
ಬೆಂಗಳೂರು, ನವೆಂಬರ್ 26: ಕೈದಿಗಳ ಮನಃಪರಿವರ್ತನೆಯ ಕೇಂದ್ರವಾಗಬೆಕಿದ್ದ ಪರಪ್ಪನ ಅಗ್ರಹಾರ ಜೈಲು ಅಪರಾಧಿಗಳ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ. ಜೈಲಲ್ಲೇ ಹುಟ್ಟುಹಬ್ಬ ಆಚರಣೆ, ಗುಂಡು-ತುಂಡಿನ ಪಾರ್ಟಿಯ ಜೊತೆಗೆ ಉಗ್ರರ ಕೈನಲ್ಲೂ ಮೊಬೈಲ್ ಇರುವ ಸಾಕಷ್ಟು ವಿಡಿಯೋಗಳು ಈಗಾಗಲೇ ಹೊರ ಬಂದಿವೆ. ಈ ವಿಡಿಯೋಗಳನ್ನ ವೈರಲ್ ಮಾಡಿದ್ದು ಯಾರೆಂಬ ಬಗ್ಗೆ ತನಿಖೆಯೂ ನಡೆಯುತ್ತಿದೆ. ಇದೆಲ್ಲದರ ನಡುವೆ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಪರಪ್ಪನ ಅಗರಹಾರ ನಿಜಕ್ಕೂ ಜೈಲಾ ಅಥವಾ ಮದ್ಯದ ಫ್ಯಾಕ್ಟರಿಯಾ ಎಂಬ ಅನುಮಾನ ಮೂಡಿಸಿದೆ.
ಪರಪ್ಪನ ಅಗ್ರಹಾರದಲ್ಲಿ ಅಪರಾಧಿಗಳನ್ನ ಶಿಕ್ಷಿಸಲಾಗುತ್ತೆ ಎಂದೇನಾದರೂ ನೀವು ಅಂದುಕೊಂಡಿದ್ದರೆ ಅದು ಅಕ್ಷರಶಃ ಸುಳ್ಳು. ಇಲ್ಲಿ ಕ್ರಿಮಿನಲ್ ಗಳು ತಮ್ಮದೇ ಲೋಕದಲ್ಲಿ ಎಣ್ಣೆ ಕಿಕ್ಕೇರಿಸಿಕೊಂಡು ಎಂಜಾಯ್ ಮಾಡ್ತಿದ್ದಾರೆ. ಇತ್ತಿಚೇಗೆ ವೈರಲ್ ಆದ ಎಣ್ಣೆ ಪಾರ್ಟಿಯ ವಿಡಿಯೋನೇ ಇದಕ್ಕೆ ನೈಜ ನಿದರ್ಶನ. ಇನ್ನು ಟಿವಿ9ನಲ್ಲಿ ವೈರಲ್ ವಿಡಿಯೋ ಸಮೇತ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಈ ವೇಳೆ ಕೈದಿಗಳು ಜೈಲಲ್ಲೇ ಎಣ್ಣೆ ತಯಾರಿಸಿಕೊಂಡು ನಶೆ ಏರಸಿಕೊಳ್ಳುತ್ತಾರೆ ಎಂಬ ಆಘಾತಕಾರಿ ವಿಷಯ ಬಯಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ: 7 ತಿಂಗಳಾದ್ರೂ ಕಿಕ್ ಕೊಡದ ಎಣ್ಣೆ, ಕಾರಣವೇನು?
ಪರಪ್ಪನ ಅಗ್ರಹಾರ ಜೈಲಿನ 7ನೇ ಬ್ಯಾರಕ್ನಲ್ಲಿ ಡಿಸೆಂಬರ್ 31ರಂದು ನಡೆದಿದೆ ಎನ್ನಲಾದ ಎಣ್ಣೆ ಪಾರ್ಟಿಯ ತನಿಖೆಗೆ ಇಳಿದಿದ್ದ ಪೊಲೀಸರಿಗೆ ಹೊರಗಿನಿಂದ ಮದ್ಯ ಸರಬರಾಜು ಆಗಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಜೈಲಿನ ಒಳಗಡೆಯೇ ಮದ್ಯ ತಯಾರಿಸಲಾಗ್ತಿದ್ಯಾ ಎಂಬ ಅನುಮಾನದಿಂದ ತನಿಖೆಗೆ ಇಳಿದಾಗ ಶಾಕ್ ಎದುರಾಗಿದೆ. ಕಳ್ಳಬಟ್ಟಿ ಕೇಸ್ನಲ್ಲಿ ಜೈಲು ಸೇರಿರೋ ಆರೋಪಿಗಳು ಜೈಲಲ್ಲಿ ಸಿಗುವ ಐಟಂಗಳನ್ನೇ ಬಳಸಿ ಮದ್ಯ ತಯಾರಿಸುತ್ತಿದ್ದು, ಜೈಲಿನಲ್ಲೇ ಲಿಕ್ಕರ್ ತಯಾರಿಕೆಗೆ ಎರಡು ಟೀಂ ಇರೋದು ಗೊತ್ತಾಗಿದೆ. ಒಂದು ಟೀಂ ಜೈಲಿನ ಬ್ಯಾರಕ್ನಲ್ಲಿ ಕೊಳೆತ ಸೇಬು, ದ್ರಾಕ್ಷಿ, ಸೇರಿದಂತೆ ರಾಶಿ ರಾಶಿ ಹಣ್ಣುಗಳು,ಚಕ್ಕೆ, ಗೋಧಿ,ಸಕ್ಕರೆ ಸಂಗ್ರಹ ಮಾಡ್ತಿತ್ತು. ಮತ್ತೊಂದು ಟೀಂ ಜೈಲಿನ ಬೇಕರಿಯಲ್ಲಿ ಬಳಸುವ ಈಸ್ಟ್ ತೆಗೆದುಕೊಂಡು ಬರ್ತಿತ್ತು. ಈ ಎರಡು ಟೀಂ ತಂದ ಐಟಂಗಳನ್ನ ಮಿಕ್ಸ್ ಮಾಡಿ ಪಾತ್ರೆಯಲ್ಲಿ ಹಾಕಿ ಜೈಲಿನ ಮೂಲೆಯಲ್ಲಿ ತಿಂಗಳುಗಟ್ಟಲೆ ಇಟ್ಟು ಎಣ್ಣೆ ತಯಾರು ಮಾಡಲಾಗ್ತಿತ್ತು. ಪಾರ್ಟಿ ಮಾಡಬೇಕು ಅಂದಾಗ ಪಾತ್ರೆಲಿದ್ದ ಐಟಂನ ಚೆನ್ನಾಗಿ ಹಿಂಡಿ ವಾಟರ್ ಬಾಟಲ್ಗೆ ತುಂಬಿಸಲಾಗ್ತಿತ್ತು. ಈ ಬಗ್ಗೆ ವಿಷಯ ಗೊತ್ತಿದ್ದರೂ ಕೈದಿಗಳಿಂದ ಹಣ ಪಡೆದು ಜೈಲಾಧಿಕಾರಿಗಲು ಸೈಲೆಂಟ್ ಆಗಿದ್ರಾ ಎಂಬ ಅನುಮಾನ ತನಿಖಾಧಿಕಾರಿಗಳನ್ನ ಕಾಡಿದೆ.
ಎಣ್ಣೆ ಪಾರ್ಟಿ ಬಗ್ಗೆ ತನಿಖೆಗೆ ಮುಂದಾದಾಗ ಡಿಸೆಂಬರ್ 31ರಂದು ನಡೆದಿದ್ದ ಪಾರ್ಟಿಗೂ ಇದೇ ರೀತಿ ಎಣ್ಣೆ ತಯಾರಿಸಿರೋದು ಗೊತ್ತಾಗಿದೆ. ಜೈಲಿನಲ್ಲಿ ಮದ್ಯ ತಯಾರಿಸಿದ್ದಲ್ಲದೆ ಪಾರ್ಟಿಯ ವಿಡಿಯೋವನ್ನು ಕೈದಿಗಳು ಮಾಡುತ್ತಿದ್ದ ಹಿಂದೆಯೂ ಪ್ರಮುಖ 3 ಕಾರಣಗಳಿವೆ ಎನ್ನಲಾಗಿದೆ.
ಕಾರಣ 1: ಕೈದಿಗಳು ತಮ್ಮ ಮನೆಯವರಿಗೆ ವಿಡಿಯೋ ಕಳಿಸಿ ಜೈಲಿನಲ್ಲಿ ನಾವು ಚೆನ್ನಾಗಿದ್ದೀವಿ ಅಂತ ತೋರಿಸಿಕೊಳ್ಳುವುದು.
ಕಾರಣ 2: ತಮ್ಮ ಹುಡುಗರಿಗೆ ವಿಡಿಯೋ ಕಳಿಸಿ ಬಿಲ್ಡಪ್ ತೆಗೆದುಕೊಳ್ಳುವುದು, ಹಪ್ತಾ ವಸೂಲಿ ಮಾಡೋದು.
ಕಾರಣ 3: ಜೈಲಿನಲ್ಲಿ ಅಧಿಕಾರಿಗಳಿಗೆ ವಿಡಿಯೋ ತೋರಿಸಿ ಬ್ಲ್ಯಾಕ್ಮೇಲ್ ಮಾಡಿ ಬೇಕಾದರೀತಿಯಲ್ಲಿ ಜೈಲಿನಲ್ಲಿ ಆಟ ಆಡೋದು.
ದಯಾನಂದರಂತಹ ದಕ್ಷ ಅಧಿಕಾರಿ ಬಂಧೀಖಾನೆ ಮತ್ತು ಸುಧಾರಣಾ ಇಲಾಖೆ ಎಡಿಜಿಪಿಯಾಗಿದ್ದರೂ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ಬಗ್ಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದ್ದರೂ ಪರಪ್ಪನ ಅಗ್ರಹಾರದ ಈ ಅಕ್ರಮ ದಂಧೆಗಳಿಗೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ. ಜೈಲಲ್ಲೇ ಕೈದಿಗಳು ಮದ್ಯದ ಫ್ಯಾಕ್ಟರಿ ಓಪನ್ ಮಾಡಿರೋದು ನಿಜಕ್ಕೂ ತಲೆ ತಗ್ಗಿಸುವ ಸಂಗತಿಯಾಗಿದ್ದು, ಇಂತಹ ಘಟನೆಗಳಿಗೆ ಶಿಘ್ರ ಬ್ರೇಕ್ ಬೀಳಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:29 pm, Wed, 26 November 25