Bengaluru: ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನಾಪ್ ಕೇಸ್​; ಪೊಲೀಸಪ್ಪ ಸೇರಿ 8 ಮಂದಿ ಅರೆಸ್ಟ್​​

ಕೋರಮಂಗಲದಲ್ಲಿ ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳ ಅಪಹರಣ ಪ್ರಕರಣದಲ್ಲಿ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಮ್ಯಾನೇಜರ್ ಖಾತೆಯಿಂದ 18 ಲಕ್ಷ ಹಣ ವರ್ಗಾಯಿಸಿಕೊಂಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಉದ್ಯೋಗಿಗಳನ್ನು ರಕ್ಷಿಸಿದ್ದಾರೆ.

Bengaluru: ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನಾಪ್ ಕೇಸ್​; ಪೊಲೀಸಪ್ಪ ಸೇರಿ 8 ಮಂದಿ ಅರೆಸ್ಟ್​​
8 ಮಂದಿ ಆರೋಪಿಗಳ ಬಂಧನ

Updated on: Nov 23, 2025 | 8:01 AM

ಬೆಂಗಳೂರು, ನವೆಂಬರ್​ 23: ಕಾಲ್ ಸೆಂಟರ್ ಉದ್ಯೋಗಿಗಳನ್ನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಪ್ರಕರಣ ಸಂಬಂಧ ಘಟನೆ ನಡೆದು 12 ಗಂಟೆ ಒಳಗೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಛಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಭಿವುಲ್ಲ ಸೇರಿದಂತೆ 8 ಜನರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದು, ಆ ಪೈಕಿ ಛಲಪತಿ ಕೋಲಾರ ಜಿಲ್ಲೆಯ ಹೆಡ್ ಕಾನ್ಸ್ ಟೇಬಲ್ ಎಂಬುದು ಗೊತ್ತಾಗಿದೆ. ಕೋರಮಂಗಲದಲ್ಲಿರೋ ಗ್ಲೋಬಲ್ ಕನೆಕ್ಟ್​​ ಟೆಲಿಕಾಂ ಪ್ರೈ.ಲಿಯ ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳನ್ನು ಆರೋಪಿಗಳು ಕಿಡ್ನಾಪ್​ ಮಾಡಿದ್ದರು.

25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್​​

 

ಇದನ್ನೂ ಓದಿ: ಬೆಂಗಳೂರು ದರೋಡೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲ ಆರೋಪಿಗಳ ಬಂಧನ; ಈವರೆಗೂ ವಶಕ್ಕೆ ಪಡೆದ ಹಣವೆಷ್ಟು?

ಮಧ್ಯರಾತ್ರಿ ಕಾಲ್ ಸೆಂಟರ್ ಬಳಿ ಹೋಗಿದ್ದ ಆರೋಪಿಗಳು, ನಾಲ್ವರನ್ನ ಕರೆದು ನಾವು ಪೊಲೀಸರು ಎಂದು ಬೆದರಿಸಿದ್ದರು. ಬಳಿಕ ಪವನ್, ರಾಜ್ ವೀರ್, ಆಕಾಶ್, ಅನಸ್ ಎಂಬವರನ್ನು ಅಪಹರಣ ಮಾಡಿ 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಾಗೆ ಆಪರೇಷನ್ ಮ್ಯಾನೇಜರ್ ಅಕೌಂಟ್​​ನಿಂದ 18 ಲಕ್ಷ ರೂ. ವರ್ಗಾವಣೆ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ. ವಿಷಯವನ್ನು ಬಿಪಿಒ ಸಿಬ್ಬಂದಿ ಮುಂಜಾನೆ 4 ಗಂಟೆಗೆ ಪೊಲೀಸರಿಗೆ ತಿಳಿಸಿದ್ದು, ತಕ್ಷಣವೇ ಆರೋಪಿಗಳ ಬೇಟೆಗೆ ಪೊಲೀಸರು ಮುಂದಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಆರೋಪಿಗಳಿದ್ದ ಜಾಗ ಪತ್ತೆ ಮಾಡಿರುವ ಖಾಕಿ, ಹೊಸಕೋಟೆಯ ಲಾಡ್ಜ್ ನಲ್ಲಿ ಆರೋಪಿಗಳು ಕೂಡಿ ಹಾಕಿದ್ದ ನಾಲ್ವರನ್ನು ರಕ್ಷಿಸಿದೆ. ಪ್ರಕರಣ ಸಂಬಂಧ 8 ಜನರ ಬಂಧನದ ಜೊತೆಗೆ 2 ಕಾರ್​​ ಸೀಜ್​ ಮಾಡಿದೆ. ಇತ್ತಿಚೆಗೆ ನಡೆದಿದ್ದ ಕಾಲ್ ಸೆಂಟರ್ ರೇಡ್ ಕೇಸ್ ಬಂಡವಾಳ ಮಾಡಿಕೊಂಡು ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಬಂಧಿತ ಎಲ್ಲ ಆರೋಪಿಗಳು 27-30 ವರ್ಷದ ಒಳಗಿನ ಯುವಕರು ಎಂಬುದು ಗೊತ್ತಾಗಿದೆ.

ವರದಿ- ಪ್ರದೀಪ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Sun, 23 November 25