AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanagara News: ಬೆಂಗಳೂರು-ಮೈಸೂರು ರಸ್ತೆ ಅಂಡರ್​ಪಾಸ್​ಗಳು ಜಲಾವೃತ; ಸಂಚಾರ ತಾತ್ಕಾಲಿಕ ಸ್ಥಗಿತ

ರಾಮನಗರ ತಾಲ್ಲೂಕಿನ ಬಸವನಪುರ ಗ್ರಾಮದ ಬಳಿ ಅಂಡರ್​ಪಾಸ್​ನಲ್ಲಿ ಮೂರು ಅಡಿಯಷ್ಟು ಮಳೆ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

Ramanagara News: ಬೆಂಗಳೂರು-ಮೈಸೂರು ರಸ್ತೆ ಅಂಡರ್​ಪಾಸ್​ಗಳು ಜಲಾವೃತ; ಸಂಚಾರ ತಾತ್ಕಾಲಿಕ ಸ್ಥಗಿತ
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ
TV9 Web
| Edited By: |

Updated on:Sep 06, 2022 | 9:57 AM

Share

ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ರಸ್ತೆಯ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Bengaluru Mysore Highway) ಹಲವು ಅಂಡರ್ ಪಾಸ್​ಗಳು ಜಲಾವೃತಗೊಂಡಿವೆ. ರಾಮನಗರ ತಾಲ್ಲೂಕಿನ ಬಸವನಪುರ ಗ್ರಾಮದ ಬಳಿ ಅಂಡರ್​ಪಾಸ್​ನಲ್ಲಿ ಮೂರು ಅಡಿಯಷ್ಟು ಮಳೆ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಸೋಮವಾರ ತಡರಾತ್ರಿ ಅಂಡರ್​ಪಾಸ್​ ಜಲಾವೃತಗೊಂಡಿದ್ದರಿಂದ ಬದಲಿ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇಂದು ಕೊಂಚ ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಇದೇ ಬಸವನಪುರ ಅಂಡರ್ ಪಾಸ್ ಬಳಿ ಸಾಕಷ್ಟು ವಾಹನಗಳು ಮುಳುಗಿದ್ದವು. ಇದೀಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಮೈದುಂಬಿ ಹರಿಯುತ್ತಿರುವ ಅರ್ಕಾವತಿ ನದಿ

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಾದ್ಯಂತ ಧಾರಾಕಾರ ‌ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿದೆ. ರಾಮನಗರ ‌ಜಿಲ್ಲೆ ರೈತರ ಜೀವನಾಡಿಯಾಗಿರುವ ಅರ್ಕಾವತಿಗೆ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದಿಂದ 5,500 ಕ್ಯೂಸೆಸ್ ನೀರು ಬಿಡಲಾಗಿದೆ. ಕಳೆದ ಎರಡು ದಿನಗಳಿಂದ ನದಿಯು ನಿರಂತರವಾಗಿ ಹರಿಯುತ್ತಿದೆ.

ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಹುಟ್ಟುವ ಆರ್ಕಾವತಿ ನದಿಯು ದೊಡ್ಡಬಳ್ಳಾಪುರ ಮಾರ್ಗವಾಗಿ ಹಲವು ಕೆರೆಗಳ ಜಾಲದಲ್ಲಿ ಹರಿದು ರಾಮನಗರ ಮೂಲಕ ಸಂಗಮದಲ್ಲಿ ಕಾವೇರಿಗೆ ಸೇರುತ್ತದೆ. ಹಲವು ವರ್ಷಗಳ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಮೈದುಂಬಿ ಹರಿಯುತ್ತಿದೆ. ಮತ್ತಷ್ಟು ಮಳೆ ಬಂದರೆ ನದಿಯ ನೀರಿನ ಪ್ರಮಾಣ ಹೆಚ್ಚಳವಾಗಲಿದೆ. ರಾಮನಗರದ ನಗರ ಪ್ರದೇಶದಲ್ಲೇ ಐದರಿಂದ ಆರು ಕಿಲೋಮೀಟರ್ ನದಿ ಹರಿಯುತ್ತದೆ. ನದಿ ಪಾತ್ರದಲ್ಲಿ ಜನರು ಎಚ್ಚರಿಕೆ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಮಾರ್ಗ ಬದಲಾವಣೆ

ಮಂಡ್ಯ: ರಾಮನಗರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳಿಗೆ ಮದ್ದೂರಿನಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಅಡಿಗಾಸ್ ಬಳಿ ತಿರುವು ಪಡೆದುಕೊಂಡು ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ತೆರಳಬೇಕು ಎಂದು ಸೂಚಿಸಲಾಗಿದೆ.

Published On - 9:57 am, Tue, 6 September 22