ಬೆಂಗಳೂರು, ಅಕ್ಟೋಬರ್ 17: ಕಳೆದ ಎರಡ್ಮೂರು ದಿನಗಳಿಂದ ಬೆಂಗಳೂರು (Bengaluru) ಮಹಾನಗರದಲ್ಲಿ ಮಳೆಯಾಗುತ್ತಿದೆ (Rain). ಬೆಂಗಳೂರು ಅಕ್ಷರಶಃ ಮಲೆನಾಡಿನಂತೆ ಭಾಸವಾಗುತ್ತಿದೆ. ಮಳೆಯಿಂದ ನಗರದಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ರಸ್ತೆ ಗುಂಡಿಗಳಲ್ಲಿ ನೀರು ನಿಂತಿದೆ. ಇನ್ನು ಕೆಲವು ರಸ್ತೆಗಳಲ್ಲಿ ಮೊಣಕಾಲಿನವರೆಗೆ ನೀರು ನಿಂತಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ. ಕೆಲವು ಕಡೆ ಗಟಾರು ತುಂಬಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಮೇಲ್ಸೇತುಗಳ ಮೇಲೆ ನಿಂತ ನೀರು ಧಾರಾಕಾರವಾಗಿ ಕೆಳೆಗೆ ಬೀಳುತ್ತಿದೆ. ಮೇಲ್ಸೇತುವೆ ಜಲಪಾತದಂತೆ ಕಾಣುತ್ತಿವೆ.
ಈ ಎಲ್ಲ ತೊಂದರೆಗಳಿಂದ ಬೆಂಗಳೂರು ಜನರು ರೋಸಿ ಹೋಗಿದ್ದಾರೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿ ಎಂದು ಜನರು ಬಿಬಿಎಂಪಿಗೆ ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೋಸಿ ಹೋದ ಜನರು ಇದೀಗ ಸಾಮಾಜಿ ಮಾಧ್ಯಮ ಎಕ್ಸ್ ಮುಖಾಂತರ ವಿಭಿನ್ನವಾಗಿ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರೆ. ಮಳೆ ಅವಾಂತರದ ಬಗ್ಗೆ ಬಗೆ ಬಗೆಯ ಕವನ ಬರೆದು ಬಿಬಿಎಂಪಿಯನ್ನು ವ್ಯಂಗ್ಯವಾಗಿ ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ: ರಸ್ತೆಯೊಳಗೆ ಗುಂಡಿಯೋ, ಗುಂಡಿಯೊಳಗೆ ರಸ್ತೆಯೋ?
#ಬಿಬಿಎಂಪಿ ಟ್ಯಾಗ್ ಬಳಸಿ ಕವನಗಳನ್ನು ಪೋಸ್ಟ್ ಹಾಕಿ ಪಾಲಿಕೆಗೆ ಜನರು ಛೀಮಾರಿ ಹಾಕಿದ್ದಾರೆ. “ಅನಿಸುತಿದೆ ಯಾಕೊ ಇಂದು, ಮಳೆಯಲಿ ಒದ್ದಾಟವೆಂದು, ನೀರಿನ ಲೋಕದಿಂದ, ಜಲಪಾತವಾಗಿ ಬಂತೆಂದು, ಆಹಾ ಎಂತಾ ನರಕ ಯಾತನೆ, ಕೊಲ್ಲಿ ಬಿಬಿಎಂಪಿ ಯಾವಾಗಲೂ ನಮ್ಮನ್ನ ಬರೀ ನೀರಿಂದಲೇ.” ಎಂದು ವರುಣ್ ರಾವ್ ಎಂಬುವರು ಟ್ವೀಟ್ ಮಾಡಿದ್ದಾರೆ.
ನಿರಂತರ ಮಳೆಗೆ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಜಲಾವೃತವಾಗಿ, ನಿವಾಸಿಗಳು ಪರದಾಡಿದರು. ನಿವಾಸಿಗಳು ಮಕ್ಕಳನ್ನು ಎತ್ತಿಕೊಂಡು ಟ್ರ್ಯಾಕ್ಟರ್ನಲ್ಲಿ ಸುರಕ್ಷಿತ ಸ್ಥಳಕ್ಕೆ ಹೋದರು. ಪ್ರತಿ ಬಾರಿ ಮಳೆ ಬಂದಾಗ ಕೆರೆಯಂತಾಗೋ ಅಪಾರ್ಟ್ಮೆಂಟ್ ಕೆರೆಯಂತೆ ಆಗುತ್ತದೆ.
ಮಳೆ ಬರುತ್ತಿದ್ದಂತೆ ರಾಜಕಾಲುವೆ ಉಕ್ಕಿಹರಿದು ನೀರು ಯಲಹಂಕದ ನಾರ್ತ್ ವುಡ್ ವಿಲ್ಲಾ ಮೆಂಟ್ ಒಳಗೆ ನುಗ್ಗಿತು. ಪ್ರತಿಬಾರಿ ಮಳೆ ಬಂದಾಗಲೂ ಈ ಸಮಸ್ಯೆ ಉದ್ಭವಿಸುತ್ತಿದ್ದು, ಶಾಶ್ವತ ಪರಿಹಾರ ಸಿಗುತ್ತಿಲ್ಲ ಅಂತ ನಿವಾಸಿಗಳು ಆಕ್ರೋಶ ಹೊರಹಾಕಿದ್ದರು.
ಐಟಿ ಹಬ್ ಮಾನ್ಯತ ಟೆಕ್ ಪಾರ್ಕ್ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಳೆಗೆ ಜಲಪಾತಗಳಂತೆ ನೀರು ಧುಮಿಕ್ಕಿತ್ತು. ಈ ನಗರಗಳಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭೂಕುಸಿತ ಉಂಟಾಗಿತ್ತು.
ಒಂದೆರಡು ದಿನದ ನಿರಂತರ ಮಳೆಗೆ ರಾಜಧಾನಿಯಲ್ಲಿ ಹಲವು ಅವಾಂತರ ಸೃಷ್ಟಿಯಾಗಿದೆ. ಇನ್ನೂ ಮೂರು ದಿನಗಳ ಕಾಲ ರಾಜ್ಯ ಸೇರಿದಂತೆ ರಾಜಧಾನಿಯಲ್ಲೂ ಮಳೆರಾಯನ ಅಬ್ಬರ ಇರುತ್ತೆ ಅಂತ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದರಿಂದ ಮಳೆರಾಯ ಮತ್ತೆ ಯಾವ ಅವಾಂತರ ಸೃಷ್ಟಿಸುತ್ತಾನೆ ಅಂತ ಜನರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:37 am, Thu, 17 October 24