ಫುಲ್ ಮಾರ್ಕ್ಸ್ ಕೊಡ್ತೇನೆ, ಸಹಕರಿಸು: ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿ ಲೈಂಗಿಕ ಕಿರುಕುಳ ನೀಡಿದ ಬೆಂಗಳೂರು ಖಾಸಗಿ ಕಾಲೇಜು ಎಚ್‌ಒಡಿ
‘ನಿನಗೆ ಹಾಜರಾತಿ ಕಡಿಮೆ ಇದೆ. ನನ್ನೊಂದಿಗೆ ಸಹಕರಿಸು, ನಾನು ಹೇಳಿದಂತೆ ಮಾಡು. ಫುಲ್ ಮಾರ್ಕ್ಸ್ ಕೊಡುತ್ತೇನೆ’. ಬೆಂಗಳೂರಿನ ಖಾಸಗಿ ಕಾಲೇಜಿನ ಎಚ್ಒಡಿಯೊಬ್ಬರು ವಿದ್ಯಾರ್ಥಿನಿಯನ್ನು ಊಟಕ್ಕೆಂದು ಮನೆಗೆ ಕರೆಸಿಕೊಂಡು, ಆಡಿದ ಮಾತುಗಳಿವು. ಸದ್ಯ, ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಎಚ್‌ಒಡಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಅಕ್ಟೋಬರ್ 8: ಬೆಂಗಳೂರಿನ (Bengaluru) ಖಾಸಗಿ ಕಾಲೇಜಿನ ವಿಭಾಗದ ಮುಖ್ಯಸ್ಥರೊಬ್ಬರು (ಎಚ್‌ಒಡಿ) ವಿದ್ಯಾರ್ಥಿನಿಯನ್ನು ಊಟದ ನೆಪದಲ್ಲಿ ಮನೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತೆ ತಿಲಕ್‌ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ, ಆರೋಪಿ ಸಂಜೀವ್ ಕುಮಾರ್ ಮಂಡಲ್ ವಿರುದ್ಧ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಗೆ ಕಡಿಮೆ ಹಾಜರಾತಿ ಇದ್ದುದನ್ನೇ ಮುಂದಿಟ್ಟುಕೊಂಡು, ಪೂರ್ಣ ಅಂಕ ನೀಡುವ ಆಮಿಷವೊಡ್ಡಿ ಉಪನ್ಯಾಸಕರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮನೆಗೆ ಊಟಕ್ಕೆ ಕರೆದ ಎಚ್‌ಒಡಿ ಆಮೇಲೆ ಮಾಡಿದ್ದೇ ಬೇರೆ!
ಆರೋಪಿ ಸಂಜೀವ್ ಕುಮಾರ್ ಮಂಡಲ್ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಬಿಸಿಎ) ವಿದ್ಯಾರ್ಥಿನಿಯನ್ನು ಅಕ್ಟೋಬರ್ 2 ರಂದು ತನ್ನ ಮನೆಗೆ ಕರೆಸಿಕೊಂಡಿದ್ದಾರೆ. ತನ್ನ ಕುಟುಂಬದೊಂದಿಗೆ ಜತೆಯಾಗಿ ಊಟ ಮಾಡೋಣ ಎಂದು ವಿದ್ಯಾರ್ಥಿನಿಯನ್ನು ಕರೆಸಿಕೊಂಡಿದ್ದಾರೆ. ಆದರೆ, ವಿದ್ಯಾರ್ಥಿನಿ ಅವರ ಮನೆಗೆ ತೆರಳಿದಾಗ ಮೊಂಡಲ್ ಒಬ್ಬಂಟಿಯಾಗಿ ಮನೆಯಲ್ಲಿದ್ದರು. ಆ ಬಳಿಕ ಅವರು ವಿದ್ಯಾರ್ಥಿನಿಗೆ ಉಟ ನೀಡಿದ್ದಾರೆ. ಆದರೆ, ಮೊಂಡಲ್ ಒಬ್ಬರೇ ಇದ್ದುದರಿಂದ ಇರಿಸುಮುರಿಸಿಗೆ ಒಳಗಾದ ವಿದ್ಯಾರ್ಥಿನಿ ತಾನು ಹೊರಡುವುದಾಗಿ ಹೇಳಿದ್ದಾಳೆ.
ಫುಲ್ ಮಾರ್ಕ್ಸ್ ಕೊಡುತ್ತೇನೆ ಎಂದು ಅನುಚಿತ ವರ್ತನೆ
ವಿದ್ಯಾರ್ಥಿನಿ ಹೊರಡಲು ಅನುವಾಗುತ್ತಿದ್ದಂತೆಯೇ ಎಚ್‌ಒಡಿ, ನಿನಗೆ ಹಾಜರಾತಿ ಕಡಿಮೆ ಇದೆ. ನನ್ನೊಂದಿಗೆ ಸಹಕರಿಸು, ಪೂರ್ಣ ಅಂಕಗಳನ್ನು ಕೊಡಿಸಲು ಸಹಾಯ ಮಾಡುತ್ತೇನೆ ಎಂದಿದ್ದಾರೆ. ಅಷ್ಟರಲ್ಲಿ ಸ್ನೇಹಿತೆಯಿಂದ ಫೋನ್ ಕರೆ ಬಂದಿದ್ದು, ತುರ್ತಾಗಿ ಹೋಗಬೇಕಿದೆ ಎಂದು ಎಚ್‌ಒಡಿ ಮನೆಯಿಂದ ಹೇಗೋ ತಪ್ಪಿಸಿಕೊಂಡು ಬಂದೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆನ್ಲೈನ್ ಹೂಡಿಕೆ ಹೆಸರಿನಲ್ಲಿ ಭಾರಿ ವಂಚನೆ, ಬೃಹತ್ ಜಾಲ ಭೇದಿಸಿದ ಕೆಂಗೇರಿ ಪೊಲೀಸರು, 8 ಮಂದಿಯ ಬಂಧನ
ಎಚ್‌ಒಡಿ ಮನೆಯಿಂದ ತನ್ನ ಮನೆಗೆ ತೆರಳಿದ ವಿದ್ಯಾರ್ಥಿನಿ ಪೋಷಕರಿಗೆ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಅವರು ಕಾಲೇಜು ಆಡಳಿತ ಮಂಡಳಿಯನ್ನು ಸಂಪರ್ಕಿಸಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ, ವಿದ್ಯಾರ್ಥಿನಿಯ ದೂರಿನ ಮೇರೆಗೆ ತಿಲಕ್‌ನಗರ ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 am, Wed, 8 October 25




