ಬೆಂಗಳೂರಿನಲ್ಲಿ ವಿಳಂಬ ಕಾಮಗಾರಿಗಳಿಂದ ಅವಾಂತರ: ಸರ್ಕಾರಕ್ಕೆ ಹೋಟೆಲ್ ಉದ್ಯಮಿಗಳಿಂದ ಪತ್ರ, 50% ತೆರಿಗೆ ವಿನಾಯಿತಿಗೆ ಆಗ್ರಹ

ಬೆಂಗಳೂರು ಮಹಾನಗರದಲ್ಲಿ ವಿಳಂಬಗತಿಯ ರಸ್ತೆ ಕಾಮಗಾರಿಗಳಿಂದ ಹೋಟೆಲ್, ರೆಸ್ಟೋರೆಂಟ್ ಸೇರಿ ಹಲವು ಉದ್ಯಮಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಶೇಕಡ 50 ರಷ್ಟು ವ್ಯಾಪಾರ ಕುಸಿತವಾಗಿದೆ ಅಂತ ಹೋಟೆಲ್​ಗಳ ಸಂಘ ಸರ್ಕಾರಕ್ಕೆ ಪತ್ರ ಬರೆದಿದ್ದು, 50 ರಷ್ಟು ತೆರಿಗೆ ರಿಯಾಯಿತಿ ನೀಡುವಂತೆ ಆಗ್ರಹಿಸಿವೆ.

ಬೆಂಗಳೂರಿನಲ್ಲಿ ವಿಳಂಬ ಕಾಮಗಾರಿಗಳಿಂದ ಅವಾಂತರ: ಸರ್ಕಾರಕ್ಕೆ ಹೋಟೆಲ್ ಉದ್ಯಮಿಗಳಿಂದ ಪತ್ರ, 50% ತೆರಿಗೆ  ವಿನಾಯಿತಿಗೆ ಆಗ್ರಹ
Potholes

Updated on: Aug 23, 2025 | 9:44 AM

ಬೆಂಗಳೂರು, ಆಗಸ್ಟ್​ 23: ಮಹಾನಗರದ ಮಹಾ ಗುಂಡಿಗಳಿಗೆ (Potholes) ಜನಸಾಮಾನ್ಯರು ಹಾಗೂ ವಾಹನ ಹೈರಾಣಾಗಿದ್ದು, ವಿಳಂಬಗತಿಯ ರಸ್ತೆ ಕಾಮಗಾರಿಗಳಿಗೂ ಬೇಸತ್ತು ಹೋಗಿದ್ದಾರೆ. ಇನ್ನು ಇದರ ಎಫೆಕ್ಟ್ ಹೋಟೆಲ್, ರೆಸ್ಟೋರೆಂಟ್ ಸೇರಿ ಹಲವು ಉದ್ಯಮಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಎಲ್ಲಾ ರೀತಿಯ ತೆರಿಗೆಯಲ್ಲಿ (TAX) 50% ವಿನಾಯಿತಿಗೆ ಸರ್ಕಾರಕ್ಕೆ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ.

ಬಿಬಿಎಂಪಿ ವಿರುದ್ಧ ಉದ್ಯಮಿಗಳು ಅಸಮಾಧಾನ

ನಗರದ ಹಲವಾರು ಪ್ರಮುಖ ರಸ್ತೆಗಳನ್ನು ಹಿಗ್ಗಾಮುಗ್ಗಾ ಅಗೆಯಲಾಗಿದ್ದು, ಅವಾಂತರಗಳನ್ನು ಬಿಬಿಎಂಪಿ ಸೃಷ್ಟಿ ಮಾಡಿದೆ. ಮೂರು ತಿಂಗಳಲ್ಲಿ ಮುಗಿಯಬೇಕಾದ ರಸ್ತೆ ಕಾಮಗಾರಿಗಳು ವರ್ಷಗಳೇ ಕಳೆದರೂ ಪೂರ್ತಿಯಾಗುತ್ತಿಲ್ಲ. ಇನ್ನು ಗುಂಡಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು, ಜನಸಾಮಾನ್ಯರು ಹಾಗೂ ವಾಹನ ಸವಾರರು ಬಿಬಿಎಂಪಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಮುಂದುವರೆದ ಭಾಗವಾಗಿ ಹೋಟೆಲ್, ರೆಸ್ಟೋರೆಂಟ್ ಮುಂತಾದ ಉದ್ಯಮಿಗಳು ಕೂಡ ಬಿಬಿಎಂಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಶೇಕಡ 50 ರಷ್ಟು ವ್ಯಾಪಾರ ಕುಸಿತ: ಸರ್ಕಾರಕ್ಕೆ ಪತ್ರ

ಬೆಂಗಳೂರು ನಗರದಲ್ಲಿ ರಸ್ತೆ ದುರಸ್ಥಿ ಕೆಲಸ ನಿಗದಿತ ಸಮಯಕ್ಕೆ ಮುಗಿಯುತ್ತಿಲ್ಲ. ಮೂರು ತಿಂಗಳಿನೊಳಗಡೆ ಆಗಬೇಕಾದ ಕೆಲಸಗಳು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಂಡರೂ ಇನ್ನೂ ಸಂಪೂರ್ಣಗೊಂಡಿರುವುದಿಲ್ಲ. ಇದರಿಂದ ಬಹಳಷ್ಟು ಕೆಲಸ ನಡೆಯುತ್ತಿರುವ ಪ್ರದೇಶಗಳಲ್ಲಿ ಇರುವಂತಹ ಎಲ್ಲ ಹೊಟೇಲು, ಬೇಕರಿ, ಸ್ವೀಟ್ಸ್ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಮತ್ತು ಇನ್ನಿತರ ಅಂಗಡಿಗಳಿಗೆ ಅಂದಾಜು ಶೇಕಡ 50 ರಷ್ಟು ವ್ಯಾಪಾರ ಕುಸಿತವಾಗಿದೆ ಅಂತ ಹೋಟೆಲ್​ಗಳ ಸಂಘ ಸರ್ಕಾರಕ್ಕೆ ಪತ್ರ ಬರೆದಿದೆ. ಹೀಗಾಗಿ ಆಸ್ತಿ ತೆರಿಗೆ, ಕಸದ ತೆರಿಗೆ, ವಿದ್ಯುತ್ ಠೇವಣಿ ಶುಲ್ಕ, ಅಬಕಾರಿ ಸೇರಿ ಎಲ್ಲ ಲೈಸೆನ್ಸ್ ಶುಲ್ಕಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ನೀಡಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿವೆ.

ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿಗಳ ಮುಚ್ಚಲು ಇಕೋಫಿಕ್ಸ್ ಪ್ರಯೋಗಕ್ಕೆ ಬಿಬಿಎಂಪಿ ಚಿಂತನೆ: ಏನಿದು ತಂತ್ರಜ್ಞಾನ?

ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ರಸ್ತೆ ಕಾಮಗಾರಿಗಳು ನಿಗದಿತ ಕಾಲಮಿತಿಯಲ್ಲಿ ಮುಗಿಯದೆ ಸಾರ್ವಜನಿಕರು, ವಾಹನ ಸವಾರರು ಮಾತ್ರವಲ್ಲದೆ ಹಲವು ಉದ್ಯಮಿಗಳಿಗೂ ಹೊಡೆತ ತಂದೊಡ್ಡಿದೆ. ಹೀಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಿಗಳು ಸರ್ಕಾರದ ಮುಂದೆ ಅಲವತ್ತು ಕೊಂಡಿದ್ದಾರೆ.

ಇದನ್ನೂ ಓದಿ: Viral: ರಸ್ತೆ ಕಾಮಗಾರಿ ವಿಳಂಬ, ಟ್ರಾಫಿಕ್ ಜಾಮ್ ಹೆಚ್ಚಳ, ಶಾಲೆಗೆ ಹೋಗಲು ಬೆಂಗಳೂರಿನ ಶಾಲಾ ಮಕ್ಕಳ ಪರದಾಟ

ಸರ್ಕಾರ ಇನ್ನಾದರೂ ಕಾಮಗಾರಿಗಳನ್ನು ಬೇಗ ಮುಗಿಸಿ ಕೊಡುವತ್ತ ಗಮನ ಕೊಡುತ್ತಾ ಅಥವಾ ಉದ್ಯಮಿಗಳ ತೆರಿಗೆ ವಿನಾಯಿತಿ ಬೇಡಿಕೆಗೆ ಸ್ಪಂದಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.