ಬೆಂಗಳೂರಿನಲ್ಲಿಂದು RCB vs CSK ಪಂದ್ಯ: ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ, ಎಲ್ಲೆಲ್ಲಿ ಅವಕಾಶ? ಇಲ್ಲಿದೆ ಮಾಹಿತಿ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಪಂದ್ಯ ಹೈವೋಲ್ಟೇಜ್ ನಡೆಯಲಿದೆ. ಹೀಗಾಗಿ ನಗರದ ಹಲವು ಕಡೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ. ವಿವರ ಇಲ್ಲಿದೆ.
ಬೆಂಗಳೂರು, ಮೇ 17: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಟೂರ್ನಿಯಲ್ಲಿ ಇಂದು (ಶನಿವಾರ ಮೇ 17) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ಕಿಂಗ್ಸ್ (CSK) ಸೆಣಸಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಪಂದ್ಯ ನಡೆಯಲಿದ್ದು, ಸಂಚಾರ ದಟ್ಟಣೆ ಮತ್ತು ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಪಂದ್ಯಕ್ಕೆ ತೆರಳುವವರ ವಾಹನ ಪಾರ್ಕಿಂಗ್ಗೆ ಎಲ್ಲೆಲ್ಲಿ ಅವಕಾಶವಿದೆ? ಎಲ್ಲೆಲ್ಲಿ ವಾಹನ ನಿಲುಗಡೆಗೆ ನಿಷೇಧವಿದೆ ಮತ್ತು ಎಲ್ಲೆಲ್ಲಿ ವಾಹನ ಸಂಚಾರ ನಿಷೇಧವನ್ನು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಪಾರ್ಕಿಂಗ್ ನಿಷೇಧ
ಶನಿವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ, ಮ್ಯೂಸಿಯಂ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ಕಸ್ತೂರಿ ಬಾ ರೋಡ್, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ, ನೃಪತುಂಗ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.
ಇದನ್ನೂ ಓದಿ: ಇಂದು ಬೆಂಗಳೂರಿನಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯ: ಸಂಜೆ ವೇಳೆ ಹವಾಮಾನ ಹೇಗಿರಲಿದೆ?
ಪಾರ್ಕಿಂಗ್ಗೆ ಅವಕಾಶ
ಪಂದ್ಯ ನೋಡಲು ಆಗಮಿಸುವ ಜನರಿಗೆ ಬೇರೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ, ಕಿಂಗ್ಸ್ ರಸ್ತೆ, ಶಿವಾಜಿನಗರ ಬಸ್ ನಿಲ್ದಾಣ ಮೊದಲನೇ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೆಂಗಳೂರು ಸಂಚಾರಿ ಪೊಲೀಸರು ಮೈದಾನದ ಸುತ್ತಮುತ್ತ ಸಂಚಾರ ವಾಹನ ನಿಷೇಧಿಸಿದ್ದಾರೆ.
ಬಿಗಿ ಭದ್ರತೆ
ಪಂದ್ಯಕ್ಕಾಗಿ ಓರ್ವ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೂವರು ಡಿಸಿಪಿ, 20 ಎಸಿಪಿ, 50 ಇನ್ಸ್ಪೆಕ್ಟರ್ ಸೇರಿದಂತೆ ಒಂದು ಸಾವಿರ ಸಿವಿಲ್ ಪೊಲೀಸರನ್ನು ನಿಯೋಜಿಸಲಾಗಿದೆ. ಓರ್ವ ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತರು, ಇಬ್ಬರು ಟ್ರಾಫಿಕ್ ಡಿಸಿಪಿ, ಸೇರಿ 200 ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಟೇಡಿಯಂ ಸುತ್ತಮುತ್ತ ಮಫ್ತಿಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:32 am, Sat, 18 May 24