ಖಾಸಗಿ ಶಾಲೆಗಳ ಶುಲ್ಕ ಮತ್ತೆ ಏರಿಕೆ; ಶುಲ್ಕ ನಿಯಂತ್ರಣ ಕಾನೂನು ಬರಬೇಕು ಎಂದ ಪೋಷಕರು
ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವುದನ್ನ ಕೂಡ ಲೆಕ್ಕಿಸದೇ ಬೇಕಾ ಬಿಟ್ಟಿಯಾಗಿ ಮನಸ್ಸಿಗೆ ಬಂದಂತೆ ಶುಲ್ಕ ಹೆಚ್ಚಳ ಮಾಡುತ್ತಿವೆ. ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಳ ಮಾಡುತ್ತಿರೋದು ಪೋಷಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಪರದಾಡುವ ಸ್ಥಿತಿ ಎದುರಗಿದೆ.
ಬೆಂಗಳೂರು, ಮೇ.18: ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮಧ್ಯೆ ಶಾಲಾ ಶುಲ್ಕದ (School Fees) ಹೊರೆಯ ಬರೆಯೂ ಈಗ ಪೋಷಕರಿಗೆ ತಟ್ಟಲಿದೆ. ಖಾಸಗಿ ಶಾಲಾ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಅಂಕುಶವೂ ಇಲ್ಲದಿರೋದ್ರಿಂದ ಖಾಸಗಿ ಶಾಲೆಗಳು ಬೇಕಾಬಿಟ್ಟಿ ಶುಲ್ಕಗಳನ್ನ ಏರಿಕೆ ಮಾಡುತ್ತಿರೋದು ಪೋಷಕರಿಗೆ ಕಂಗೆಡಿಸಿದೆ. ಇತ್ತ ಶುಲ್ಕವನ್ನ ಕಟ್ಟೋಕೂ ಆಗದೇ, ಬಿಡೋಕೂ ಆಗದೇ ಪರದಾಡುವಂತಾಗಿದೆ. ಅಷ್ಟಕ್ಕೂ ಖಾಸಗಿ ಶಾಲೆಗಳು ಹೆಚ್ಚಳ ಮಾಡ್ತಿರೋ ಪ್ರಮಾಣ ಎಷ್ಟು ಅಂತೀರಾ ಈ ಲೇಖನ ಓದಿ.
ಪ್ರತಿ ವರ್ಷ ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸುವಾಗಲು ಪಾಲಕರು ವಿದ್ಯಾರ್ಥಿಗಳ ಶಾಲಾ ಶುಲ್ಕದ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಶುಲ್ಕದಲ್ಲಿ ಏರಿಕೆಯಾಗುತ್ತಲೇ ಇರುತ್ತದೆ ಅದೇ ರೀತಿ ಈ ವರ್ಷವೂ ಪಾಲಕರಿಗೆ ಶುಲ್ಕ ಏರಿಕೆಯ ಬಿಸಿ ತಗುಲಲಿದೆ ಎಂಬ ಸೂಚನೆ ಸಿಕ್ಕಿದೆ. ಖಾಸಗಿ ಶಾಲೆಗಳು 2023-24ನೇ ಸಾಲಿನಿಂದ ಶುಲ್ಕವನ್ನು ಹೆಚ್ಚಳ ಮಾಡುತ್ತಿವೆ. ಹಿಂದಿನ ವರ್ಷಕ್ಕಿಂತ ಈ ವರ್ಷ 30 ರಿಂದ 40 ಪ್ರತಿಶತ ಶುಲ್ಕ ಹೆಚ್ಚಳ ಮಾಡಿದ ಕುರಿತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಶುಲ್ಕ ಹೆಚ್ಚಳ ಮಾಡಿರುವುದು ಅಸಂವಿಧಾನಿಕ ಶುಲ್ಕ ಹೆಚ್ಚಳ ಮಾಡಬೇಕಾದರೆ ವೈಜ್ಞಾನಿಕ ಕಾರಣ ಕೊಟ್ಟು ಶಿಕ್ಷಣ ಇಲಾಖೆಗೆ ಪತ್ರ ಬರೆಯಬೇಕು. ಇಲಾಖೆ ಅನುಮತಿ ಕೊಟ್ರೆ ಮಾತ್ರ ಶುಲ್ಕ ಹೆಚ್ಚಳ ಮಾಡಬಹುದು. ಈಗಾಗಲೇ 17 ರಾಜ್ಯಗಳಲ್ಲಿ ಶುಲ್ಕ ನಿಯಂತ್ರಣ ಕಾನೂನು ಜಾರಿಯಲ್ಲಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಕಾನೂನು ಬರಬೇಕು ಎಂದು ಪೋಷಕ ಸಮನ್ವಯ ಸಮಿತಿ ಅಧ್ಯಕ್ಷ ದಯಾನಂದ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು ಪೊಲೀಸರಿಗೆ ಸವಾಲ್ ಆದ ಇ-ಮೇಲ್ ಹುಸಿ ಬಾಂಬ್ ಕೇಸ್; ಕ್ಲ್ಯೂ ಸಿಗದೆ ಖಾಕಿ ಕಂಗಾಲು
ಇನ್ನೂ ಖಾಸಗಿ ಶಾಲೆಗಳಿಗೆ ಶೇ.10-15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಶಾಲಾ ಸಂಘಗಳು ಸೂಚಿಸಿದ್ದರೂ ನಗರದ ಹಲವು ಶಾಲೆಗಳು ಅದನ್ನು ಪಾಲಿಸಿಲ್ಲ. ಎಲ್ಲಾ ವರ್ಗದ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಕಂಡುಬರುತ್ತಿದೆ. ಇನ್ನು ಈ ವರ್ಷ ಜನವರಿ 5 ರಂದು ಹೈಕೋರ್ಟ್ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳವನ್ನು ಸರ್ಕಾರ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಕರ್ನಾಟಕ ಶಿಕ್ಷಣ ಕಾಯಿದೆ, 1983 ರಲ್ಲಿ ಹಲವಾರು ನಿಬಂಧನೆಗಳನ್ನು ಹೊಂದಿದೆ, ಅದರ ಅಡಿಯಲ್ಲಿ ಸರ್ಕಾರ, ಶುಲ್ಕಗಳು ಮತ್ತು ಮಕ್ಕಳ ಸುರಕ್ಷತಾ ಮಾನದಂಡಗಳನ್ನು ಸಂವಿಧಾನಿಕವಾಗಿ ಸೂಚಿಸಬಹುದು ಎಂದು ಹೈಕೋರ್ಟ್ ಹೇಳಿತ್ತು. ಇನ್ನು ಶುಲ್ಕ ಹೆಚ್ಚಳಾತಿಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅನಿವಾರ್ಯತೆ ಸೃಷ್ಠಿಸುತ್ತಿದೆ. ನೀರು, ಕರೆಂಟ್ ಬಿಲ್, ಟ್ಯಾಕ್ಸ್ ಸೇರಿದಂತೆ ವಿವಿಧ ನೊಂದಣಿಗಳಿಗೆ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ ಇನ್ನೊಂದೆಡೆಗೆ ಹೆಚ್ಚು ಹೆಚ್ಚು ಶಾಲೆಗಳಿಗೆ ಅನುಮತಿ ನೀಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತದೆ ಮತ್ತು ನಿರ್ವಹಣೆಗೆ ಹೆಚ್ಚಿನ ಖರ್ಚಾಗುತ್ತಿದೆ ಇದರಿಂದ ನೈಸರ್ಗಿಕವಾಗಿ ಶುಲ್ಕ ಹೆಚ್ಚಳವಾಗುತ್ತದೆ ಇದು ಮಕ್ಕಳ ಪಾಲಕ, ಪೋಷಕರಿಗೂ ಹೊರೆ ಆಗುತ್ತದೆ. ಪ್ರತಿ ವರ್ಷ 10 % ರಿಂದ 15 % ಶುಲ್ಕ ಏರಿಕೆ ಅನಿವಾರ್ಯ ನಾವು ಈ ವರ್ಷ ಈ ರೀತಿಯಲ್ಲಿ ಶುಲ್ಕ ಏರಿಕೆ ಮಾಡ್ತೀವೆ ಆದ್ರೆ 30% ರಿಂದ 40 ಶುಲ್ಕ ಏರಿಕೆ ಮಾಡುವುದು ತಪ್ಪು ಎನ್ನುತ್ತಾರೆ ಕ‌್ಯಾಮ್ಸ್ ಶಾಲಾ ಸಂಘಟನೆ ಅಧ್ಯಕ್ಷ ಶಶಿ ಕುಮಾರ್.
ನೀರಿನ ಅಭಾವ, ಶಾಲೆ ರೀ ಓಪನ್ ದಿನಾಂಕ ಮುಂದೂಡಿಕೆ
ಬೇಸಿಗೆ ರಜೆ ಕಳೆದು ಶಾಲೆಗಳು ಆರಂಭವಾಗಬೇಕಿರೋ ಹೊತ್ತಲ್ಲೇ ಸಿಲಿಕಾನ್ ಸಿಟಿಯ ಖಾಸಗಿ ಶಾಲೆಯೊಂದಕ್ಕೆ ನೀರಿನ ಅಭಾವ ಎದುರಾಗಿದೆ. ಗಿರಿನಗರದ ವಿಜಯಭಾರತಿ ವಿದ್ಯಾಲಯದಲ್ಲಿ ನೀರಿನ ವ್ಯವಸ್ಥೆ ಸರಿಪಡಿಸೋದಕ್ಕಾಗಿ ಶಾಲೆ ರೀ ಓಪನ್ ದಿನಾಂಕವನ್ನೇ ಮುಂದೂಡಲಾಗಿದೆ. ಶಾಲೆಯಲ್ಲಿ ನೀರಿನ ಸಮಸ್ಯೆ ಇರೋದರಿಂದ ಮೇ 22ಕ್ಕೆ ಆರಂಭವಾಗಬೇಕಿದ್ದ ತರಗತಿಗಳನ್ನ ಮೇ 27ಕ್ಕೆ ಮುಂದೂಡಲಾಗಿದೆ ಎಂದು ಪೋಷಕರಿಗೆ ವಾಟ್ಸಾಪ್ ಗ್ರೂಪ್ ನಲ್ಲಿ ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಇತ್ತ ನೀರಿನ ಸಮಸ್ಯೆ ಬಗ್ಗೆ ಸ್ಪಷ್ಟನೆ ನೀಡಿರೋ ಶಾಲಾ ಆಡಳಿತ ಮಂಡಳಿ, ಬೇಸಿಗೆ ವೇಳೆ ಬೋರ್ ವೆಲ್ ಬತ್ತಿಹೋಗಿತ್ತು, ಸದ್ಯ ಶಾಲೆ ಆವರಣದಲ್ಲಿ ದೊಡ್ಡ ಸಂಪ್ ನಿರ್ಮಾಣವಾಗ್ತಿದೆ, ಎಲೆಕ್ಷನ್ ವೇಳೆ ಮತಗಟ್ಟೆ ಇದ್ದಿದ್ದರಿಂದ ಕೆಲಸ ತಡವಾಗಿದೆ ಎಂದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:48 am, Sat, 18 May 24