ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷದ ಗಿಫ್ಟ್: ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಸಂಚರಿಸಲಿದೆ ಚಾಲಕರಹಿತ ಮೆಟ್ರೋ
ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಗುಡ್ ನ್ಯೂಸ್ ನೀಡಿದೆ. ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಚೀನಾದ ಚಾಲಕ ರಹಿತ ಮೆಟ್ರೋ ರೈಲು ಹೊಸ ವರ್ಷದಿಂದ ಸಂಚಾರ ಶುರು ಮಾಡಲಿದ್ದು, ಬೊಮ್ಮನಹಳ್ಳಿ ಟು ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಜಾಮ್ಗೆ ಮುಕ್ತಿ ಸಿಗಲಿದೆ. ಈಗಾಗಲೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಮುಗಿಸಿರುವ ಚಾಲಕರಹಿತ ಮೆಟ್ರೋಗೆ, ರೈಲ್ವೆ ಸುರಕ್ಷತಾ ಆಯುಕ್ತರು ಕೂಡ ಈಗಾಗಲೇ ಹಸಿರುನಿಶಾನೆ ತೋರಿದ್ದಾರೆ.
ಬೆಂಗಳೂರು, ಡಿಸೆಂಬರ್ 5: ಜನವರಿಯಿಂದ ಆರ್ವಿ ರೋಡ್ – ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ. ಇನ್ಫೋಸಿಸ್ ಸೇರಿದಂತೆ ಸಾವಿರಾರು ಐಟಿ ಬಿಟಿ ಕಂಪನಿಗಳಿಗೆ ಈ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ಚಾಲಕ ರಹಿತ ಮೆಟ್ರೋ ಮಾರ್ಗ 19.15 ಕಿಮೀ ಇದ್ದು, ಆರ್ವಿ ರೋಡ್ ಹಾಗೂ ಬೊಮ್ಮಸಂದ್ರದ ನಡುವೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ ಬರೋಬ್ಬರಿ 16 ಸ್ಟೇಷನ್ ಗಳಿವೆ. ಅಲ್ಲದೇ, ಬೋಗಿಗಳಲ್ಲಿ 24 ಸಿಸಿ ಟಿವಿ ಅಳವಡಿಸಲಾಗಿದ್ದು, ಮುಂಭಾಗದಲ್ಲಿ 2 ಸಿಸಿಟಿವಿ ಇರಲಿದ್ದು, ಇವು ಪ್ರಯಾಣದ ದೃಶ್ಯವನ್ನು ಸೆರೆ ಹಿಡಿಯಲಿವೆ. ಈ ಮೆಟ್ರೋ ಎತ್ತರಿಸಿದ ಮಾರ್ಗದಲ್ಲಿ ಮಾತ್ರ ಸಂಚರಿಸಲಿದೆ. ರಸ್ತೆ, ಮೇಲ್ಸೇತುವೆ, ಅದರ ಮೇಲ್ಭಾಗದಲ್ಲಿ ಈ ಮೆಟ್ರೋ ಸಂಚರಿಸುವ ನಿಲ್ದಾಣ ಇರಲಿದ್ದು, ಇದರ ಮತ್ತೊಂದು ವಿಶೇಷತೆಯಾಗಿದೆ.
ಮಾದಾವರ ಹಾಗೂ ನಾಗಸಂದ್ರ ಮಾರ್ಗದ ಮೆಟ್ರೋಗೆ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ. ಹಸಿರು ಮಾರ್ಗದ ಮಾದವಾರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ಮಾರ್ಗದಲ್ಲಿ ಬರುವ, ನಾಗಸಂದ್ರ ಟು ಮಾದಾವರ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿಲ್ಲ ಎನ್ನಲಾಗಿದೆ. ಕಳೆದ ತಿಂಗಳ ನವೆಂಬರ್ 7 ರಂದು ಯಾವುದೇ ಉದ್ಘಾಟನೆ ಇಲ್ಲದೆ, ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸಲಾಯಿತು. ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಮೂರು ನಿಲ್ದಾಣಗಳಿದ್ದು, ಈ ಮಾರ್ಗ 3.14-ಕಿಮೀ ದೂರ ಹೊಂದಿದೆ. ಈ ಮಾರ್ಗದಲ್ಲಿ ಮೆಟ್ರೋ ಆರಂಭವಾಗಿ ಮೂರು ವಾರಗಳಾಗಿವೆ. ಆದರೂ ಪ್ರಯಾಣಿಕರ ಸಂಖ್ಯೆ ಮಾತ್ರ ಹೆಚ್ಚುತ್ತಿಲ್ಲ.
45 ಸಾವಿರ ಪ್ರಯಾಣಿಕರ ನಿರೀಕ್ಷಸಿದ್ದ ಬಿಎಂಆರ್ಸಿಎಲ್
ಪ್ರತಿನಿತ್ಯ ಈ ಮೂರು ಮೆಟ್ರೋ ಸ್ಟೇಷನ್ಗಳಿಂದ ಬಿಎಂಆರ್ಸಿಎಲ್ 40 ರಿಂದ 45 ಸಾವಿರ ಪ್ರಯಾಣಿಕರನ್ನು ನಿರೀಕ್ಷೆ ಮಾಡಿತ್ತು. ನವೆಂಬರ್ 7 ರಿಂದ 30ರ ವರೆಗೆ ಮೂರು ಸ್ಟೇಷನ್ಗಳಲ್ಲಿ ಪ್ರಯಾಣ ಮಾಡಿದವರ ಸರಾಸರಿ ಸಂಖ್ಯೆ 8 ರಿಂದ 11 ಸಾವಿರ ಅಷ್ಟೆ. ಮಾದಾವರ ಮೆಟ್ರೋದಿಂದ 4 ರಿಂದ 7 ಸಾವಿರ ಪ್ರಯಾಣಿಕರು ಮಾತ್ರ ಸಂಚಾರ ಮಾಡಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಬಿಎಂಆರ್ಸಿಎಲ್ ನಾನಾ ರೀತಿಯಲ್ಲಿ ತಂತ್ರ ರೂಪಿಸುತ್ತಿದೆ. ಈ ಮಧ್ಯೆ, ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಿದರೆ ಹೊಸೂರು ರೋಡ್ ನಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ತುಂಬಾ ಸಹಾಯ ಆಗುತ್ತದೆ ಎನ್ನುತ್ತಾರೆ ಮೆಟ್ರೋ ಪ್ರಯಾಣಿಕರು.
ಇದನ್ನೂ ಓದಿ: ನೀರಿನ ದರ ಹೆಚ್ಚಳ ಸುಳಿವು ನೀಡಿದ ಬೆಂಗಳೂರು ಜಲಮಂಡಳಿ: ಡಿಕೆಶಿ ನೇತೃತ್ವದ ಮುಂದಿನ ಸಭೆಯಲ್ಲಿ ತೀರ್ಮಾನ ಸಾಧ್ಯತೆ
ಒಟ್ಟಿನಲ್ಲಿ ಹಳದಿ ಮಾರ್ಗದ ಆರ್ವಿ ರೋಡ್ ಟು ಬೊಮ್ಮಸಂದ್ರ ಮಧ್ಯೆ ಸಂಚಾರ ಆರಂಭವಾದರೆ ಐಟಿ ಬಿಟಿ ಕಂಪನಿಗಳ ಲಕ್ಷಾಂತರ ಟೆಕ್ಕಿಗಳು ಮತ್ತು ವಾಹನ ಸವಾರರಿಗೆ ಸಹಾಯ ಆಗುವುದರಲ್ಲಿ ಅನುಮಾನವಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:29 am, Thu, 5 December 24