆಗೆಡಿಸಿದೆ. ನಮ್ಮ ಮೆಟ್ರೋ ರೈಲು ಸಂಚಾರ ಸಂಪೂರ್ಣ ಹೈವೋಲ್ಟೆಜ್ ವಿದ್ಯುತ್ ಪೂರೈಕೆಯ ಮೇಲೆಯೇ ಅವಲಂಬಿತವಾಗಿದೆ.

ಆದರೆ, ಕಳೆದ ಮೂರು ತಿಂಗಳಿನಿಂದ ನಮ್ಮ ಮೆಟ್ರೋ ಮಾರ್ಗದಲ್ಲಿನ ವಿದ್ಯುತ್ ಕೇಬಲ್ ಕಳವು ಹೆಚ್ಚಾಗಿದೆ. ಪೀಣ್ಯ, ರಾಜಾಜಿನಗರ, ಬಸವನಗುಡಿ ಮೆಟ್ರೋ ರೈಲು ಮಾರ್ಗದಲ್ಲಿನ ಮೆಟ್ರೋ ರೈಲು ಟ್ಯ್ರಾಕ್​ ಕೆಳಭಾಗದಲ್ಲಿರುವ ವಿದ್ಯುತ್ ಕೇಬಲ್ ಕಳುವಾಗಿದೆ. 2024ರ ಅಕ್ಟೋಬರ್​ನಿಂದ ಜನವರಿವರೆಗೂ ಸುಮಾರು ನೂರಾರು ಮೀಟರ್​ಗೂ ಹೆಚ್ಚು ಉದ್ದದ ಕೇಬಲ್, ಲಕ್ಷಾಂತರ ರೂಪಾಯಿ ಮೌಲ್ಯದ ಕಾಪರ್ ವಿದ್ಯುತ್ ಕೇಬಲ್ ಕಳ್ಳತನವಾಗಿದೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಮುಂದಿನ ವಾರದಿಂದ ಬಹುತೇಕ ಖಚಿತ

ನಮ್ಮ ಮೆಟ್ರೋ ರೈಲು ಟ್ಯ್ರಾಕ್​ ಮೇಲೆ ಹೈವೋಲ್ಟೆಜ್ ವಿದ್ಯುತ್ ಪ್ರವಹಿಸುತ್ತದೆ. ಇಂತಹ ಸಮಯದಲ್ಲಿ ವಿದ್ಯುತ್ ಕೇಬಲ್ ಕಳ್ಳತನ ಅಂದ್ರೆ ಅದು‌ ಸುಲಭದ ಮಾತಲ್ಲ. ಸಾಮಾನ್ಯ ಕಳ್ಳರು ಇಂತಹ ಕೆಲಸ ಮಾಡಲು ಅಸಾಧ್ಯ. ಆದರೂ, ಸುಲಭವಾಗಿ ಕಳ್ಳತನವಾಗುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಬಿಎಂಆರ್​ಸಿಎಲ್ ಸಿಬ್ಬಂದಿ ವರ್ಗದ ಸಹಾಯವಿಲ್ಲದೆ ಅಥವಾ ತಂತ್ರಜ್ಞಾನವನ್ನು ಅರಿತವನನ್ನು ಹೊರೆತುಪಡಿಸಿ ಯಾರಿಗೂ ಇಂತಹ ಸಾಹಸಕ್ಕೆ ಕೈಹಾಕಲು ಸಾಧ್ಯವೇ ಇಲ್ಲ. ಆದರೂ ಕಳ್ಳತನವಾಗುತ್ತಿರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಸದ್ಯಕ್ಕೆ ಮೂರು ಪ್ರತ್ಯೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 am, Mon, 20 January 25