
ಬೆಂಗಳೂರು, ನವೆಂಬರ್ 11: ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಮಾರ್ಗ (Namma Metro Pink Line) ಉದ್ಘಾಟನೆಯು ಮತ್ತೊಮ್ಮೆ ಅಡಚಣೆಗೆ ಗುರಿಯಾಗಿದ್ದು, ಈ ಬಾರಿ ರೈಲು ರೇಕ್‌ಗಳ ಕೊರತೆ ಎದುರಾಗಿದೆ. ಇದರಿಂದಾಗಿ ಮಾರ್ಗದ ಉದ್ಘಾಟನೆಯು ಸುಮಾರು ಐದು ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ.
2020 ರಲ್ಲಿ ಉದ್ಘಾಟನೆಗೊಳ್ಳಬೇಕಿದ್ದ 21.25 ಕಿ.ಮೀ. ಕಾಳೇನ ಅಗ್ರಹಾರ-ನಾಗವಾರ ಕಾರಿಡಾರ್ ನಿರಂತರವಾಗಿ ಮುಂದೂಡಲ್ಪಟ್ಟಿತ್ತು. ಮೊದಲು 2025 ರ ಅಂತ್ಯಕ್ಕೆ ಮುಂದೂಡಿಕೆಯಾಗಿದ್ದರೆ, ನಂತರ ಮಾರ್ಚ್ 2026 ಕ್ಕೆ ಮತ್ತು ಈಗ ಮತ್ತೊಮ್ಮೆ ಮೇ 2026 ಕ್ಕೆ ಮುಂದೂಡಲಾಗಿದೆ. ಎಲವೇಟೆಡ್ ಸ್ಟೇಶನ್ಗಳು ಸಿದ್ಧವಾಗಿದ್ದರೂ, ಪ್ರಾಯೋಗಿಕ ಚಾಲನೆಗಾಗಿ ಇನ್ನೂ ಯಾವುದೇ ರೈಲು ಸೆಟ್‌ಗಳು ಬಂದಿಲ್ಲ ಎಂದು ತಿಳಿದುಬಂದಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಗೆ (BMRCL) ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) 318 ಮೆಟ್ರೋ ಬೋಗಿಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿತ್ತು. ಇವುಗಳಲ್ಲಿ 96 ಬೋಗಿಗಳನ್ನು ಪಿಂಕ್ ಲೈನ್‌ಗೆ ಮತ್ತು ಉಳಿದವುಗಳನ್ನು ಬ್ಲೂ ಲೈನ್‌ಗೆ ಎಂದು ಹೇಳಲಾಗಿತ್ತು. ಆದರೆ BEML ನಿಂದ ಇನ್ನೂ ಯಾವುದೇ ರೈಲುಗಳನ್ನು ಬಂದಿಲ್ಲವೆಂದು ಹೇಳಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಮೊದಲ ಮೂಲಮಾದರಿಯ ರೇಕ್ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ನಂತರ ಪರೀಕ್ಷೆ ಮತ್ತು ಸುರಕ್ಷತಾ ಅನುಮೋದನೆಗಳಿಗೆ ಕನಿಷ್ಠ ಎರಡು ತಿಂಗಳುಗಳು ಹಿಡಿಯಬಹುದು. ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕನಿಷ್ಠ ಮೂರು ರೈಲುಗಳಾದರೂ ಬೇಕಾದ್ದರಿಂದ 2026 ರ ಮಧ್ಯದವರೆಗೂ ಪಿಂಕ್ ಲೈನ್ ರೈಲು ಹಳಿಗಿಳಿಯುವ ಸಾಧ್ಯತೆಯಿಲ್ಲ.
18 ನಿಲ್ದಾಣಗಳನ್ನು ಒಳಗೊಂಡಿರುವ ಪಿಂಕ್ ಲೈನ್‌ನ ಕೆಲಸವು ಎಂಟು ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. ವರ್ಷಕ್ಕೆ ಸರಾಸರಿ 2.5 ಕಿ.ಮೀ ಕಾರಿಡಾರ್ ಮಾತ್ರ ನಿರ್ಮಾಣವಾಗುತ್ತಿದ್ದು, ಇದು ಮೆಟ್ರೋ ಯೋಜನೆಗಳಲ್ಲಿ ಅತ್ಯಂತ ನಿಧಾನಗತಿಯ ಯೋಜನೆಯಾಗಿದೆ. ಒಟ್ಟು 21.25 ಕಿ.ಮೀ ಕಾರಿಡಾರ್ನಲ್ಲಿ, 7.5 ಕಿ.ಮೀ. ಎಲವೇಟೆಡ್ ಮಾರ್ಗವಾಗಿದ್ದರೆ (ಕಲೇನ ಅಗ್ರಹಾರದಿಂದ ತಾವರೆಕೆರೆವರೆಗೆ), 13 ಕಿ.ಮೀ. ಸುರಂಗ ಮಾರ್ಗವಾಗಿದೆ (ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ). ಸುರಂಗ ವಿಭಾಗವು ಡಿಸೆಂಬರ್ 2026 ರ ವೇಳೆಗೆ ತೆರೆಯುವ ನಿರೀಕ್ಷೆಯಿದೆ. ಎಲವೇಟೆಡ್ ಮಾರ್ಗವು ಕಲೇನಾ ಅಗ್ರಹಾರ, ಹುಳಿಮಾವು, ಐಐಎಂ-ಬೆಂಗಳೂರು, ಜೆಪಿ ನಗರ 4 ನೇ ಹಂತ, ಜಯದೇವ ಮತ್ತು ತಾವರೆಕೆರೆ ಮುಂತಾದ ನಿಲ್ದಾಣಗಳನ್ನು ಒಳಗೊಂಡಿರಲಿದೆ.
ಇದನ್ನೂ ಓದಿ ಬೆಂಗಳೂರಿನಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗವಾಗಲಿದೆ ಪಿಂಕ್ ಲೈನ್, ಬಿಎಂಆರ್ಸಿಎಲ್ ಬಿಗ್ ಅಪ್ಡೇಟ್
2017 ರಲ್ಲಿ ಸಿಂಪ್ಲೆಕ್ಸ್ ಇನ್ಫ್ರಾಗೆ ನೀಡಲಾದ ಆರಂಭಿಕ ಒಪ್ಪಂದವನ್ನು ಕೇವಲ ಶೇ. 37 ಕೆಲಸ ಪೂರ್ಣಗೊಂಡ ನಂತರ 2021 ರಲ್ಲಿ ರದ್ದುಗೊಳಿಸಲಾಗಿತ್ತು. ನಂತರ ಜಿಆರ್ ಇನ್ಫ್ರಾಪ್ರಾಜೆಕ್ಟ್ಸ್ ಅಧಿಕಾರ ವಹಿಸಿಕೊಂಡು ಉಳಿದ ಭಾಗವನ್ನು ಪರಿಷ್ಕೃತ ವೇಳಾಪಟ್ಟಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿತು. BEML ರೈಲುಗಳನ್ನು ವಿತರಿಸಿದ ನಂತರ ಮೂರು ಅಥವಾ ನಾಲ್ಕು ರೈಲುಗಳೊಂದಿಗೆ ಎಲವೇಟೆಡ್ ಮಾರ್ಗದಲ್ಲಿ ಸೇವೆಗಳು ಪ್ರಾರಂಭವಾಗಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:01 am, Tue, 11 November 25