ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗುವವರಿಗೆ ಗುಡ್ ನ್ಯೂಸ್: ರಾತ್ರಿ 2 ಗಂಟೆ ವರೆಗೆ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ

| Updated By: Ganapathi Sharma

Updated on: Dec 31, 2024 | 9:14 AM

ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಮೆಟ್ರೋ ರೈಲು ಮತ್ತು ಬಿಎಂಟಿಸಿ ಬಸ್ ಸೇವೆಗಳನ್ನು ರಾತ್ರಿ 2 ಗಂಟೆವರೆಗೆ ವಿಸ್ತರಿಸಲಾಗಿದೆ. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಮುಂತಾದ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮೆಟ್ರೋದಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮದ್ಯಪಾನ ಮಾಡಿದ ಪ್ರಯಾಣಿಕರಿಗೆ ಮೆಟ್ರೋ ಪ್ರವೇಶ ನಿಷೇಧಿಸಲಾಗಿದೆ ಮತ್ತು ಅಸಭ್ಯ ವರ್ತನೆಗೆ ದಂಡ ವಿಧಿಸಲಾಗುವುದು.

ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗುವವರಿಗೆ ಗುಡ್ ನ್ಯೂಸ್: ರಾತ್ರಿ 2 ಗಂಟೆ ವರೆಗೆ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ
ಬಿಎಂಟಿಸಿ ಬಸ್
Follow us on

ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ಶುರುವಾಗಿದೆ. ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ನಮ್ಮ ಮೆಟ್ರೋ ರೈಲು ಸೇವೆ ತಡರಾತ್ರಿ ಎರಡು ಗಂಟೆವರೆಗೂ ವಿಸ್ತರಿಸಲಾಗಿದ್ದು, ಇದೀಗ ಬಿಎಂಟಿಸಿ ಕೂಡ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ವಿವಿಧ ಭಾಗಗಳಿಂದ ರಾತ್ರಿ ಎರಡು ಗಂಟೆವರೆಗೆ ಹೆಚ್ಚುವರಿ ಬಸ್ಸುಗಳು ಸಂಚಾರ ಮಾಡಲಿವೆ.

ಎಂಜಿ ರಸ್ತೆಯಿಂದ ಹೆಚ್ಚುವರಿ ಬಸ್ ಸೌಲಭ್ಯ

ಎಂಜಿ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಬಸ್​ ಸೌಲಭ್ಯ ಕಲ್ಪಿಸಲಾಗುತ್ತಿದೆ. 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿರುವುದಾಗಿ ಬಿಎಂಟಿಸಿ ತಿಳಿಸಿದೆ. ರಾತ್ರಿ 11 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ.

ಎಲ್ಲಿಗೆಲ್ಲ ಹೆಚ್ಚುವರಿ ಬಸ್?

ಎಂ.ಜಿ.ರಸ್ತೆ, ಬ್ರಿಗೇಡ್​ ರಸ್ತೆ, ಎಲೆಕ್ಟ್ರಾನಿಕ್​ ಸಿಟಿ, ಜಿಗಣಿ, ಸರ್ಜಾಪುರ, ಕೆಂಗೇರಿ, ಜನಪ್ರಿಯ ಟೌನ್​ಶಿಪ್, ನೆಲಮಂಗಲ, ಯಲಹಂಕ ಉಪನಗರ 5ನೇ ಹಂತ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿಗೆ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಲಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್​.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಬನಶಂಕರಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಹೆಬ್ಬಾಳ, ಸೆಂಟ್ರಲ್ ಸಿಲ್ಕ್ ಬೋರ್ಡ್​ನಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ನಮ್ಮ ಮೆಟ್ರೋದಲ್ಲಿ ಕಿರಿಕ್ ಮಾಡಿದರೆ ಹುಷಾರ್

ಈ ಮಧ್ಯೆ, ನಮ್ಮ ಮೆಟ್ರೋ ಕೂಡ ಹೊಸ ವರ್ಷಾಚರಣೆ ಸಂದರ್ಭ ಪ್ರಯಾಣಿಕರ ನಿರ್ವಹಣೆಗೆ ಒಂದಷ್ಟು ತಯಾರಿ ಮಾಡಿಕೊಂಡಿದೆ. ಸಂಭ್ರಮದಲ್ಲಿ ಕುಡಿದು ಹುಚ್ಚಾಟ ಆಡುವವರ ಬಗ್ಗೆಯೂ ಹದ್ದಿನ ಕಣ್ಣಿಡುವ ಮೂಲಕ ಅಂಥವರ ಆಟಾಟೋಪಕ್ಕೆ ಬ್ರೇಕ್ ಹಾಕಲು ಬೇಕಾದ ತಯಾರಿ ಮಾಡಿಕೊಂಡಿದೆ. ಡಿಸೆಂಬರ್ – 31 ರ ರಾತ್ರಿ ಮದ್ಯಪಾನ ಮಾಡಿ ಬರುವ ಪ್ರಯಾಣಿಕರಿಗೆ ಈ ಬಾರಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಎಂಆರ್​ಸಿಎಲ್ ಹೇಳಿದೆ.

ಕುಡಿದು ಬಂದ್ ಕಿರಿಕ್ ಮಾಡಿದರೆ ದಂಡ!

ಕುಡಿದು ಬಂದು ಮಹಿಳೆಯರ ಜೊತೆಗೆ ಕಿರಿಕ್ ಮಾಡಿದರೆ, 500 ರುಪಾಯಿ ದಂಡ ವಿಧಿಸುವುದಾಗಿ ಬಿಎಂಆರ್​ಸಿಎಲ್ ತಿಳಿಸಿದೆ. ಮಹಿಳೆಯರಿಗೆ ತೊಂದರೆ ನೀಡಿದರೆ ಅಂಥವರನ್ನು ಪೋಲಿಸ್ ವಶಕ್ಕೆ ನೀಡಲಾಗುವುದು ಎಂದೂ ತಿಳಿಸಿದೆ. 31 ರ ರಾತ್ರಿ ಮಹಿಳೆಯರ ಸುರಕ್ಷತೆಗಾಗಿ ಪ್ರತಿ ಮೆಟ್ರೋ ಕೋಚ್​​ನಲ್ಲೂ ಮಹಿಳಾ ಸೆಕ್ಯುರಿಟಿ ಮತ್ತು ಪ್ಯಾಟ್ರೋಲ್ ಟೀಮ್ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಹೊಸ ವರ್ಷ ಸ್ವಾಗತಕ್ಕೆ ಎಲ್ಲೆಲ್ಲೂ ಸಜ್ಜು: ಯಾವೆಲ್ಲ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ? ಇಲ್ಲಿದೆ ಮಾಹಿತಿ

ಹೊಸ ವರ್ಷದ ಸಂಭ್ರಮಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದ್ದು, ತಡರಾತ್ರಿ 2 ಗಂಟೆಗೆ ಎಲ್ಲಾ ಟರ್ಮಿನಲ್​​ನಿಂದ ಕೊನೆಯ ರೈಲು ಹೊರಡಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ