ಮೆಟ್ರೋ ಪಿಲ್ಲರ್ ರಾಡ್ಗಳು ಬಿದ್ದು ತಾಯಿ ಮಗನ ಸಾವು ಪ್ರಕರಣ; ಮುಖ್ಯ ಎಂಜಿನಿಯರ್ ಮೊರೆ ಹೋದ ಖಾಕಿ
ಮೆಟ್ರೋ ಪಿಲ್ಲರ್ ರಾಡ್ಗಳು ಕುಸಿದುಬಿದ್ದ ಘಟನೆ ಸಂಬಂಧ ಮತ್ತಷ್ಟು ಆಳವಾಗಿ ತನಿಖೆ ನಡೆಸಲು ಮುಂದಾಗಿರುವ ಪೊಲೀಸರು ಪಿಲ್ಲರ್ ನಿರ್ಮಾಣ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ನಿಟ್ಟಿನಲ್ಲಿ ಬೇರೆ ಇಲಾಖೆಯ ಸರ್ಕಾರಿ ಮುಖ್ಯ ಎಂಜಿನಿಯರ್ ಮೊರೆ ಹೋಗಲು ಚಿಂತನೆ ನಡೆಸಿದ್ದಾರೆ.
ಬೆಂಗಳೂರು: ಮೆಟ್ರೋ ಪಿಲ್ಲರ್ (Metro Pillar) ರಾಡ್ಗಳು ಬಿದ್ದು ತಾಯಿ ಮತ್ತು ಮಗು ಸಾವನ್ನಪ್ಪಿರುವ ಪ್ರಕರಣ (Mother And Child Death Case) ಸಂಬಂಧ ನಗರದ ಗೋವಿಂದಪುರ ಠಾಣಾ ಪೊಲೀಸರು ತನಿಖೆಯ (Investigation) ಆಯಾಮವನ್ನು ಬದಲಾಯಿಸಿದ್ದಾರೆ. ಘಟನೆ ಸಂಬಂಧ ಮತ್ತಷ್ಟು ಆಳವಾಗಿ ತನಿಖೆ ನಡೆಸಲು ಮುಂದಾಗಿರುವ ಪೊಲೀಸರು ಪಿಲ್ಲರ್ ಕುಸಿತ ಸಂಬಂಧ ಪಿಲ್ಲರ್ ನಿರ್ಮಾಣ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ನಿಟ್ಟಿನಲ್ಲಿ ಬೇರೆ ಇಲಾಖೆಯ ಸರ್ಕಾರಿ ಮುಖ್ಯ ಎಂಜಿನಿಯರ್ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ.
ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ ಏಕಾಏಕಿಯಾಗಿ ಕುಸಿದುಬಿದ್ದಿರುವ ಹಿಂದೆ ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದೆ. ಹೀಗಾಗಿ ಮೆಟ್ರೋ ಪಿಲ್ಲರ್ ನಿರ್ಮಾಣ ಹೇಗೆ ನಡೆಯುತ್ತದೆ, ಅದಕ್ಕೆ ಬಳಸಬೇಕಾದ ವಸ್ತುಗಳು ಎಂತಹ ಗುಟಮಟ್ಟದ್ದಾಗಿರಬೇಕು, ಪಿಲ್ಲರ್ ದಪ್ಪ, ಅದಕ್ಕೆ ಬಳಸು ಕಬ್ಬಿಣವೆಷ್ಟು, ಪಿಲ್ಲರ್ ನಿರ್ಮಾಣಕ್ಕೆ ಬಳಸುವ ಕಾಂಕ್ರೀಟ್ ಪ್ರಮಾಣವೆಷ್ಟು, ಒಂದು ಪಿಲ್ಲರ್ ನಿರ್ಮಾಣಕ್ಕೆ ತೆಗೆದುಕೊಳ್ಳುವ ಸಮಯವೆಷ್ಟು, ಇದೆಲ್ಲವನ್ನು ಕೆಲಸ ಮಾಡಿಸುವುದು ಯಾರ ಹೊಣೆ, ಇದರಲ್ಲಿ ಲೋಪ ಕಂಡು ಬಂದರೆ ಅದಕ್ಕೆ ಯಾರು ಕಾರಣ ಎಂಬಿತ್ಯಾದಿ ಮಾಹಿತಿ ಸಂಗ್ರಹಕ್ಕೆ ಗೊವಿಂದಪುರ ಪೊಲೀಸರು ಮುಂದಾಗಿದ್ದಾರೆ.
ಸದ್ಯ ಆರೋಪಿತ ಅಧಿಕಾರಿಗಳ ವಿಚಾರಣೆಯನ್ನು ಮುಂದೂಡಿದ ಪೊಲೀಸರು ಮುಖ್ಯ ಇಂಜಿನಿಯರ್ ರಿಪೊರ್ಟ್ ಆಧರಿಸಿ ಇಂಚಿಂಚು ಮಾಹಿತಿ ಪಡೆದು ನಂತರ ವಿಚಾರಣೆ ಶುರು ಮಾಡಲಿದ್ದಾರೆ. ಕಾಂಟ್ರಾಕ್ಟ್ ಪಡೆದ ಕಂಪನಿ ಹೊರತುಪಡಿಸಿ ಬಿಎಂಆರ್ಸಿಎಲ್ ಅಧಿಕಾರಿಗಳಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ. ಘಟನೆ ಸಂಬಂಧ ಪ್ರಾಥಮಿಕವಾಗಿ ಸೈಟ್ ಅಧಿಕಾರಿ ಮತ್ತು ಸಿಬ್ಬಂದಿ ಬಳಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪಿಲ್ಲರ್ ತೂಕ ಜಾಸ್ತಿಯಾಗಿ ರಸ್ತೆ ಮೇಲೆ ಬಿದ್ದ ಪಿಲ್ಲರ್?
ಕಬ್ಬಿಣದ ಕಂಬಗಳಿಂದ 18 ಮೀಟರ್ ಎತ್ತರ ಪಿಲ್ಲರ್ ಸಿದ್ದಪಡಿಸಿ ನಿಲ್ಲಿಸಲಾಗಿತ್ತು. ಹಂತ ಹಂತವಾಗಿ ಕಾಂಕ್ರೀಟ್ ಹಾಕುವುದರಿಂದ ಪಿಲ್ಲರ್ ವೀಕ್ ಆಗುವ ಸಾಧ್ಯತೆ ಹಿನ್ನಲೆ ಪಿಲ್ಲರ್ಗೆ ಒಂದೇ ಬಾರಿ ಕಾಂಕ್ರೀಟ್ ಹಾಕಲು ಅಧಿಕಾರಿಗಳು ಪ್ಲಾನ್ ಮಾಡಿದ್ದರಂತೆ. ಅದಕ್ಕಾಗಿ 18 ಮೀಟರ್ ಎತ್ತರದ ಕಬ್ಬಿಣದ ಪಿಲ್ಲರ್ ಸಿದ್ದಪಡಿಸಿ ನಿಲ್ಲಿಸಲಾಗಿತ್ತು. ಅಲ್ಲದೆ, ಪಿಲ್ಲರ್ ನಾಲ್ಕು ಕಡೆ ವೈಯರ್ ರೂಪ್ನಿಂದ ಬಿಗಿದು ಕಟ್ಟಲಾಗಿತ್ತು.
ನಾಲ್ಕು ಕಡೆ ವೈಯರ್ ರೂಪ್ನಿಂದ ಬಿಗಿಯಲಾಗಿತ್ತಾದರೂ ಒಂದು ಕಡೆ ವೈಯರ್ ರೂಪ್ ಕಟ್ ಆಗಿದ್ದು, ಗಾಳಿ ಬಂದಾಗ ವಾಲಿದಂತೆ ಹಾರಾಟ ಮಾಡುತ್ತಿತ್ತು. ಅದೇ ರೀತಿ ಮಂಗಳವಾರವು ಕೂಡ ಪಿಲ್ಲರ್ ತೂಕ ಜಾಸ್ತಿಯಾಗಿ ರಸ್ತೆ ಮೇಲೆ ಬಿದ್ದಿರುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಅದರೆ ಘಟನೆಗೆ ಸ್ಪಷ್ಟ ಕಾರಣ ಸೈಟ್ ಅಧಿಕಾರಿಗಳಿಂದಲೇ ಸಿಗಬೇಕಿದೆ.
ಇದನ್ನೂ ಓದಿ: ಮೆಟ್ರೋ ನಿರ್ಮಾಣಕ್ಕೆ ಈವರೆಗೆ 18 ಬಲಿ; ಇನ್ನಾದರೂ ಬೆಂಗಳೂರು ನಾಗರಿಕರಿಗೆ ಸಿಗಬಹುದೇ ಸುರಕ್ಷಾ ಖಾತ್ರಿ
ಕನ್ಸ್ಟ್ರಕ್ಷನ್ ಕಂಪನಿ, ಸೈಟ್ ಇಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಮೆಟ್ರೋ ಇಂಜಿನಿಯರ್ಗಳು ಏನು ಹೇಳುತ್ತಾರೆ ಅನ್ನೋದು ಸದ್ಯ ಕುತೂಹಲವಾಗಿದೆ. ಮತ್ತೊಂದೆಡೆ ಐಐಎಸ್ಸಿ, ಎಫ್ಎಸ್ಎಲ್ ವರದಿಯಿಂದ ಘಟನೆಯ ಅಸಲಿ ಸತ್ಯ ಹೊರ ಬರಬೇಕಿದೆ. ಇದೆಲ್ಲದರ ನಡುವೆ ಈಗ ಚೀಫ್ ಇಂಜಿನಿಯರ್ ಮಾಹಿತಿ ಆಧರಿಸಿ ವಿಚಾರಣೆ ನಡೆಯಲಿದೆ. ಜೊತೆಗೆ ಐಐಎಸ್ಸಿ ವರದಿ ಬಳಿಕವಷ್ಟೇ ಎರಡು ಜೀವಗಳ ಸಾವಿಗೆ ಕಾರಣ ತಿಳಿದು ಬರಲಿದೆ.
ಪೊಲೀಸರಿಂದ ಆರೋಪಿಗಳಿಗೆ ನೋಟಿಸ್
ದುರ್ಘಟನೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಗೋವಿಂದಪುರ ಪೊಲೀಸರು 9 ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇಂದು ಠಾಣಾ ಇನ್ಸ್ಪೆಕ್ಟರ್ ಮುಂದೆ ವಿಚಾರಣೆಗೆ ಹಾಜರಾಗುವಂತೆ A1 ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ, A2 ಪ್ರಭಾಕರ್, A3 ಚೈತನ್ಯ, A4 ಮಥಾಯಿ, A5 ವಿಕಾಸ್ ಸಿಂಗ್, A6 ಲಕ್ಷ್ಮೀಪತಿ, A7 BMRCL ಡೆಪ್ಯೂಟಿ ಚೀಫ್ ಇಂಜಿನಿಯರ್ ವೆಂಕಟೇಶ್ ಶೆಟ್ಟಿ, A8 BMRCL ಇಇ ಮಹೇಶ್ ಬಂಡೇಕರಿ, A9 JE ಜಾಫರ್ ಸಾದಿಕ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:55 am, Thu, 12 January 23