ಬೆಂಗಳೂರು: ನಮ್ಮ ಮೆಟ್ರೋ ಇದೇ ಸೋಮವಾರ (ಜೂನ್ 21) ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿದ್ದು, ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸಂಚಾರ ನಡೆಯಲಿದೆ. ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ಮಾತ್ರ ಸಂಚಾರಿಸಲು ಅವಕಾಶವಿದ್ದು, ನಿಲ್ದಾಣಗಳಲ್ಲೂ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಲು ಅವಕಾಶ ನೀಡಲಾಗುತ್ತದೆ. ನಿಲ್ದಾಣದಲ್ಲಿ ಪ್ರಯಾಣಿಕರು ಕೊವಿಡ್ ನಿಯಮಾವಳಿ ಪಾಲಿಸಬೇಕು. ಉಷ್ಣಾಂಶ ಚೆಕ್ ಮಾಡಿಕೊಂಡು, ಹ್ಯಾಂಡ್ ಸ್ಯಾನಿಟೈಜರ್ ಬಳಸಿ ನಿಲ್ದಾಣಕ್ಕೆ ಆಗಮಿಸಬೇಕು. ಮತ್ತು ಪ್ರಯಾಣಿಕರು ಫೇಸ್ ಮಾಸ್ಕ್ ಧರಿಸಿದರೆ ಮಾತ್ರ ನಿಲ್ದಾಣದೊಳಗೆ ಆಗಮಿಸಲು ಅವಕಾಶವಿದೆ. ರೈಲಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ.
2ನೇ ಹಂತದ ಕರ್ನಾಟಕ ಅನ್ಲಾಕ್ ಭಾಗವಾಗಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ನಿರ್ಬಂಧ ಸಡಿಲಿಸಿ ಬೆಳಗ್ಗೆಯಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಮಾತ್ರ ಈ ಸಡಿಲಿಕೆ ಅನ್ವಯವಾಗಲಿದೆ. ಜತೆಗೆ ಈ ಜಿಲ್ಲೆಗಳಲ್ಲಿ ಸೋಮವಾರದಿಂದ (ಜೂನ್ 21) ಸರ್ಕಾರಿ ಬಸ್ಗಳ ಶೇ 50ರ ಅವಕಾಶದೊಂದಿಗೆ ಓಡಾಟಕ್ಕೆ ಅನುಮತಿ ನೀಡಲಾಗಿದ್ದು ಇನ್ನಷ್ಟು ವಿನಾಯಿತಿಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ ಶೇ 5 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ಈ ಸಡಿಲಿಕೆ ಅನ್ವಯ ಆಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಇಂದು ಘೋಷಿಸಿರುವ ನಿಯಮಗಳು ಜುಲೈ 5ರವರೆಗೂ ಮುಂದುವರೆಯಲಿದೆ.
ಎಸಿ ಬಳಸದೇ ಹೋಟೆಲ್‌ಗಳನ್ನೂ ತೆರೆಯಲು ಅವಕಾಶವಿದೆ. ಬಸ್, ಮೆಟ್ರೋಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತದೆ. ಜಿಮ್‌ಗಳಲ್ಲಿ ಶೇ.50ರಷ್ಟು ಜನರಿಗೆ ಅವಕಾಶವಿದೆ. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆಗೆ ಅನುಮತಿ ನೀಡಲಾಗಿದೆ. ಆದರೆ ಇಂದು ಘೋಷಿಸಲಾದ ಈ ಎಲ್ಲ ಸಡಿಲಿಕೆಗಳೂ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆ ಇರುವ 16 ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದೆ.
ಇದನ್ನೂ ಓದಿ: ಕೊವಿಡ್ ನಡುವೆಯೇ ಕರ್ನಾಟಕದಲ್ಲಿ 3,272 ಬಾಲ್ಯವಿವಾಹ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ: ಸಚಿವೆ ಶಶಿಕಲಾ ಜೊಲ್ಲೆ
(Bengaluru Namma Metro will be start from June 21 morning 7 AM due to Karnataka Unlock)