ಬೆಂಗಳೂರು: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ (Mandous cyclone) ಅಬ್ಬರದ ಪರಿಣಾಮವಾಗಿ ಬೆಂಗಳೂರು (Bangalore Rains) ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಶುಕ್ರವಾರ ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ತುಂತುರು ಮಳೆ ಶುರುವಾಗಿದ್ದು, ವಿಪರೀತ ಚಳಿಯೂ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ 3 ದಿನ ಮಳೆಯಾಗುವ ಸಾಧ್ಯತೆಯಿದೆ. ಇಂದು ಮತ್ತು ನಾಳೆ ಬೆಂಗಳೂರು ನಗರದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ. ಮಳೆಯಿಂದಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಾಂಡೌಸ್ ಚಂಡಮಾರುತದಿಂದಾಗಿ ಚಳಿಯ ವಾತಾವರಣವು ಕರ್ನಾಟಕದಲ್ಲಿ ಭಾನುವಾರದವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ದಕ್ಷಿಣ ಮತ್ತು ಕರಾವಳಿ ಕರ್ನಾಟಕದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಶುಕ್ರವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 21.6 ಡಿಗ್ರಿ ದಾಖಲಾಗಿತ್ತು. ಇದು ಕಳೆದ ವಾರದಲ್ಲಿ ವರದಿಯಾದ 26-28 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ. ಚಂಡಮಾರುತದಿಂದ ಚಳಿ, ಬಿರುಗಾಳಿ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಬೆಂಗಳೂರಿನಲ್ಲಿ ವಿಪರೀತ ಚಳಿಯ ವಾತಾವರಣವಿದೆ. ಶುಕ್ರವಾರ ಸಂಜೆ 7 ಗಂಟೆಯ ಹೊತ್ತಿಗೆ ಚಂಡಮಾರುತವು ಚೆನ್ನೈ ಕರಾವಳಿಗೆ ಸಮೀಪಿಸಿದ್ದು, ಅಲ್ಲಿ ತೀವ್ರ ಮಳೆಯಾಗಿದೆ.
ಇದನ್ನೂ ಓದಿ: Cyclone Mandous: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ ಭೀತಿ; ಚೆನ್ನೈನ 16 ವಿಮಾನಗಳ ಹಾರಾಟ ರದ್ದು
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮಾಂಡೌಸ್ ಚಂಡಮಾರುತ ಅಬ್ಬರಿಸುತ್ತಿದೆ. ಕರ್ನಾಟಕದ ದಕ್ಷಿಣ ಒಳನಾಡಿಗೆ ಇಂದು, ನಾಳೆ ಗುಡುಗು ಸಹಿತ ಮಳೆ ಪ್ರವೇಶಿಸುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯ ಮುನ್ಸೂಚನೆಯಿದೆ. ಬೆಂಗಳೂರು ಮಾತ್ರವಲ್ಲದೆ ಕೋಲಾರ, ರಾಮನಗರ, ತುಮಕೂರಿನಲ್ಲಿ ಮಳೆ ಹೆಚ್ಚಾಗಿದೆ. ಕೋಲಾರದಲ್ಲಿ ನಿನ್ನೆ ರಾತ್ರಿಯಿಂದ ಶೀತಗಾಳಿ ಸಹಿತ ಜಡಿ ಮಳೆ ಸುರಿಯುತ್ತಿದೆ. ರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಮತ್ತು ಗಾಳಿಯಿಂದ ಹೊರಬರಲು ಜನ ಹೆದರುವಂತಾಗಿದೆ. ಅಕಾಲಿಕ ಮಳೆಯಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಕಟಾವಿಗೆ ಬಂದ ಧಾನ್ಯಗಳಿಗೆ, ತೋಟಗಾರಿಕಾ ಬೆಳೆಗಳು ಹಾನಿಯಾಗುವ ಸಾಧ್ಯತೆಯಿದೆ.
Kolar, Chikkaballapura, Tumakuru, #Bengaluru Rural & Urban districts & Rayalaseema likely to get good rains once the system moves inland after the landfall as per most models currently. Let’s wait for the LF to begin midnight#BengaluruRains #KarnatakaRains #BangaloreRains
— ಕರ್ನಾಟಕ/ಬೆಂಗಳೂರು ಹವಾಮಾನ (@Bnglrweatherman) December 9, 2022
ರಾಮನಗರ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ರಾಮನಗರದಲ್ಲಿ ಇಂದು ಮುಂಜಾನೆಯಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Cyclone Mandous: ಮಾಂಡೌಸ್ ಚಂಡಮಾರುತದ ಅಬ್ಬರ; ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಮಳೆ, ಭೂಕುಸಿತ
ತುಮಕೂರು ಜಿಲ್ಲಾದ್ಯಂತ ಜಿಟಿಜಿಟಿ ಮಳೆ ಆರಂಭವಾಗಿದೆ. ಇಂದು ಬೆಳಗಿನ ಜಾವದಿಂದ ಮಳೆ ಆರಂಭವಾಗಿದ್ದು, ಜಿಟಿ ಜಿಟಿ ಮಳೆಯ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಕಿರಿಕಿರಿ ಎದುರಾಗಿದೆ. ಸಣ್ಣದಾಗಿ ಸುರಿಯುತ್ತಿರುವ ಮಳೆಯಿಂದ ತುಮಕೂರಿನ ಜನರು ಹೈರಾಣಾಗಿದ್ದಾರೆ.
ಬೀದರ್, ಬಾಗಲಕೋಟೆ, ವಿಜಯಪುರ, ರಾಯಚೂರು ಮತ್ತು ಗದಗ ಜಿಲ್ಲೆಗಳಲ್ಲಿ ಕಡಿಮೆ ತಾಪಮಾನ ವರದಿಯಾಗಿದೆ. ಇಂದು ಬೆಂಗಳೂರು, ಕೋಲಾರ, ಚಿಕ್ಕಮಗಳೂರು ಮತ್ತು ಘಟ್ಟ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದ್ದು, ಒಂದೆರಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಭಾನುವಾರ ಈ ವಾಯುಭಾರ ಕುಸಿತವು ಕರ್ನಾಟಕದ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಇದರಿಂದಾಗಿ ಅಲ್ಲಿಯೂ ಮಳೆಯಾಗುತ್ತದೆ.
Published On - 9:31 am, Sat, 10 December 22