Namma Metro: ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಹಸಿರು ನಿಶಾನೆ; ಮಹಿಳಾ ಲೋಕೋಪೈಲಟ್​​ ಮೂಲಕ ನೂತನ ಮಾರ್ಗಕ್ಕೆ ಚಾಲನೆ

| Updated By: Skanda

Updated on: Aug 29, 2021 | 11:21 AM

ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನೂತನ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ್ದು, ಮೊದಲ ರೈಲಿನಲ್ಲಿ ಮೆಟ್ರೋ ಸಿಬ್ಬಂದಿ ಪ್ರಯಾಣ ನಡೆಸಲಿದ್ದಾರೆ. ವಿಶೇಷವೆಂದರೆ ಮಹಿಳಾ ಲೋಕೋ ಪೈಲಟ್​ನಿಂದ ಮೆಟ್ರೋಗೆ ಚಾಲನೆ ಸಿಕ್ಕಿದೆ.

Namma Metro: ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಹಸಿರು ನಿಶಾನೆ; ಮಹಿಳಾ ಲೋಕೋಪೈಲಟ್​​ ಮೂಲಕ ನೂತನ ಮಾರ್ಗಕ್ಕೆ ಚಾಲನೆ
ನೂತನ ಮೆಟ್ರೋ ಮಾರ್ಗಕ್ಕೆ ಚಾಲನೆ
Follow us on

ಬೆಂಗಳೂರು: ನಾಯಂಡಹಳ್ಳಿ-ಕೆಂಗೇರಿ ನಡುವಿನ ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಸಚಿವರಾದ ಆರ್ ಅಶೋಕ್, ವಿ.ಸೋಮಣ್ಣ, ಗೋಪಾಲಯ್ಯ, ಮುನಿರತ್ನ, ಸಂಸದರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ ಭಾಗಿಯಾಗಿದ್ದು, 7.5 ಕಿ.ಮೀ. ಉದ್ದದ ಮೆಟ್ರೋ ವಿಸ್ತರಿತ ಮಾರ್ಗ ಲೋಕಾರ್ಪಣೆ ಮಾಡಿದ ನಂತರ ಮೆಟ್ರೋ ರೈಲಿನ ಪ್ರಯಾಣ ಮಾಡಿದ್ದಾರೆ. ನಾಯಂಡಹಳ್ಳಿ ಮೆಟ್ರೋ ಸ್ಟೇಷನ್​ನಿಂದ ಹೊರಟು ಕೆಂಗೇರಿಗೆ ತಲುಪಿದ ಮೊದಲ ರೈಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಸಚಿವರು ಪ್ರಯಾಣಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನೂತನ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ್ದು, ಮೊದಲ ರೈಲಿನಲ್ಲಿ ಮೆಟ್ರೋ ಸಿಬ್ಬಂದಿ ಪ್ರಯಾಣ ನಡೆಸಲಿದ್ದಾರೆ. ವಿಶೇಷವೆಂದರೆ ಮಹಿಳಾ ಲೋಕೋ ಪೈಲಟ್​ನಿಂದ ಮೆಟ್ರೋಗೆ ಚಾಲನೆ ಸಿಕ್ಕಿದೆ.

ಇಂದು ಉದ್ಘಾಟನೆದ ಈ ಮಾರ್ಗ ಸೋಮವಾರ ಬೆಳಗ್ಗೆ 7 ರಿಂದ ಜನರ ಸೇವೆಗೆ ಅಧಿಕೃತವಾಗಿ ಲಭ್ಯವಾಗಲಿದ್ದು, ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರೈ ಆಗಸ್ಟ್ 11 ಹಾಗೂ 12 ರಂದು ಸುರಕ್ಷತಾ ಪರೀಕ್ಷೆ ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡಿರುವ ಕಾರಣ ಪ್ರಯಾಣಿಕ ಬಳಕೆಗೆ ಮಾರ್ಗವನ್ನು ಅನುವು ಮಾಡಿಕೊಡಲಾಗಿದೆ. ಒಟ್ಟು 7.53 ಕಿ.ಮೀ ಉದ್ದದ 6 ಎತ್ತರಿಸಿದ ನಿಲ್ದಾಣ ಇರುವ ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಮಾರ್ಗವು 1,560 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಬಿಎಂಆರ್​ಸಿಎಲ್ ಕಳೆದ ಮೂರು ತಿಂಗಳಿನಿಂದ ಟ್ರಯಲ್ ರನ್ ನಡೆಸಿದೆ.

ನಾಯಂಡಹಳ್ಳಿ- ಕೆಂಗೇರಿ ಮೆಟ್ರೋ ರೈಲು ಸಂಚಾರ ಸೇವೆಯು ಹತ್ತು ನಿಮಿಷಗಳಿಗೆ ಒಂದು ರೈಲು ಕಾರ್ಯಚರಿಸಲು ಮೆಟ್ರೋ ನಿಗಮ ನಿರ್ಧರಿಸಿತ್ತು. ಆದರೆ ಈಗ ಪ್ರಯಾಣಿಕರ ದಟ್ಟಣೆ ನೋಡಿ ರೈಲು ಸಂಚಾರ ಸೇವೆಯನ್ನು ಮತ್ತಷ್ಟು ಹೆಚ್ಚಿಸಲು ಬಿಎಂಆರ್​ಸಿಎಲ್​ ನಿರ್ಧರಿಸಿದೆ.

ಇನ್ನಿತರ ಸಮಯದಲ್ಲಿ 10 ನಿಮಿಷಗಳಿಗೆ ಒಂದರಂತೆ ರೈಲು ಸಂಚಾರ ಇರುತ್ತದೆ. ಅಂದರೆ ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಬೆಳಿಗ್ಗೆ 7 ರಿಂದ 11 ಗಂಟೆ ಮತ್ತು ಸಂಜೆ 4.30 ರಿಂದ 7.30 ರವರೆಗೆ ಇರಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಾಗ 5 ರಿಂದ 8 ನಿಮಿಷಗಳಿಗೆ ಒಂದರಂತೆ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ರೈಲು ಸಂಚರಿಸಲಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ಹೇಳಿದ್ದಾರೆ.

ಮೆಟ್ರೋ ರೈಲುಗಳು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಡುವೆ ಮಾತ್ರ ಸಂಚರಿಸಲಿದೆ. ಅನಿವಾರ್ಯತೆ ಇದ್ದಾಗ ಮಾತ್ರ ಕಡಿಮೆ ಸಮಯಕ್ಕೆ ಒಂದರಂತೆ ರೈಲು ಸಂಚರಿಸಲು ಬಿಎಂಆರ್​ಸಿಎಲ್ ಕ್ರಮಕೈಗೊಳ್ಳಲಿದೆ. 7.5 ಕಿಲೋಮೀಟರ್ ವಿಸ್ತರಿಸಿದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸಿದರೆ, ಒಟ್ಟು 55 ಕಿಲೋಮೀಟರ್ ಬಿಎಂಆರ್​ಸಿಎಲ್ ನಗರದಲ್ಲಿ ಮೆಟ್ರೋ ಸಂಚರಿಸಿದಂತಾಗುತ್ತದೆ.

ಇನ್ನು ವಿಸ್ತರಿಸಿದ ನೇರಳೆ ಮಾರ್ಗದ ಪ್ರಯಾಣ ದರವನ್ನು ನಿಗದಿ ಪಡಿಸಲಾಗಿದ್ದು, ಬೈಯಪ್ಪನಹಳ್ಳಿಯಿಂದ ಕೇಂಗೇರಿಗೆ 56 ರೂಪಾಯಿ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ 45 ರೂಪಾಯಿ ಟಿಕೆಟ್ ದರವಿದೆ. ಅದರಂತೆ ಮೈಸೂರು ರಸ್ತೆಯಿಂದ ಕೆಂಗೇರಿವಗರೆಗೆ 6 ಮೆಟ್ರೋ ನಿಲ್ದಾಣಗಳು ಬರಲಿದೆ.

55 ಕಿಲೋಮೀಟರ್ ಸಂಚಾರ ಸಂಪರ್ಕ ಸಾಧಿಸಿರುವ ಪೈಕಿ ದೆಹಲಿ ಹಾಗೂ ಹೈದರಾಬಾದ್ ಮೊದಲೆರಡು ಸ್ಥಾನ ಕಾಯ್ದುಕೊಂಡಿದೆ. ಬೆಂಗಳೂರು ಮೆಟ್ರೋ ನಂತರದ ಸ್ಥಾನದಲ್ಲಿದೆ. ನಾಗಸಂದ್ರ -ರೇಷ್ಮೆ ಸಂಸ್ಥೆ ವರೆಗಿನ ಹಸಿರು ಮಾರ್ಗ 30 ಕಿಲೋಮಿಟರ್, ಬೈಯಪ್ಪನಹಳ್ಳಿ ಕೆಂಗೇರಿವರೆಗಿನ ನೇರಳೆ ಮಾರ್ಗ 25 ಕಿಲೋಮೀಟರ್ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:
Namma Metro: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ; ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಇಂದು ಚಾಲನೆ 

ಬೆಂಗಳೂರಿನಲ್ಲಿ 56 ಕಿಮೀ ಉದ್ದದ 2 ಮೆಟ್ರೋ ಮಾರ್ಗ ನಿರ್ಮಾಣಕ್ಕೆ 5 ಕೋಟಿ ಡಾಲರ್ ಸಾಲ: ಒಪ್ಪಂದಕ್ಕೆ ಸಹಿ