Bengaluru Rains: ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಬಿಸಿಲ ಬೇಗೆ, ತಾಪಮಾನದಿಂದ ಕಂಗೆಟ್ಟಿದ್ದ ಬೆಂಗಳೂರು ನಗರವಾಸಿಗಳಿಗೆ ಹವಾಮಾನ ಇಲಾಖೆ ಕೊನೆಗೂ ಶುಭ ಸುದ್ದಿ ನೀಡಿದೆ. ನಗರದಲ್ಲಿ ಇನ್ನೂ 3 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಡಿಗ್ರಿ ಸೆಲ್ಸಿಯಸ್ ಮತ್ತು 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಬೆಂಗಳೂರು, ಮೇ 7: ಏಪ್ರಿಲ್ ತಿಂಗಳಿಡೀ ಬೇಸಗೆಯ ಬೇಗೆಯಿಂದ ಬಸವಳಿದಿದ್ದ ಬೆಂಗಳೂರು (Bengaluru) ಜನತೆಗೆ ಕೊನೆಗೂ ಮಳೆ ತಂಪೆರೆದಿದೆ. ಕಳೆದ ಗುರುವಾರ, ಶುಕ್ರವಾರ ಹಾಗೂ ಸೋಮವಾರ ನಗರದಲ್ಲಿ ಮಳೆಯಾಗಿದ್ದು, ವಾತಾವರಣ ತುಸು ತಣ್ಣಗಾಗಿದೆ. ಈ ಮಧ್ಯೆ, ಮೇ 10ರ ವರೆಗೂ ಬೆಂಗಳೂರಿನಲ್ಲಿ ಮಳೆಯಾಗುವ (Bengaluru Rains) ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರ ನಗರದ ಹಲವೆಡೆ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿತ್ತು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ರಾತ್ರಿ 9 ಗಂಟೆಯ ಹೊತ್ತಿಗೆ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಗರಿಷ್ಠ 39.5 ಮಿಮೀ ಮಳೆಯಾಗಿದ್ದು, ನಂತರದ ದಯಾನಂದ ನಗರದಲ್ಲಿ (32.5 ಮಿಮೀ) ಮಳೆಯಾಗಿದೆ. ನಗರದ 18 ವಾರ್ಡ್‌ಗಳಲ್ಲಿ 10 ಮಿಮೀಗೂ ಹೆಚ್ಚು ಮಳೆಯಾಗಿದೆ.
ವಲಯವಾರು ನೋಡುವುದಾದರೆ ಬೊಮ್ಮನಹಳ್ಳಿಯಲ್ಲಿ ಗರಿಷ್ಠ ಮಳೆಯಾಗಿದ್ದು, ಯಲಹಂಕದಲ್ಲಿ ಅತಿ ಕಡಿಮೆ ಮಳೆಯಾಗಿದೆ. ಮಧ್ಯಾಹ್ನದ ವೇಳೆಗೆ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ತಾಪಮಾನ ತುಲನಾತ್ಮಕವಾಗಿ ಕಡಿಮೆ ಇತ್ತು.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36.3 ಡಿಗ್ರಿ ಸೆಲ್ಸಿಯಸ್ ಇದ್ದು, ಕಳೆದ ಕೆಲವು ದಿನಗಳಲ್ಲಿ ದಾಖಲಾದ 38 ಡಿಗ್ರಿ ಸೆಲ್ಸಿಯಸ್‌ನಿಂದ ಸ್ವಲ್ಪ ಕಡಿಮೆಯಾಗಿದೆ.
ನಗರದಲ್ಲಿ ಮೇ 10 ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಡಿಗ್ರಿ ಸೆಲ್ಸಿಯಸ್ ಮತ್ತು 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಧರೆಗುರುಳಿದ 25ಕ್ಕೂ ಹೆಚ್ಚು ಮರಗಳು
ಬೆಂಗಳೂರಿನಲ್ಲಿ ಸೋಮವಾರ ಮಳೆಯ ಅಬ್ಬರ ಜೋರಾಗಿಯೇ ಇತ್ತು. ಸಂಜೆ 6 ಗಂಟೆಗೆ ಗುಡುಗು ಸಹಿತ ಸುರಿದ ಮಳೆಗೆ ನಗರದ ಹಲವು ಕಡೆ ಅವಾಂತರಗಳೇ ಆದವು. 25ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಬಿಟಿಎಂ ಲೇಔಟ್, ಯಶವಂತಪುರ, ಜಯನಗರ, ಕೋರಮಂಗಲ, ಬಸವನಗುಡಿ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಸುರಿದ ಮಳೆಗೆ ವಾಹನ ಸವಾರರು ಹೈರಾಣಾಗಿ ಹೋದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಂಪೆರೆದ ವರುಣ, ನಗರದ ವಿವಿಧೆಡೆ ಆಲಿಕಲ್ಲು ಮಳೆ
ಮಳೆಯಿಂದಾಗಿ ಕಾರು ಪಲ್ಟಿಯಾಗಿ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಜಿಎನ್ ನಂಜುಂಡಸ್ವಾಮಿ ಗಾಯಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ನಂಜುಂಡಸ್ವಾಮಿ ತಲೆಗೆ ಏಟಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 am, Tue, 7 May 24