ಮಾಲ್ ಆಫ್ ಏಷ್ಯಾಗೆ ಜನರ ಪ್ರವೇಶ ನಿರ್ಬಂಧ ಪ್ರಶ್ನಿಸಿ ರಿಟ್ ಅರ್ಜಿ: ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್
ರವಿವಾರ ಡಿಸೆಂಬರ್ 31 ರಿಂದ ಮುಂದಿನ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾವನ್ನು ಬಂದ್ ಮಾಡಲಾಗಿದೆ. ಮಾಲ್ ಆಫ್ ಏಷ್ಯಾ ಬಂದ್ ಮಾಡಿದ್ದನ್ನು ಪ್ರಶ್ನಿಸಿ ಸ್ಪಾರ್ಕಲ್ ಒನ್ ಮಾಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

ಬೆಂಗಳೂರು, ಡಿಸೆಂಬರ್ 31: ಮಾಲ್ ಆಫ್ ಏಷ್ಯಾಗೆ (Mall of Asia) ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸ್ಪಾರ್ಕಲ್ ಒನ್ ಮಾಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್ಗೆ (High Court) ರಿಟ್ ಅರ್ಜಿ ಸಲ್ಲಿಸಿದೆ. ಈ ರಿಟ್ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದೆ. ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾ. ಎಂ.ಜಿ.ಎಸ್. ಕಮಲ್ ಅವರು “ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಹೊಣೆಯಾಗಿದೆ. ಅನುಷ್ಠಾನಯೋಗ್ಯ ಪರಿಹಾರ ಯೋಚಿಸಿದ್ದೀರಾ? ಇಷ್ಟು ದಿನದ ನಂತರ ಮಾಲ್ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕರನ್ನ ಮಾಲ್ಗೆ ನಿರ್ಬಂಧಿಸುವುದು ಪರಿಹಾರವೇ? ಮಾಲ್‌ನಲ್ಲಿ ಯಾವುದೇ ಱಲಿ ನಡೆಯುತ್ತಿಲ್ಲ. ಮಾಲ್‌ನಲ್ಲಿ ಧಾರ್ಮಿಕ ಪ್ರವಚನಗಳು ನಡೆಯುತ್ತಿಲ್ಲ. ಅಕ್ಟೋಬರ್ ತಿಂಗಳಿನಿಂದ ಮಾಲ್ ಕಾರ್ಯಾಚರಣೆ ನಡೆಸುತ್ತಿದೆ. ಸರ್ಕಾರದ ಆದೇಶ ಗೊಂದಲವಾಗಿರಬಾರದು, ಸ್ಪಷ್ಟವಾಗಿರಬೇಕು. ಸರ್ಕಾರ ಮತ್ತು ಮಾಲ್ ಇಬ್ಬರೂ ಸೇರಿ ಸೂಕ್ತ ಪರಿಹಾರ ರೂಪಿಸಿ ಎಂದು ಸೂಚಿಸಿದರು.
ಇದನ್ನೂ ಓದಿ: ಡಿ.31 ರಿಂದ 15 ದಿನ ಮಾಲ್ ಆಫ್ ಏಷ್ಯಾ ಬಾಗಿಲು ಬಂದ್: ಕಾರಣ ಇಲ್ಲಿದೆ
ಸ್ವಯಂಪ್ರೇರಿತವಾಗಿ ಇಂದು ಮಾಲ್ ಮುಚ್ಚಲು ನಿರ್ಧರಿಸಲಾಗಿದೆ. ಮಾಲ್ ಒಳಗೆ ಸಾರ್ವಜನಿಕರ ಪ್ರವೇಶ ಪ್ರತಿಬಂಧಿಸಲಾಗಿಲ್ಲ. ಸಾರ್ವಜನಿಕರ ಪ್ರವೇಶಕ್ಕೆ ನಿಯಂತ್ರಣ ವಿಧಿಸಲಾಗಿದೆ. ಈ ನಿರ್ಬಂಧನೆಯ ವಿಧಾನದ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಮಾಲ್‌ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ನ್ಯಾಯಾಲಯಕ್ಕೆ ತಿಳಿಸಿದರು.
ಎರಡೂ ಕಡೆಯ ವಾದವನ್ನು ಆಲಿಸಿದ ಏಕದಸ್ಯ ಪೀಠ “ಚರ್ಚೆಯ ಫಲಶೃತಿಯನ್ನು ಜನವರಿ 2 ರಂದು ತಿಳಿಸಬೇಕು. ಅಲ್ಲಿಯವರೆಗೆ ಮಾಲ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು” ಎಂದು ಸರ್ಕಾರಕ್ಕೆ ಸೂಚನೆ ನೀಡಿತು.
ಪ್ರತಿಭಟನೆ ವೇಳೆ ಮಾಲ್ ಆಫ್ ಏಷ್ಯಾ ಮೇಲೆ ದಾಳಿ ನಡೆಸಿದ್ದ ಕರವೇ
ಮೊನ್ನೆಯಷ್ಟೇ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ಮಾಲ್ ಆಫ್ ಏಷ್ಯಾ ಮೇಲೆ ದಾಳಿ ನಡೆಸಿ, ನಾಮಪಲಕ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈಗ ಮುಂಜಾಗ್ರತೆ ಹಿನ್ನೆಲೆ ಮುಂದಿನ 15 ನೇ ತಾರೀಖಿನವರೆಗೂ 144 ಸೆಕ್ಷನ್ ಜಾರಿ ಮಾಡಿ ಆದೇಶಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:05 pm, Sun, 31 December 23