ಬೆಂಗಳೂರು, ಮೇ 9: ಬೆಂಗಳೂರಿನಲ್ಲಿ ನೀರು ನಿರ್ವಹಣೆ ಮತ್ತು ಪ್ರವಾಹ ಪರಿಸ್ಥಿತಿ ಕಡಿಮೆ ಮಾಡುವ ಉಪಕ್ರಮಗಳಿಗೆ 3,000 ಕೋಟಿ ರೂ. ಸಾಲದ ರೂಪದ ಅನುದಾನ ನೀಡಲು ವಿಶ್ವಬ್ಯಾಂಕ್ ಮುಂದೆ ಬಂದಿದೆ. ಈ ಕುರಿತ ಪ್ರಸ್ತಾವನೆಗೆ ಸುಮಾರು ಒಂದು ತಿಂಗಳ ಹಿಂದೆ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಗ್ರೀನ್ ಸಿಗ್ನಲ್ ನೀಡಿದ್ದು, ಮುಂದಿನ ಹಂತಗಳ ಬಗ್ಗೆ ಬಿಬಿಎಂಪಿ ಇತ್ತೀಚೆಗೆ ವಿಶ್ವಬ್ಯಾಂಕ್ ಪ್ರತಿನಿಧಿಗಳೊಂದಿಗೆ ಮೊದಲ ಸಭೆ ನಡೆಸಿದೆ. ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಾಲದ ಮೊತ್ತವನ್ನು ಕ್ರಮವಾಗಿ 2,000 ಕೋಟಿ ಮತ್ತು 1,000 ಕೋಟಿ ರೂ. ಆಗಿ ಹಂಚಿಕೊಳ್ಳಲಿದೆ.
ಸಾಲದ ಮೊತ್ತದ ನೆರವಿನೊಂದಿಗೆ ಬಿಬಿಎಂಪಿಯು 173 ಕಿಲೋಮೀಟರ್ ವ್ಯಾಪ್ತಿಯಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ಬಾಹ್ಯ ಪ್ರದೇಶಗಳಲ್ಲಿ ಮಳೆನೀರಿನ ಚರಂಡಿಗಳನ್ನು ನಿರ್ಮಾಣ ಮಾಡಲು ಯೋಜಿಸಿದೆ. ಕೋರಮಂಗಲ ವ್ಯಾಲಿ ವಾಟರ್ವೇಯನ್ನು ದಕ್ಷಿಣ ಪಿನಾಕಿನಿ ನದಿಯೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಯೋಜನೆಯನ್ನು ವಿಸ್ತರಿಸಲಿದೆ.
ಏತನ್ಮಧ್ಯೆ, ಜಲ ಮಂಡಳಿಯು ಹೊಸ ಒಳಚರಂಡಿ ಜಾಲಗಳು ಮತ್ತು ಕೊಳಚೆನೀರಿನ ಸಂಸ್ಕರಣಾ ಘಟಕಗಳನ್ನು ರಚಿಸಲು ತಮ್ಮ ನಿಯೋಜಿತ ಹಣವನ್ನು ಬಳಸಿಕೊಳ್ಳಲಿದೆ.
ಜಲ ಮಂಡಳಿಯು ಈ ಹಿಂದೆ ಹಲವು ಬಾರಿ ವಿಶ್ವಬ್ಯಾಂಕ್ ನಿಧಿಯನ್ನು ಬಳಸಿಕೊಂಡಿದ್ದರೂ, ಬಿಬಿಎಂಪಿಗೆ ಇದು ಮೊದಲ ಅನುಭವವಾಗಿದೆ. ಮಾಸಾಂತ್ಯದ ವೇಳೆಗೆ ವಿಶ್ವಬ್ಯಾಂಕ್‌ನೊಂದಿಗೆ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಹಂಚಿಕೊಳ್ಳಲಾಗುವುದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ; ಮರ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಬೆನ್ನು ಮೂಳೆ ಮುರಿತ
ಎರಡು ಏಜೆನ್ಸಿಗಳಿಗೆ ಸಾಲದ ರೂಪದ ನಿಧಿಯ ಜೊತೆಗೆ ವಿಶ್ವಬ್ಯಾಂಕ್, ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ತಡೆಗಟ್ಟುವ ಯೋಜನೆಗಳಿಗಾಗಿ 2,000 ಕೋಟಿ ರೂಪಾಯಿಗಳನ್ನು ನೀಡಲಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಕರ್ನಾಟಕ ಕಂದಾಯ ಇಲಾಖೆ ವಿಶ್ವಬ್ಯಾಂಕ್ ಜತೆ ಮಾತುಕತೆ ನಡೆಸುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಹಠಾತ್ ಪ್ರವಾಹ ಪುನರಾವರ್ತನೆಯಾಗುತ್ತಿದೆ. ಇದು ಜನರ ಜೀವ ಮತ್ತು ಆಸ್ತಿಗೆ ಅಪಾಯವನ್ನುಂಟುಮಾಡುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:17 am, Thu, 9 May 24