ನಮ್ಮ ಕ್ಲಿನಿಕ್​ನಲ್ಲಿ ಇಲಿ, ಹೆಗ್ಗಣಗಳಿಗೂ ಸಿಗುತ್ತೆ ಔಷಧ! ಅರ್ಧ ಮೂಟೆ ಐವಿ ಫ್ಲೂಯಿಡ್ ಖಾಲಿ ಮಾಡಿದ ಹೆಗ್ಗಣಗಳು

ಬಿಜೆಪಿ ಅಧಿಕಾರದಲ್ಲಿದ್ದಾಗ ಇಂದಿರಾ ಕ್ಯಾಂಟೀನ್ ಬಗ್ಗೆ ಅಸಡ್ಡೆ ತೋರಿತ್ತು ಎಂಬ ಆರೋಪವಿತ್ತು. ಈಗ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಬಡವರಿಗೆಂದು ಆರಂಭಿಸಲಾಗಿರುವ ನಮ್ಮ ಕ್ಲಿನಿಕ್​ಗಳು ಮೂಲೆಗುಂಪಾಗುತ್ತಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಬೆಂಗಳೂರಿನ ನಮ್ಮ ಕ್ಲಿನಿಕ್​ಗಳ ಸ್ಥಿತಿಗತಿ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್ ನಡೆಸಿದ್ದು, ಆಘಾತಕಾರಿ ಅಂಶಗಳು ಬಯಲಾಗಿವೆ.

ನಮ್ಮ ಕ್ಲಿನಿಕ್​ನಲ್ಲಿ ಇಲಿ, ಹೆಗ್ಗಣಗಳಿಗೂ ಸಿಗುತ್ತೆ ಔಷಧ! ಅರ್ಧ ಮೂಟೆ ಐವಿ ಫ್ಲೂಯಿಡ್ ಖಾಲಿ ಮಾಡಿದ ಹೆಗ್ಗಣಗಳು
ನಮ್ಮ ಕ್ಲಿನಿಕ್​
Updated By: ರಾಜೇಶ್ ದುಗ್ಗುಮನೆ

Updated on: Sep 26, 2025 | 8:49 AM

ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನಲ್ಲಿ (Bengaluru) ನಮ್ಮ ಕ್ಲಿನಿಕ್​ಗಳಲ್ಲಿ (Namma Clinic) ಸಮಸ್ಯೆಗಳ ಆಗರವೇ ಇದೆ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದಂತೆಯೇ ‘ಟಿವಿ9’ ಹಲವಡೆ ರಿಯಾಲಿಟಿ ಚೆಕ್ (Tv9 Reality Check) ನಡೆಸಿದೆ. ಈ ವೇಳೆ ಹಲವು ಕಡೆಗಳಲ್ಲಿ ನಮ್ಮ ಕ್ಲಿನಿಕ್​​ಗಳಲ್ಲಿ ಔಷಧಗಳ ಕೊರತೆ, ಸಿಬ್ಬಂದಿಗೆ ವೇತನ ಪಾವತಿ ಆಗದೇ ಇರುವುದು ಸೇರಿ ನಾನಾ ಸಮಸ್ಯೆಗಳು ಗಮನಕ್ಕೆ ಬಂದಿವೆ. ಮತ್ತಿಕೆರೆ ನಮ್ಮ ಕ್ಲಿನಿಕ್​ನಲ್ಲಿ ಇಲಿ ಹಾಗೂ ಹೆಗ್ಗಣಗಳ ಹಾವಳಿ ಕಂಡು ಬಂದಿದ್ದು ಅವ್ಯವಸ್ಥೆಗಳ ಆಗಾರವಾಗಿತ್ತು. ಅರ್ಧ ಮೂಟೆಯಷ್ಟು ಐವಿ ಫ್ಲೂಯಿಡ್, ಆರ್​​​​ಎಲ್​​ಗಳನ್ನು ಇಲಿಗಳು ಹಾಳು ಮಾಡಿರುವುದು ಕಂಡುಬಂದಿದೆ.

ಗಾಂಧಿನಗರ ಕ್ಷೇತ್ರದ ಓಕಳಿಪುರಂನಲ್ಲಿ ಎರಡು ದಿನಗಳ ಹಿಂದಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಮ್ಮ ಕ್ಲಿನಿಕ್​ಗೆ ಚಾಲನೆ ನೀಡಿದ್ದರು. ಅದಾದ ಎರಡು ದಿನಗಳ ಬಳಿಕ ಕ್ಲಿನಿಕ್ ಹೋಗಿ ಪರಿಶೀಲಿಸಿದಾಗ, ಸಮಯಕ್ಕೆ ಸರಿಯಾಗಿ ವೈದ್ಯರೇ ಬರದಿರುವುದು ಗೊತ್ತಾಗಿದೆ. ಕ್ಲಿನಿಕ್ 9 ಗಂಟೆಗೆ ಆರಂಭವಾದರೂ 9:30 ರವರೆಗೆ ವೈದ್ಯರು ಹಾಗೂ ಸಿಬ್ಬಂದಿಯೇ ಬಂದಿಲ್ಲ. ರೋಗಿಗಳು ಕ್ಲಿನಿಕ್​​ಗೆ ಬಂದು ಕಾಯುತ್ತಿದ್ದರೂ ವೈದ್ಯರೇ ಕಂಡು ಬರಲಿಲ್ಲ. ವೈದ್ಯರು, ಸ್ಟಾಫ್ ನರ್ಸ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಇಲ್ಲ ಎನ್ನುವುದು ಒಂದೆಡೆಯಾದರೆ, ಔಷಧ ಕೂಡ ಅಷ್ಟಕಷ್ಟೇ ಲಭ್ಯ ಇರುವುದು ಕಂಡುಬಂತು.

ಮಲ್ಲೇಶ್ವರಂನಲ್ಲಿರುವ ಗಾಯತ್ರಿನಗರದ ನಮ್ಮ ಕ್ಲಿನಿಕ್ ರಿಯಾಲಿಟಿ ಚೆಕ್ ವೇಳೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್​​ಗಳೇ ಇರಲಿಲ್ಲ. ಶೇ 40 ರಷ್ಟು ಔಷಧ ಕೊರತೆಯೂ ಕಂಡುಬಂತು.

ಜೆಪಿ ಪಾರ್ಕ್ 35 ರ ನಮ್ಮ ಕ್ಲಿನಿಕ್​​ನಲ್ಲಿ ಔಷಧಿಗಳೇ ಇರಲಿಲ್ಲ. ಶೇ 40 ರಷ್ಟು ಔಷಧಗಳ ಕೊರತೆ ಇರುವುದನ್ನು ವೈದ್ಯರೇ ಒಪ್ಪಿಕೊಂಡಿದ್ದು, ಮಲೇರಿಯಾ , ಡೆಂಘಿ ಜ್ವರದ ಟೆಸ್ಟ್ ಕಿಟ್ ಇಲ್ಲ. ಬಿಪಿ, ಶುಗರ್​​ಗೆ ಬೇಕಾದ ಔಷಧ ಇಲ್ಲ. ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ ಎಂದು ವೈದ್ಯರೇ ಸಮಸ್ಯೆಗಳ ಬಗ್ಗೆ ಅಲವತ್ತುಕೊಂಡಿದ್ದಾರೆ.

ಲ್ಯಾಬ್ ಟೆಕ್ನೀಷಿಯನ್​ಗಳಿಗೆ ಪಾವತಿಯಾಗ್ತಿಲ್ಲ ವೇತನ!

ನಮ್ಮ ಕ್ಲಿನಿಕ್​ಗಳ ಲ್ಯಾಬ್ ಟೆಕ್ನೀಷಿಯನ್​ಗಳಿಗೆ ಕಳೆದ ಮೂರು ತಿಂಗಳಿನಿಂದ ವೇತನವಾಗಿಲ್ಲ. ಕೆಲವೆಡೆ ಲ್ಯಾಬ್ ಟೆಕ್ನೀಷಿಯನ್​ ಎಂದು ನೇಮಕ ಮಾಡಿ ಲೋವರ್ ಡಿವಿಷನ್ ಕ್ಲರ್ಕ್ ಕೆಲಸ ಮಾಡಿಸುತ್ತಿರುವುದೂ ತಿಳಿದುಬಂದಿದೆ. ನೇಮಕವಾದ ಹುದ್ದೆಯ ಕೆಲಸವೂ ಇಲ್ಲ, ವೇತನವೂ ಕಡಿಮೆ, ಅದೂ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೈಕ್​ ಟ್ಯಾಕ್ಸಿ ನಿರ್ಬಂಧ: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್​ ಅಸಮಾಧಾನ

ಒಟ್ಟಿನಲ್ಲಿ ನಮ್ಮ ಕ್ಲಿನಿಕ್​ಗಳ ಅಭಿವೃದ್ಧಿ ಬಗ್ಗೆ ಆರೋಗ್ಯ ಇಲಾಖೆ ಯಾಕೋ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಸಮರ್ಪಕ ನಿರ್ವಹಣೆ ಕೊರತೆ ‘ಟಿವಿ9’ ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ. ಇನ್ನಾದರೂ ಸರ್ಕಾರ ಕೊಂಚ ಇತ್ತ ಗಮನಹರಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 am, Fri, 26 September 25