ಬೆಂಗಳೂರು, ಡಿಸೆಂಬರ್ 07: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರ (Karnataka Government) ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ (ಕೆಂಪು ಮಾರ್ಗ) ಉದ್ದೇಶಿಸಿರುವ 36.59 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಯ ಯೋಜನಾ ಪೂರ್ವ ಸಿದ್ಧತೆಗೆ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ದೊರೆತಿದೆ.
28,405 ಕೋಟಿ ಅಂದಾಜು ವೆಚ್ಚದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಿಸಲು ಉದ್ದೇಶಿಸಿದ್ದು, 17 ಮೆಟ್ರೋ ನಿಲ್ದಾಣ ಒಳಗೊಂಡ 22.14 ಕಿ.ಮೀ. ಎಲಿವೇ ಟೆಡ್ ಮಾರ್ಗ ಹಾಗೂ 11 ನಿಲ್ದಾಣ ಒಳಗೊಂಡ 14.45 ಕಿ.ಜೀ. ಸುರಂಗ ಮಾರ್ಗದ ಕಾಮಗಾರಿ ನಡೆಯಲಿದೆ.
ಕೆಂಪು ಮಾರ್ಗದ ಪ್ರತಿ ಕಿಮೀ ನಿರ್ಮಾಣಕ್ಕೆ 776 ಕೋಟಿ ರೂ. ವೆಚ್ಚವಾಗಲಿದೆ. ಈ ಹಂತ ಪೂರ್ಣಗೊಂಡರೆ 258 ಕಿಮೀ ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಸಂಪುಟದ ಅನುಮೋದನೆ ಪಡೆದ ಈ ಯೋಜನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಮುಂದಿನ ಒಂದು ವರ್ಷದೊಳಗೆ ಕೇಂದ್ರದ ಅನುಮೋದನೆ ಸಿಗುವ ಸಾಧ್ಯತೆ ಇದೆ. 2026ರಲ್ಲಿ ಇದರ ಕಾಮಗಾರಿ ಆರಂಭವಾದಲ್ಲಿ 2031ಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಡಿ.8 ಭಾನುವಾರ ನಮ್ಮ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ
ಇಬ್ಬಲೂರು, ಅಗರ, ಡೈರಿ ಸರ್ಕಲ್, ಕೆಆರ್ ಸರ್ಕಲ್ ಹಾಗೂ ಹೆಬ್ಬಾಳದಲ್ಲಿ ಐದು ಇಂಟರ್ ಚೇಂಜ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತದೆ
ಸರ್ಜಾಪುರ, ಕಾಡ ಅಗ್ರಹಾರ ರೋಡ್, ಸೋಮಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮಲ್ ರಾಂ, ದೊಡ್ಡಕನ್ನೆಲಿ, ಕಲ್ಕೊಂಡರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3rd ಬ್ಲಾಕ್, ಕೋರಮಂಗಲ 2nd ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿನಗರ, ಟೌನ್ ಹಾಲ್, ಕೆಆರ್ ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್, ಮೇಕ್ರಿ ಸರ್ಕಲ್, ಪ್ಯಾಲೇಸ್ ಗುಟ್ಟಳ್ಳಿ, ವೆಟರ್ನರಿ ಕಾಲೇಜು, ಗಂಗಾನಗರ, ಹೆಬ್ಬಾಳದಲ್ಲಿ ರೈಲು ನಿಲ್ಲಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:01 am, Sat, 7 December 24