ಬೆಂಗಳೂರು, ಜನವರಿ 21: ತೆರಿಗೆ ಬಾಕಿದಾರರ ಆಸ್ತಿ ಹರಾಜಿಗೆ (property tax) ಬಿಬಿಎಂಪಿ ಮುಂದಾಗಿದೆ. ಆ ಮೂಲಕ ದೀರ್ಘಕಾಲ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಪಾಲಿಕೆ ಶಾಕ್ ನೀಡಿದೆ. ಮುಂದಿನ ವಾರದಿಂದ ಒಂದೊಂದು ವಲಯದಲ್ಲಿ ಹರಾಜು ನಡೆಯಲಿದ್ದು, ಈ ಕುರಿತು ಬಿಬಿಎಂಪಿಯ ಕಂದಾಯ ವಿಭಾಗದಿಂದ ಆದೇಶ ಹೊರಡಿಸಲಾಗಿದೆ. ಜೊತೆಗೆ ಬಾಕಿದಾರರು ಶೀಘ್ರ ಬಾಕಿ ತೆರಿಗೆ ಪಾವತಿಸಲು ಸೂಚಿಸಲಾಗಿದೆ.
ಹಲವು ಬಾರಿ ನೋಟಿಸ್ ನೀಡಿದರೂ ಪಾವತಿಸಲು ಬಾಕಿದಾರರ ಹಿಂದೇಟು ಹಾಕಿದ್ದಾರೆ. ಹಾಗಾಗಿ ಸ್ಥಿರಾಸ್ತಿಗಳನ್ನ ಮಾರಾಟ ಮಾಡಿ ತೆರಿಗೆ ಬಾಕಿ ಜಮಾಗೆ ಬಿಬಿಎಂಪಿ ಪ್ಲ್ಯಾನ್ ಮಾಡಿದೆ. ಹರಾಜಿನಲ್ಲಿ ಬಂದ ಹಣದಿಂದ ತೆರಿಗೆ ವಸೂಲಿಗೆ ತಯಾರಿ ಮಾಡಲಾಗಿದೆ. ತೆರಿಗೆ ಪಾವತಿಸದ 2 ಲಕ್ಷ ಆಸ್ತಿಗಳನ್ನು ಈಗಾಗಲೇ ಪಾಲಿಕೆ ಗುರುತಿಸಿದೆ.
ಇದನ್ನೂ ಓದಿ: ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಒಟಿಎಸ್ಗೆ ಎರಡು ದಿನ ಬಾಕಿ: ಡಿ 1ರಿಂದ ದುಪ್ಪಟ್ಟು ದಂಡ ವಸೂಲಿ ಎಚ್ಚರಿಕೆ
ಬೆಂಗಳೂರಿನಲ್ಲಿ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟದೇ ಕಳ್ಳಾಟವಾಡುತ್ತಿದ್ದವರ ವಿರುದ್ಧ ಪಾಲಿಕೆ ಇತ್ತೀಚೆಗೆ ಸಮರ ಸಾರಿತ್ತು. ಇದಾದ ಬಳಿಕವೂ ಬಾಕಿದಾರರು ಎಚ್ಚೆತ್ತುಕೊಂಡಿಲ್ಲ. ಇತ್ತ ಕಳೆದ ಎರಡ್ಮೂರು ತಿಂಗಳ ಹಿಂದೆ ಒಂದಷ್ಟು ತೆರಿಗೆದಾರರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದ ಪಾಲಿಕೆ, ಬಳಿಕ ಡಿಸಿಎಂ ಸೂಚನೆಯಂತೆ ಒನ್ ಟೈಮ್ ಸೆಟಲ್ ಮೆಂಟ್ಗೆ ಅವಕಾಶ ಕೊಟ್ಟಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ರ ಆಸ್ತಿ ತೆರಿಗೆ ಸಂಗ್ರಹ ಗುರಿ ಶೇಕಡಾ 83 ರಷ್ಟು ಸಾಧಿಸಿದೆ. ಇನ್ನೂ ಎರಡೂವರೆ ತಿಂಗಳುಗಳು ಬಾಕಿ ಉಳಿದಿದೆ. ಬಿಬಿಎಂಪಿಯು ಈ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ 5,210 ಕೋಟಿ ರೂ. ಗುರಿಯನ್ನು ಹೊಂದಿತ್ತು. ಆದರೆ ಈಗಾಗಲೇ 4,370 ಕೋಟಿ ರೂ. ಸಂಗ್ರಹಿಸಿದೆ.
ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಒಟಿಎಸ್ ಗಡವು ಅಂತ್ಯ: ಬಿಬಿಎಂಪಿಯಿಂದ ಹರಾಜಿಗೆ ಸಿದ್ಧತೆ
ನವೆಂಬರ್ ಅಂತ್ಯದಲ್ಲಿ ಮುಕ್ತಾಯಗೊಂಡ ಒನ್-ಟೈಮ್ ಸೆಟ್ಲ್‌ಮೆಂಟ್ (OTS) ಯೋಜನೆಯ ಯಶಸ್ವಿ ಅನುಷ್ಠಾನವೇ ಇಷ್ಟೊಂದು ತೆರಿಗೆ ಸಂಗ್ರಹವಾಗಲು ಕಾರಣ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದರು. ದೀರ್ಘಾವಧಿ ಬಾಕಿ ಉಳಿದಿರುವ ತೆರಿಗೆದಾರರನ್ನು ಗುರುತಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 pm, Tue, 21 January 25