
ಬೆಂಗಳೂರು, ಅಕ್ಟೋಬರ್ 11: ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ (Bengaluru) ರಾತ್ರಿ ವೇಳೆ ಮಳೆ ಅಬ್ಬರಿಸುತ್ತಿದೆ. ಶುಕ್ರವಾರ ರಾತ್ರಿಯೂ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ರಾತ್ರಿ 10 ಗಂಟೆಗೆ ಶುರುವಾಗಿ 12ಗಂಟೆಯವರೆಗೂ ಸುರಿದ ಮಳೆ ನಂತರ ಕೆಲಕಾಲ ಬಿಡುವು ಕೊಟ್ಟಿತ್ತು. ಬಳಿಕ ಮತ್ತೆ ರಾತ್ರಿ 2 ಗಂಟೆಯಿಂದ ನಸುಕಿನ ಜಾವದ ವರೆಗೂ ಸುರಿದಿದೆ. ನಗರದ ಪ್ರಮುಖ ರಸ್ತೆಗಳು, ತಗ್ಗುಪ್ರದೇಶಗಳು ಜಲಾವೃತವಾಗಿ ಜನ ಪರದಾಡಿದ್ದಾರೆ.
ಭಾರಿ ಮಳೆಯಿಂದಾಗಿ ಬೆಂಗಳೂರು ಹೃದಯಭಾಗ ಕೆಆರ್ ಮಾರ್ಕೆಟ್‌ನ ರಸ್ತೆ ಜಲಾವೃತವಾಯಿತು. ಹಳ್ಳಗಳಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ಮಳೆಯಿಂದಾಗಿ ರಿಚ್ಮಂಡ್ ರಸ್ತೆಯೂ ನದಿಯಂತೆ ಬದಲಾಗಿತ್ತು. ರಸ್ತೆಯಲ್ಲಿ 2 ಅಡಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು. ಶಾಂತಿನಗರದ ರಿಚ್ಮಂಡ್‌ಟೌನ್‌ನಲ್ಲೂ ವರುಣಾರ್ಭಟದಿಂದಾಗಿ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ವಿಕ್ಟೋರಿಯಾ ರಸ್ತೆಯಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಪರದಾಡುವಂತಾಯಿರು. ಹೆಚ್‌ಎಎಲ್‌ನ ರಸ್ತೆಯ ವಿಕ್ಟೋರಿಯಾ ರೋಡ್‌ನಲ್ಲಿ ಮಳೆಯಿಂದ ಅವಾಂತರವೇ ಸೃಷ್ಟಿಯಾಗಿತ್ತು. ರಸ್ತೆ ತುಂಬ ನೀರು ತುಂಬಿಕೊಂಡಿದ್ದರಿಂದ ವಾಹನಗಳು ಚಲಿಸಲಾಗದೆ ಕೆಟ್ಟು ನಿಲ್ಲುತ್ತಿದ್ದ ದೃಶ್ಯ ಕಂಡುಬಂತು.
ಇದು ಕೆಆರ್ ಪುರಂನ ಭೀಮಯ್ಯ ಲೇಔಟ್‌ನಲ್ಲಿ ಇಡೀ ಏರಿಯಾದ ಬೀದಿಗಳಿಗೆ ನೀರು ನುಗ್ಗಿದೆ. ಮನೆಯ ಕಾಂಪೌಂಡ್ಗಳು ಜಲಾವೃತಗೊಂಡಿವೆ. ರಾಜಕಾಲುವೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ರಾತ್ರಿ ಸುರಿದ ಮಳೆಯಿಂದ ಭೀಮಯ್ಯ ಲೇಔಟ್‌ನ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಕೆಲ ಮನೆಗಳ ಸಂಪ್‌ಗಳಿಗೆ ಕೊಳಚೆ ನೀರು ನುಗ್ಗಿ ನಿವಾಸಿಗಳು ರಾತ್ರಿಯಿಡೀ ಪರದಾಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲೂ ಮಳೆಯಿಂದಾಗಿ ರಸ್ತೆ ಮುಳುಗಡೆಯಾಯಿತು. ಚರಂಡಿ ನೀರು ರಸ್ತೆ ಮೇಲೆ ಉಕ್ಕಿ ಹರಿಯಿತು. ರಸ್ತೆಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಚಾಲಕರು ಎದ್ದುಬಿದ್ದು ಸವಾರಿ ಮಾಡುವಂತಾಯಿತು
ವರ್ತೂರು ಬಳಿಯ ಬಳಗೆರೆ ರಸ್ತೆಗೆ ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ ಖುದ್ದು ಭೇಟಿ ನೀಡಿ ಗುಂಡಿಗಳ ಅವ್ಯವಸ್ಥೆ ಪರಿಶೀಲಿಸಿದ್ದರು. ಆದರೆ ಸಿಎಂ ಬಂದುಹೋದರೂ ಕಾಮಗಾರಿಯಾಗಿಲ್ಲ. ಶುಕ್ರವಾರ ರಾತ್ರಿ ಸುರಿದ ಮಳೆಗೆ ಬಳಗೆರೆ ರಸ್ತೆಸಂಪೂರ್ಣ ಜಲಾವೃತವಾಯಿತು.
ಇದನ್ನೂ ಓದಿ: ನಾಳೆಯ ಹವಾಮಾನ: ರಾಜ್ಯದ 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಬೆಂಗಳೂರಲ್ಲೂ ಮಳೆ
ಇನ್ನು ಹುಸ್ಕೂರು ಮುಖ್ಯರಸ್ತೆ, ಸರ್ಜಾಪುರ ರಸ್ತೆಯ ವಿಪ್ರೋ ರೋಡ್ ಕೂಡ ಸಂಪೂರ್ಣ ನೀರಿನಿಂದ ಆವೃತವಾಗಿ ವಾಹನ ಚಾಲಕರು ಪಾಡು ಹೇಳತೀರದಾಗಿತ್ತು. ವರ್ತೂರಿನ ಸಿದ್ದಾಪುರದಲ್ಲೂ ರಣ ಮಳೆ ತಾಪತ್ರಯಗಳನ್ನು ತಂದಿಟ್ಟಿದೆ. ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನಗಳು ಚಲಿಸದ ಸ್ಥಿತಿ ಸೃಷ್ಟಿಯಾಗಿತ್ತು. ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡಿದರು.
ಪ್ರತಿಬಾರಿಯಂತೆ ಈ ಬಾರಿಯೂ ಮಾನ್ಯತಾ ಟೆಕ್‌ಪಾರ್ಕ್‌ನ ರಸ್ತೆ ಮಳೆಗೆ ಮುಳುಗಿಹೋಗಿತ್ತು. ಮತ್ತೊಂದೆಡೆ ನಾಗರಬಾವಿಯಲ್ಲಿ ಭಾರಿ ಮಳೆಯಿಂದಾಗಿ ಮರವೊಂದು ರಸ್ತೆ ಮಧ್ಯೆ ಬುಡಮೇಲಾಗಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಬೆಂಗಳೂರಿನಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 13 ರ ವರೆಗೂ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ಹೀಗಾಗಿ ರಾಜಧಾನಿಗೆ ಇನ್ನು ಏನೇನು ಜಲಕಂಟಕ ಎದರಾಗುತ್ತದೆಯೋ ಕಾದುನೋಡಬೇಕಿದೆ.
Published On - 7:02 am, Sat, 11 October 25