Bengaluru News: ಓಲ್ಡ್​ ಏರ್​ಪೋರ್ಟ್​-ವೈಟ್​ಫೀಲ್ಡ್​ ಸಿಗ್ನಲ್ ಫ್ರೀ ಕಾರಿಡಾರ್ ಸಂಚಾರಕ್ಕೆ ಸಿದ್ಧ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 17, 2023 | 1:34 PM

ವೆಲ್ಲಾರ ಜಂಕ್ಷನ್​ನಿಂದ ವೈಟ್​ಫೀಲ್ಡ್​ನ ಹೋಪ್​ಫಾರ್ಮ್​ ಜಂಕ್ಷನ್​ ಅನ್ನು ಇದು ಸಂಪರ್ಕಿಸಲಿದೆ.

Bengaluru News: ಓಲ್ಡ್​ ಏರ್​ಪೋರ್ಟ್​-ವೈಟ್​ಫೀಲ್ಡ್​ ಸಿಗ್ನಲ್ ಫ್ರೀ ಕಾರಿಡಾರ್ ಸಂಚಾರಕ್ಕೆ ಸಿದ್ಧ
ಬೆಂಗಳೂರಿನ ಸುರಂಜನ್ ದಾಸ್ ಜಂಕ್ಷನ್ ಅಂಡರ್​ಪಾಸ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.
Image Credit source: twitter.com/rk_misra
Follow us on

ಬೆಂಗಳೂರು: ಎಚ್​ಎಎಲ್​ ಓಲ್ಡ್​ ಏರ್​ಪೋರ್ಟ್​ ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಬಳಿಯ ಅಂಡರ್​ಪಾಸ್​ ಇದೇ ಮಾಸಾಂತ್ಯಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ. ಬಿಬಿಎಂಪಿಯ (Bruhat Bengaluru Mahanagara Palike – BBMP) ರಸ್ತೆ ವಿಭಾಗವು (Road Infrastructure Department) ಕಳೆದ 7 ವರ್ಷಗಳಿಂದ ಹಲವು ಗಡುವುಗಳನ್ನು ಮೀರಿದ್ದು, ಸಾಧ್ಯವಾದಷ್ಟೂ ಬೇಗ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ. ಈ ಯೋಜನೆಗಾಗಿ ಮುಖ್ಯಮಂತ್ರಿ ನಗರೋತ್ಥಾನ ನಿಧಿಯ ₹ 19.5 ಕೋಟಿ ಬಳಸಲಾಗಿದೆ. ಈ ಯೋಜನೆಯಡಿ ಮೂರು ಸಿಗ್ನಲ್ ಮುಕ್ತ ಕಾರಿಡಾರ್​ಗಳನ್ನು ರೂಪಿಸುವ ಪ್ರಯತ್ನ ನಡೆಯುತ್ತಿದೆ. ವೆಲ್ಲಾರ ಜಂಕ್ಷನ್​ನಿಂದ ವೈಟ್​ಫೀಲ್ಡ್​ನ ಹೋಪ್​ಫಾರ್ಮ್​ ಜಂಕ್ಷನ್​ ಅನ್ನು ಇದು ಸಂಪರ್ಕಿಸಲಿದೆ. ಎಚ್​ಎಎಲ್ ಅಂಡರ್​ಪಾಸ್​ ಹೊರತುಪಡಿಸಿದರೆ, ಈ ಮಾರ್ಗದಲ್ಲಿ ಇನ್ನೂ ಎರಡು (ಕುಂದಲಹಳ್ಳಿ ಮತ್ತು ವಿಂಡ್​ ಟನಲ್ ಜಂಕ್ಷನ್) ಅಂಡರ್​ಪಾಸ್​ಗಳಿವೆ.

ಮಾರತ್​ಹಳ್ಳಿ ಕಡೆಗೆ ತೆರಳುವ ವಾಹನ ಸವಾರರಿಗೆ ಸುರಂಜನ್ ದಾಸ್ ಜಂಕ್ಷನ್ ಒಂದು ವರದಾನವಾಗಿದೆ. ವೈಟ್​ಫೀಲ್ಡ್​ ಮತ್ತು ದೊಮ್ಮಲೂರು ಮಾರ್ಗದಿಂದ ಬರುವ ವಾಹನಗಳು ಸಿಗ್ನಲ್​ಗಾಗಿ ಅಥವಾ ಓಲ್ಡ್​ ಮದ್ರಾಸ್ ರಸ್ತೆಯ ಟ್ರಾಫಿಕ್​ನಿಂದ ಕಾಯಬೇಕಿಲ್ಲ. ಈ ವಾಹನಗಳು ಸುಲಭವಾಗಿ ಎಚ್​​ಎಎಲ್ ಮುಖ್ಯದ್ವಾರದ ಕಡೆಗೆ ತೆರಳಬಹುದಾಗಿದೆ. ಮಾರತ್ತಹಳ್ಳಿಯಿಂದ ಬರುವ ವಾಹನಗಳಿಗೆ ಸುರಂಜನ್ ದಾಸ್ ರಸ್ತೆಗೆ ತೆರಳಲು ಮುಕ್ತ ಬಲ ತಿರುವು (Free Right Turn) ಕಲ್ಪಿಸಲಾಗಿದೆ.

ಜನವರಿ 15ಕ್ಕೆ ಈ ಅಂಡರ್​ಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಘೋಷಿಸಿದ್ದರು. ಆದರೆ ಈ ಗಡುವಿನ ಒಳಗೂ ಸಹ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಾಗಿರಲಿಲ್ಲ. ಕಾಮಗಾರಿ ತಡವಾಗಲು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆದ ಸಮಸ್ಯೆ, ಭಾರೀ ಮಳೆಯಿಂದ ಉಂಟಾದ ಪ್ರವಾಹ, ಅಂಡರ್​​ಪಾಸ್​ಗಳಲ್ಲಿ ಕಟ್ಟಿಕೊಂಡ ಹೂಳು ಮುಖ್ಯ ಕಾರಣ ಎಂದು ಬಿಬಿಎಂಪಿ ಹೇಳಿತ್ತು.

ಬಿಬಿಎಂಪಿ ಇತ್ತೀಚೆಗಷ್ಟೇ ಕುಂದಲಹಳ್ಳಿ ಅಂಡರ್​ಪಾಸ್​ ಸಂಚಾರಕ್ಕೆ ಮುಕ್ತಗೊಳಿಸಿತ್ತು. ಇದೂ ಸಹ ಸಿಗ್ನಲ್ ಫ್ರೀ ಕಾರಿಡಾರ್​ನ ಭಾಗವೇ ಆಗಿದೆ. ವಿಂಡ್ ಟನಲ್ ಜಂಕ್ಷನ್ ಅಂಡರ್​ಪಾಸ್​ ಸಹ ಇನ್ನು ಕೆಲ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನಂತರ ಸಿಗ್ನಲ್ ಫ್ರೀ ಕಾರಿಡಾರ್ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗದಂತೆ ಆಗಲಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಂದಲಹಳ್ಳಿ ಅಂಡರ್​ಪಾಸ್​ ಅನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಸಂಚಾರಕ್ಕೆ ಮುಕ್ತವಾದ ಕೇವಲ 4 ತಿಂಗಳಲ್ಲಿ ಕಾಮಗಾರಿಯ ಲೋಪಗಳು ಬೆಳಕಿಗೆ ಬಂದಿದ್ದರಿಂದ ವಿವಾದವೂ ಉಂಟಾಗಿತ್ತು.

ಇದನ್ನೂ ಓದಿ: ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗೆ ಮುಂದಾದ ಬೆಂಗಳೂರು ಟ್ರಾಫಿಕ್ ಪೊಲೀಸರು

ಮತ್ತಷ್ಟು ಬೆಂಗಳೂರು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Tue, 17 January 23